Home ಜಿಲ್ಲೆ ಭೌತಿಕ ಬದುಕಿಗೆ ಆಧ್ಯಾತ್ಮಿಕ ಜ್ಞಾನ ಅಗತ್ಯ: ರಂಭಾಪುರಿ ಜಗದ್ಗುರುಗಳು

ಭೌತಿಕ ಬದುಕಿಗೆ ಆಧ್ಯಾತ್ಮಿಕ ಜ್ಞಾನ ಅಗತ್ಯ: ರಂಭಾಪುರಿ ಜಗದ್ಗುರುಗಳು

ಜಮಖಂಡಿ :ತಾಲೂಕಿನ ಕಡಪಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಎಂಟನೇ ದಿನದ ಕಾರ್ಯಕ್ರಮದಲ್ಲಿ ಧರ್ಮ, ಆಧ್ಯಾತ್ಮಿಕತೆ, ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಸಾಮರಸ್ಯದ ಮಹತ್ವವನ್ನು ಸಾರಲಾಯಿತು.

ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಧರ್ಮದ ಮೂಲ ಉದ್ದೇಶ ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದಾಗಿದೆ ಎಂದು ಹೇಳಿದರು.

ರಂಭಾಪುರಿ ಜಗದ್ಗುರುಗಳು ಮೂರು ದಶಕಗಳಿಗೂ ಹೆಚ್ಚು ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುತ್ತಿದ್ದಾರೆ. ಮೈಸೂರು ದಸರಾ ಪ್ರಸಿದ್ಧವಾಗಿರುವಂತೆಯೇ ಧರ್ಮದ ಮಹತ್ವ ಸಾರುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ ಎಂದರು.

ನವರಾತ್ರಿ ದುಷ್ಟಶಕ್ತಿಗಳ ಸಂಹಾರ ಮತ್ತು ಧರ್ಮದ ವಿಜಯದ ಸಂಕೇತವಾಗಿದೆ. ಇಂದಿನ ದಿನಗಳಲ್ಲಿ ವ್ಯಕ್ತಿಗಳ ಮನಸ್ಸಿನಲ್ಲಿರುವ ದುಷ್ಟ ಆಲೋಚನೆಗಳು, ದುರಭ್ಯಾಸಗಳು ಹಾಗೂ ಸಮಾಜದಲ್ಲಿನ ದುಷ್ಪ್ರವೃತ್ತಿಗಳನ್ನು ದೂರಮಾಡುವುದು ಅಗತ್ಯ. ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮತ್ತು ಆಧ್ಯಾತ್ಮಿಕ ಅರಿವು ಮುಖ್ಯ ಎಂದು ತಿಳಿಸಿದರು.

ಮೊಬೈಲ್ ಬಳಕೆಯ ನಿಯಂತ್ರಣಕ್ಕೆ ಸ್ವಯಂಪ್ರೇರಿತ ನಿರ್ಧಾರ ಅಗತ್ಯ

ಟಿವಿ ಮತ್ತು ಮೊಬೈಲ್ ಬಳಕೆಯ ಅತಿರೇಕ ಮಕ್ಕಳ ಹಾಗೂ ಯುವಜನರ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳು ಅಧ್ಯಯನಕ್ಕೆ ಮೀಸಲಿಡಬೇಕಾದ ಸಮಯವನ್ನು ಅನಗತ್ಯವಾಗಿ ವ್ಯಯಿಸದಂತೆ ಪೆÇೀಷಕರು ಮತ್ತು ಸಮಾಜ ಎಚ್ಚರಿಕೆ ವಹಿಸಬೇಕು ಎಂದು ಜಗದೀಶ ಶೆಟ್ಟರ್ ಹೇಳಿದರು.

