Home ಜಿಲ್ಲೆ ಬೆಂಗಳೂರು ದೈಹಿಕ ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ

ದೈಹಿಕ ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ

ವಿಜಯಪುರ.ಪೆ೨೨-ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡೆ ಹೆಚ್ಚು ಸಹಕಾರಿಯಾಗಲಿದೆ ಎಂದು ಪ್ರಗತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ನಾಗರಾಜ್ ಹೇಳಿದರು.


ಪಟ್ಟಣದ ಪ್ರಗತಿ ಶಾಲೆಯ ಆವರಣದಲ್ಲಿ, ಪ್ರಗತಿ ಪ್ರಥಮ ದರ್ಜೆ ಕಾಲೇಜು ಹಾಗೂ ಮೇರಾ ಯುವ ಭಾರತ್, ಮೈ ಭಾರತ್ ಬೆಂಗಳೂರು ಗ್ರಾಮಾಂತರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟ-೨೦೨೬ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಒಬ್ಬ ವಿದ್ಯಾರ್ಥಿ, ಪರಿಪೂರ್ಣವಾಗಿ ಬೆಳೆಯಬೇಕೆಂದರೆ, ಪಠ್ಯಚಟುವಟಿಕೆಗಳು ಮಾತ್ರವಲ್ಲದೇ, ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯಕವಾಗಿದೆ.ಈ ನಿಟ್ಟಿನಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ, ಪ್ರತಿನಿತ್ಯ ಚಟುವಟಿಕೆಯಿಂದ ಇರುವುದಕ್ಕೆ ಹೆಚ್ಚು ಸಹಕಾರಿಯಾಗಲಿದೆ ಎಂದರು.


ಮೇರಾ ಯುವ ಭಾರತ್ ನ ಜಿಲ್ಲಾ ಮಟ್ಟದ ಅಧಿಕಾರಿ ವಾಣಿಕೋನರೆಡ್ಡಿ ಮಾತನಾಡಿ, ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ, ಭವಿಷ್ಯದಲ್ಲಿ ಎಂತಹ ದೊಡ್ಡ ಸವಾಲುಗಳನ್ನು ಸುಲಭವಾಗಿ ಎದುರಿಸುವಂತಹ ಮಾನಸಿಕ ಸ್ಥೈರ್ಯ ಸಿಗುತ್ತದೆ. ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದಕ್ಕೆ ಕ್ರೀಡೆಗಳು ಸಹಕಾರಿಯಾಗುತ್ತವೆ. ವಿದ್ಯಾರ್ಥಿ ಜೀವನದಲ್ಲಿ ಸಿಗುವಂತಹ ಇಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.


ಪ್ರಗತಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್.ನ ಕಾರ್ಯಕ್ರಮಾಧಿಕಾರಿ ಆರ್.ಶೆಟ್ಟಿನಾಯಕ್ ಮಾತನಾಡಿ, ವಿದ್ಯಾರ್ಥಿಗಳು, ತರಗತಿಗಳಲ್ಲಿ ಕಲಿಯುವಂತಹ ಪ್ರತಿಯೊಂದು ಅಂಶಗಳು ನೆನಪಿನಲ್ಲಿರಬೇಕಾದರೆ, ಕ್ರೀಡೆಗಳಲ್ಲಿ ಭಾಗವಹಿಸುವುದು ಅಗತ್ಯ. ಇದರ ಜೊತೆಗೆ, ಸ್ವಚ್ಚತೆ ಆಧ್ಯತೆ ನೀಡಬೇಕು, ಪ್ರತಿನಿತ್ಯ ಧ್ಯಾನ, ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದರು.


ವಿದ್ಯಾರ್ಥಿಗಳಿಗೆ: ವಾಲಿಬಾಲ್, ೨೦೦ ಮೀ. ಓಟದ ಸ್ಪರ್ಧೆ, ಗುಂಡು ಎಸೆತ, ವಿದ್ಯಾರ್ಥಿನಿಯರಿಗೆ : ಥ್ರೋಬಾಲ್, ಜಾವೆಲಿನ್ ಎಸೆತ, ೧೦೦ ಮೀ. ಓಟದ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು.


ಕ್ರೀಡಾ ಸಂಯೋಜಕ ಜಗದೀಶ್. ಜಿ.ಎಸ್, ಪ್ರಾಧ್ಯಾಪಕರಾದ ಚೈತ್ರಾ.ಎನ್, ಪ್ರವೀಣ್ ಕುಮಾರ್, ಮುರಳಿ, ಸುನಂದಮ್ಮ, ಸುಧಾ ಮುಂತಾದವರು ಹಾಜರಿದ್ದರು.