
ಮಧುಗಿರಿ, ನ. ೨೨- ಯುವ ಸಮೂಹ ಎಲ್ಲ ಪ್ರಕಾರದ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ದೈಹಿಕ, ಮಾನಸಿಕ ಆರೋಗ್ಯ, ಶಿಸ್ತು, ಸಮಯಪಾಲನೆ, ನಾಯಕತ್ವ ಗುಣ, ಸಾಮಾಜಿಕ ಅಭಿವೃದ್ಧಿ, ಸ್ಪರ್ಧಾತ್ಮಕ ಮನೋಭಾವ, ವ್ಯಕ್ತಿತ್ವ ವಿಕಸನವನ್ನು ಸಾಧಿಸಿ, ರಾಷ್ಟ್ರದ ಗೌರವವನ್ನು ಹೆಚ್ಚಿಸಬೇಕು ಎಂದು ಪುರಸಭಾ ಮಾಜಿ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್ ಹೇಳಿದರು.
ಮಧುಗಿರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವ ಸಮೂಹ ಎಲ್ಲಾ ರಂಗಗಳಲ್ಲೂ ಹಂತ ಹಂತವಾಗಿ ಪ್ರಗತಿ ಹೊಂದಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ ಮಾತನಾಡಿ, ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಪೋಲೀಸ್ ಇಲಾಖೆಯ ನೇಮಕಾತಿಯಲ್ಲಿ ಶೇ ೩ ರಷ್ಟು, ಇತರೆ ಇಲಾಖೆಗಳಲ್ಲಿ ಶೇ ೨ ರಷ್ಟು, ಭಾರತೀಯ ಸೇನೆಯಲ್ಲೂ ಮೀಸಲಾತಿ ಮತ್ತು ನೇಮಕಾತಿಯಲ್ಲಿ ಆದ್ಯತೆ ನೀಡುತ್ತಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ದೈಹಿಕ ಶಿಕ್ಷಣ ನಿರ್ದೇಶಕ ಮುರುಳಿಧರ ಕೆ., ಕ್ರೀಡೆಗಳು ಮನುಷ್ಯನಿಗೆ ಶಿಸ್ತು, ಆರೋಗ್ಯದ ಜತೆಗೆ ಬದುಕಿನ ಪಾಠ ಕಲಿಸುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದು, ಎರಡನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೊಂದಿ ಕ್ರೀಡಾ ಸ್ಪೂರ್ತಿಯನ್ನು ಪ್ರದರ್ಶಿಸಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್.ಬಿ ಮಾತನಾಡಿ, ಹೆಚ್ಚಿನ ಆಸಕ್ತಿ ಮತ್ತು ಪ್ರತಿಭೆ ಇರುವವರು ಸೂಕ್ತ ತರಬೇತಿಯನ್ನು ಪಡೆದು, ಕಠಿಣ ಪರಿಶ್ರಮದೊಂದಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸುವಂತಹ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಕುಮಾರ್ ಕೆ.ಎಸ್. ಮಾತನಾಡಿ, ಕ್ರೀಡೆಗಳು ಯಾವುದೇ ತರಹದ ತಾರತಮ್ಯಗಳಿಂದ ಹೊರತಾಗಿದ್ದು, ಸತತ ಅಭ್ಯಾಸಗಳಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಕೌಶಲ್ಯಗಳನ್ನು ಕ್ರೀಡಾಪಟುಗಳು ಕರಗತ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಡಾ.ಮಂಜುನಾಥ್, ಡಾ.ಸುದೀಪ್ ಕುಮಾರ್ ಆರ್, ಸಿಡಿಸಿ ಸದಸ್ಯ ಸಿದ್ದಿಕ್, ಕಾಲೇಜಿನ ವ್ಯವಸ್ಥಾಪಕಿ ಚಂದ್ರಕಲಾ, ಪ್ರಾಧ್ಯಾಪಕರುಗಳಾದ ಡಾ.ಗೋವಿಂದರಾಯ, ಡಾ.ಶ್ರೀನಿವಾಸಪ್ಪ, ಡಾ.ವಿಜಯಲಕ್ಷ್ಮಿ, ಡಾ.ಲೀಲಾವತಿ, ರಾಮಮೂರ್ತಿ, ನಟರಾಜು ಮತ್ತಿತರರು ಭಾಗವಹಿಸಿದ್ದರು.




