ಬೆಳಗಾವಿ ಸಮೀಪದ ಹಲಗಾ ಗ್ರಾಮದ ಜನರು ಸಂಜೆ 7ರಿಂದ ರಾತ್ರಿ 9ರವರೆಗೆ ಟಿವಿ ಮತ್ತು ಮೊಬೈಲ್ ಬಳಕೆಯನ್ನು ಸ್ವಯಂಪ್ರೇರಿತವಾಗಿ ನಿಯಂತ್ರಿಸುವ ನಿರ್ಧಾರ ಕೈಗೊಂಡಿರುವ ಉದಾಹರಣೆಯನ್ನು ಉಲ್ಲೇಖಿಸಿದರು. ಇಂತಹ ಸಂಕಲ್ಪಗಳು ವಿದ್ಯಾರ್ಥಿಗಳಲ್ಲಿ ಓದುವ ಅಭ್ಯಾಸ ಬೆಳೆಸಲು ನೆರವಾಗುತ್ತವೆ. ಕೇವಲ ಕಾನೂನಿನ ನಿಬರ್ಂಧಕ್ಕಿಂತ ಜನರು ಸ್ವಯಂಪ್ರೇರಣೆಯಿಂದ ಕೈಗೊಳ್ಳುವ ನಿರ್ಧಾರಗಳು ಪರಿಣಾಮಕಾರಿಯಾಗುತ್ತವೆ ಎಂದರು.

ವೀರಶೈವ-ಲಿಂಗಾಯತ ಸಮಾಜದ ಒಗ್ಗಟ್ಟು ಅಗತ್ಯ
ವೀರಶೈವ-ಲಿಂಗಾಯತ ಸಮಾಜವು ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಶಕ್ತಿಯಾಗಬೇಕು. ಒಳಪಂಗಡಗಳ ನಡುವಿನ ಭಿನ್ನಾಭಿಪ್ರಾಯಗಳಿಂದ ಸಮಾಜದ ಒಗ್ಗಟ್ಟು ದುರ್ಬಲವಾಗಬಾರದು. ಬಸವಣ್ಣನವರು ಹಾಗೂ ರೇಣುಕಾಚಾರ್ಯರು ಸಾರಿದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಾಮರಸ್ಯದಿಂದ ಬದುಕಬೇಕು ಎಂದು ಕರೆ ನೀಡಿದರು.

ಜಾತಿ, ಧರ್ಮ ಹಾಗೂ ಸಮುದಾಯಗಳ ಹೆಸರಿನಲ್ಲಿ ಸಂಘರ್ಷ ಉಂಟುಮಾಡುವ ಪ್ರವೃತ್ತಿಗಳು ದೂರವಾಗಬೇಕು. “ಮಾನವ ಧರ್ಮಕ್ಕೆ ಜಯವಾಗಲಿ” ಎಂಬ ಸಂದೇಶ ಇಡೀ ಜಗತ್ತಿಗೆ ತಲುಪಬೇಕು. ಜಾಗತಿಕ ಸಂಘರ್ಷಗಳು ಮತ್ತು ಯುದ್ಧಗಳಿಂದ ಅನೇಕ ರಾಷ್ಟ್ರಗಳು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಧಾರ್ಮಿಕ ಚಿಂತನೆ ಹಾಗೂ ಮಾನವೀಯ ಮೌಲ್ಯಗಳು ವಿಶ್ವಶಾಂತಿಗೆ ನೆರವಾಗಬೇಕು ಎಂದರು.

ಮಳೆ ಕೊರತೆಯಿಂದ ರೈತರು ಬೆಳೆನಷ್ಟ ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಆತಂಕವಿದೆ. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ನೆರವಾಗಬೇಕು. ಸಮಾಜವೂ ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ಆಶಿಸಿದರು.

ಧರ್ಮಕ್ಕೆ ಜಾತಿ-ಮತಗಳ ಭೇದವಿಲ್ಲ: ಡಾ. ತೌಫೀಕ ಪಾರಥನಳ್ಳಿ

ಜಮಖಂಡಿ ತಾಲೂಕು ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಹಾಗೂ ಉದ್ಯಮಿ ಡಾ. ತೌಫೀಕ ಪಾರಥನಳ್ಳಿ ಮಾತನಾಡಿ, ಮಾನವಕುಲದ ಒಳಿತನ್ನು ಬಯಸುವ ಧಾರ್ಮಿಕ ಪೀಠಗಳು ಎಲ್ಲರನ್ನೂ ಸಮಾನವಾಗಿ ಕಾಣುವ ಸಂದೇಶ ನೀಡುತ್ತವೆ. ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಭಾವೈಕ್ಯತೆ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.

