Home ಜಿಲ್ಲೆ ಕ್ರೀಡೆಯಿಂದ ಆರೋಗ್ಯ, ಶಿಸ್ತು ವೃದ್ಧಿ

ಕ್ರೀಡೆಯಿಂದ ಆರೋಗ್ಯ, ಶಿಸ್ತು ವೃದ್ಧಿ

ವಿಜಯಪುರ, ಸೆ. 1: ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ಅಂಗವಾಗಿ ಬಿಎಲ್‍ಡಿಇ (ಡೀಮ್ಡ್ ವಿಶ್ವವಿದ್ಯಾಲಯ)ದಲ್ಲಿ ಆ.28ರಿಂದ 30ರವರೆಗೆ ಮೂರು ದಿನಗಳ ಕಾಲ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ವಿವಿಧ ಕ್ರೀಡಾ ಚಟುವಟಿಕೆಗಳೊಂದಿಗೆ ಆಚರಿಸಲಾಯಿತು.
ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಚಾಲನೆ ನೀಡಲಾಯಿತು. ವೈದ್ಯಕೀಯ ವಿಭಾಗದ ಡೀನ್ ಹಾಗೂ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ ಮಾತನಾಡಿ, ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರೂ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಬಿಎಲ್‍ಡಿಇ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಎಸ್. ಕೋರಿ ಅವರು ಮೇಜರ್ ಧ್ಯಾನ್ ಚಂದ್ ಅವರ ಜೀವನ, ಸಾಧನೆ ಹಾಗೂ ಭಾರತೀಯ ಹಾಕಿ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‍ನ ವಿದ್ಯಾರ್ಥಿನಿ ಶ್ರಾವಣಿ ರಾಷ್ಟ್ರೀಯ ಕ್ರೀಡಾ ದಿನದ ಪ್ರತಿಜ್ಞಾವಿಧಿ ಬೋಧಿಸಿದರು.
ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ಅರೀಜ್ ಅವರಿಗೆ ಅತ್ಯುತ್ತಮ ಮಹಿಳಾ ಕ್ರೀಡಾಪಟು ಹಾಗೂ ಮಿತಾಂಶು ಪಾಟೀಲ ಅವರಿಗೆ ಅತ್ಯುತ್ತಮ ಪುರುಷ ಕ್ರೀಡಾಪಟು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕಿ ಡಾ. ಮಹಾದೇವಿ ವಾಲಿ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ವಿಭಾಗದ ಡೀನ್ ಡಾ. ಗಿರೀಶ್ ಕುಲ್ಲೊಳ್ಳಿ ವಂದನಾರ್ಪಣೆ ಸಲ್ಲಿಸಿದರು. ಬಳಿಕ ಫಿಟ್ ಇಂಡಿಯಾ ವಾಕ್‍ಥಾನ್ ನಡೆಯಿತು.
ಎರಡನೇ ದಿನ ವಿದ್ಯಾರ್ಥಿಗಳಿಗಾಗಿ ‘ಏಕ್ ಘಂಟಾ ಖೇಲ್ ಕೆ ಮೈದಾನ್ ಮೇ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕ್ರಿಕೆಟ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಮೂರನೇ ದಿನ ವಿಶ್ವವಿದ್ಯಾಲಯದ ಆವರಣದಲ್ಲಿ ಫಿಟ್ ಇಂಡಿಯಾ ವಾಕ್‍ಥಾನ್ ಆಯೋಜಿಸಲಾಗಿದ್ದು, ಡಾ. ತೇಜಸ್ವಿನಿ ವಲ್ಲಭ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕಾನೂನು ಮಹಾವಿದ್ಯಾಲಯದ ಡೀನ್ ಹಾಗೂ ಪ್ರಾಂಶುಪಾಲ ಡಾ. ರಘುವೀರ ಜಿ. ಕುಲಕರ್ಣಿ, ಸ್ಕೂಲ್ ಆಫ್ ಫಿಸಿಯೋಥೆರಪಿ ಪ್ರಾಂಶುಪಾಲ ಡಾ. ಕೆ. ವೆಂಕಟೇಶ, ಸಹಾಯಕ ಕುಲಸಚಿವ ಡಾ. ಶ್ರೀಧರ ಬಗಲಿ, ಫಾರೆನ್ಸಿಕ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಉದಯಕುಮಾರ್ ಸಿ. ನುಚ್ಚಿ, ಯುರಾಲಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಂತೋಷ ಪಾಟೀಲ, ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಡಾ. ಎಸ್.ಎಂ. ಬಿರಾದಾರ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಶಾಂತೇಶ ಸಲಗರೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಮೂರು ದಿನಗಳ ಕ್ರೀಡಾ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾಸ್ಫೂರ್ತಿ ಮೆರೆದರು. ಕ್ರೀಡೆಯ ಮೂಲಕ ಆರೋಗ್ಯ, ಶಿಸ್ತು, ತಂಡದ ಮನೋಭಾವ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಸಾರುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.