
ಯಾದಗಿರಿ:ಫೆ.೯:ವರ್ಷಪೂರ್ತಿ ಸುದ್ದಿ ಸಂಗ್ರಹದ ಧಾವಂತದಲ್ಲಿ ತೊಡಗಿರುವ ಪತ್ರಕರ್ತರು ಪೆನ್, ಕ್ಯಾಮೆರಾ, ಮೈಕ್‌ಗಳನ್ನು ಕೆಲ ಹೊತ್ತಿಗೆ ಬದಿಗಿಟ್ಟು ಮೈದಾನಕ್ಕಿಳಿದು ಕ್ರೀಡಾಸ್ಪರ್ಧೆಗಳಲ್ಲಿ ತೊಡಗಿದ ಅಪೂರ್ವ ಕ್ಷಣಕ್ಕೆ ನಗರದ ಜಿಲ್ಲಾ ಕ್ರೀಡಾಂಗಣ ಸಾಕ್ಷಿಯಾಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾದ ಜಿಲ್ಲಾ ಮಟ್ಟದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಚಾಲನೆ ನೀಡಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕ್ರೀಡೆಗಳು ಕೇವಲ ಮನರಂಜನೆಗಾಗಿ ಮಾತ್ರವಲ್ಲ; ದೈಹಿಕ ಕ್ಷಮತೆ, ಮಾನಸಿಕ ಚೈತನ್ಯ ಹಾಗೂ ಶಿಸ್ತು ಬೆಳೆಸುವ ಪ್ರಮುಖ ಸಾಧನವಾಗಿವೆ ಎಂದರು. ದಿನನಿತ್ಯ ಸ್ಪರ್ಧಾತ್ಮಕ ಜಗತ್ತಿನಲ್ಲಿ ಓಡಾಡುವ ಪತ್ರಕರ್ತರು ಮೊದಲು ಸುದ್ದಿ ನೀಡುವ ಒತ್ತಡದಲ್ಲಿ ನಿರಂತರ ಕೆಲಸ ಮಾಡುತ್ತಾರೆ. ಆದರೆ ಇಂತಹ ಕ್ರೀಡಾಕೂಟಗಳು ಅವರಿಗೆ ಒತ್ತಡ ನಿವಾರಣೆ ನೀಡುವ ಜೊತೆಗೆ ಸ್ನೇಹಭಾವ ಹೆಚ್ಚಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕಡಿಮೆ ವಯಸ್ಸಿನವರಲ್ಲೇ ಹೃದಯಾಘಾತದಂತಹ ಸಮಸ್ಯೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ವಾಕಿಂಗ್, ಜಾಗಿಂಗ್, ಯೋಗ, ಕ್ರೀಡೆಗಳಂತಹ ಚಟುವಟಿಕೆಗಳಲ್ಲಿ ನಿಯಮಿತವಾಗಿ ಭಾಗವಹಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. “ಫುಟ್‌ಬಾಲ್ ಆಡಿದರೆ ದೇವರನ್ನು ಕಾಣಬಹುದು” ಎಂಬ ಸ್ವಾಮಿ ವಿವೇಕಾನಂದರ ಮಾತು ಉಲ್ಲೇಖಿಸಿ, ಕ್ರೀಡೆಗಳ ಮಹತ್ವವನ್ನು ವಿವರಿಸಿದರು.
ಪತ್ರಕರ್ತರು ತಮ್ಮ ಆರೋಗ್ಯದ ಕಡೆ ನಿರ್ಲಕ್ಷ್ಯ ತೋರಬಾರದು. ಆರೋಗ್ಯ ಇದ್ದರೆ ಸಾಧನೆ ಸಾಧ್ಯ; ಆರೋಗ್ಯ ಕೈಕೊಟ್ಟರೆ ಯಾವುದೂ ಸಾಧ್ಯವಿಲ್ಲ. ಕೆಲಸದ ಒತ್ತಡದ ನಡುವೆ ಜೀವ ಕಳೆದುಕೊಂಡ ಪತ್ರಕರ್ತರ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಆದ್ದರಿಂದ ಕ್ರೀಡೆಗಳನ್ನು ಜೀವನದ ಭಾಗವನ್ನಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ಪತ್ರಕರ್ತರು ವರ್ಷಪೂರ್ತಿ ನಿರಂತರ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಒತ್ತಡದಿಂದ ಹೊರಬಂದು ಒಂದೇ ವೇದಿಕೆಯಲ್ಲಿ ಸೇರಿ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು. ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವ ಮನೋಭಾವವೇ ಮುಖ್ಯ ಎಂದು ಹೇಳಿದರು.
ಕ್ರೀಡಾಕೂಟದಲ್ಲಿ ಕ್ರಿಕೆಟ್, ವಾಲಿಬಾಲ್, ಕಬ್ಬಡ್ಡಿ, ನೂರು ಮೀಟರ್ ಓಟ, ಥ್ರೋಬಾಲ್, ಚೆಸ್, ಕೇರಂ ಸೇರಿದಂತೆ ಹಲವು ಸ್ಪರ್ಧೆಗಳು ಜರುಗಿದವು. ಪತ್ರಕರ್ತರು ಉತ್ಸಾಹಭರಿತವಾಗಿ ಪಾಲ್ಗೊಂಡು ಕ್ರೀಡಾ ಮನೋಭಾವ ಪ್ರದರ್ಶಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ, ಖಜಾಂಜಿ ರಾಜಕುಮಾರ ನಲ್ಲಿಕರ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪತ್ರಕರ್ತ ಸಿದ್ದರಾಜರೆಡ್ಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

