ಬಸವಣ್ಣನವರ ಸಮಾನತೆಯ ತತ್ವ ಹಾಗೂ ಪ್ರವಾದಿ ಮಹಮ್ಮದ್ ಅವರ ಮಾನವೀಯ ಸಂದೇಶಗಳು ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಮಹತ್ವವನ್ನು ಸಾರುತ್ತವೆ. ಜಮಖಂಡಿಯಲ್ಲಿ ಎಲ್ಲ ಸಮುದಾಯಗಳ ನಡುವೆ ಉತ್ತಮ ಬಾಂಧವ್ಯವಿದ್ದು, ಈ ಸಾಮರಸ್ಯ ಮುಂದುವರಿಯಬೇಕು ಎಂದು ಹೇಳಿದರು.

ರಂಭಾಪುರಿ ಜಗದ್ಗುರುಗಳು ತಮ್ಮ ಅಡ್ಡಪಲ್ಲಕ್ಕಿಯನ್ನು ಹೊರುವ ಅವಕಾಶ ನೀಡುವ ಮೂಲಕ ಆಶೀರ್ವದಿಸಬೇಕು ಎಂದು ವಿನಂತಿಸಿದ ಅವರು, ಶಾಸಕ ಜಗದೀಶ ಗುಡಗುಂಟಿ ಅವರು ಪಕ್ಷಭೇದ ಮರೆತು ಜನರೊಂದಿಗೆ ಆತ್ಮೀಯವಾಗಿ ಬೆರೆಯುವ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡುವ ಗುಣ ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮಜಾಗೃತಿಯಿಂದ ಸಮಾಜದ ಸನ್ಮಾರ್ಗ ಸಾಧ್ಯ: ಪಿ.ಎಚ್. ಪೂಜಾರ

ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ಧರ್ಮದ ಹೆಸರಿನಲ್ಲಿ ಅಪಪ್ರಚಾರ ಹಾಗೂ ಸಮಾಜವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲಿ ಧರ್ಮಜಾಗೃತಿ ಸಭೆಗಳ ಮಹತ್ವ ಹೆಚ್ಚಾಗಿದೆ ಎಂದರು.
ಧರ್ಮವೆಂದರೆ ಜಾತಿ, ಮತ, ಕುಲ ಹಾಗೂ ಕಂದಾಚಾರಗಳ ಭೇದವಿಲ್ಲದೆ ಎಲ್ಲರನ್ನು ಒಳಗೊಂಡು ಸನ್ಮಾರ್ಗದತ್ತ ಕರೆದೊಯ್ಯುವ ಮಾನವೀಯ ಮೌಲ್ಯಗಳ ವ್ಯವಸ್ಥೆ. ಬಸವಣ್ಣನವರ ಶರಣರು ಸಾರಿದ ಮಾನವ ಧರ್ಮದ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.

ರಾಜಕೀಯ ಹಿತಾಸಕ್ತಿಗಳಿಗಾಗಿ ಧರ್ಮವನ್ನು ಬಳಸಿಕೊಳ್ಳುವ ಹಾಗೂ ಸಮಾಜದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸುವ ಪ್ರವೃತ್ತಿಗಳಿಂದ ದೂರವಿರಬೇಕು. ಧರ್ಮಗುರುಗಳು ಸಮಾಜಕ್ಕೆ ಮಾರ್ಗದರ್ಶನ ನೀಡುವ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ. ರಂಭಾಪುರಿ ಜಗದ್ಗುರುಗಳು ಧರ್ಮ, ಸಂಸ್ಕøತಿ ಮತ್ತು ಪರಂಪರೆಯ ಸಂರಕ್ಷಣೆಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮ ಮತ್ತು ಗುರುವಿನ ಮಾರ್ಗದರ್ಶನ ಬದುಕಿಗೆ ಅಗತ್ಯ: ವಿಶ್ವಪ್ರಭು ಶ್ರೀ

ಕೊಣ್ಣೂರು ಹೊರಗಿನ ಮಠದ ಡಾ. ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವ ಜೀವನದಲ್ಲಿ ಧರ್ಮ ಮತ್ತು ಗುರುವಿನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇವೆರಡರ ಮೌಲ್ಯಗಳನ್ನು ಅರಿತು ಆಚರಿಸಿದಾಗ ಬದುಕಿನಲ್ಲಿ ಸುಖ, ಶಾಂತಿ ಪಡೆಯಲು ಸಾಧ್ಯವಾಗುತ್ತದೆ ಎಂದರು.

ವೀರಶೈವ ಧರ್ಮದಲ್ಲಿ ಆಚಾರ ಮತ್ತು ವಿಚಾರಗಳಿಗೆ ಸಮಾನ ಮಹತ್ವವಿದೆ. ರೇಣುಕಾಚಾರ್ಯರ ಪರಂಪರೆ ಹಾಗೂ ರಂಭಾಪುರಿ ಜಗದ್ಗುರುಗಳ ಧರ್ಮಪ್ರಚಾರ ಕಾರ್ಯಗಳು ಸಮಾಜದಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುತ್ತಿವೆ. ಭಕ್ತರ ಸಹಕಾರ, ಗ್ರಾಮೀಣ ಜನರ ಸೇವಾಭಾವ ಮತ್ತು ದಾಸೋಹ ಕಾರ್ಯಕರ್ತರ ನಿಸ್ವಾರ್ಥ ಸೇವೆಯಿಂದ ಧರ್ಮ ಸಮ್ಮೇಳನ ಯಶಸ್ವಿಯಾಗುತ್ತಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಜಮಖಂಡಿ ಭವಿಷ್ಯದಲ್ಲಿ ಜಿಲ್ಲಾ ಕೇಂದ್ರವಾಗಬೇಕೆಂಬ ಆಶಯವನ್ನೂ ವ್ಯಕ್ತಪಡಿಸಿದರು.

ತಂತ್ರಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳೂ ಬೆಳೆಯಲಿ

ಬಂಡಿವಾಡದ ಸಾಹಿತ್ಯ ಸಂಶೋಧಕ ಡಾ. ಎ.ಸಿ. ವಾಲಿ ಉಪನ್ಯಾಸ ನೀಡಿ, ಆಧುನಿಕ ವೈಚಾರಿಕ ಕಾಲದಲ್ಲಿ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದು ಸವಾಲಿನ ಕೆಲಸವಾಗಿದೆ ಎಂದರು.

ಯುವಜನರಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯ ಅರಿವು ಬೆಳೆಸಬೇಕು. ತಂತ್ರಜ್ಞಾನ ಜ್ಞಾನ, ವೇಗ ಮತ್ತು ಸೌಲಭ್ಯಗಳನ್ನು ನೀಡಬಹುದು. ಆದರೆ ಪ್ರೀತಿ, ಕರುಣೆ, ಸತ್ಯ, ನ್ಯಾಯ ಮತ್ತು ಸೇವೆಯಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ತಂತ್ರಜ್ಞಾನ ಬೆಳೆದರೂ ಮನುಷ್ಯರ ನಡುವಿನ ಪ್ರೀತಿ ಮತ್ತು ಕಾಳಜಿ ಕಡಿಮೆಯಾಗಬಾರದು. ತಂತ್ರಜ್ಞಾನವನ್ನು ಶಿಕ್ಷಣ, ಆರೋಗ್ಯ, ಬಡವರಿಗೆ ನೆರವು ಹಾಗೂ ಸಮಾಜದ ಅಭಿವೃದ್ಧಿಗೆ ಬಳಸಬೇಕು. ಪರಿಸರ ಸಂರಕ್ಷಣೆಯೊಂದಿಗೂ ಆದ್ಯತೆ ನೀಡಬೇಕು ಎಂದು ಹೇಳಿದರು.

2027ರ ದಸರಾ ಸ್ಥಳದ ಆಯ್ಕೆ ಅಕ್ಟೋಬರ್ 20ರಂದು ಪ್ರಕಟ

2027ನೇ ಸಾಲಿನ ಶರನ್ನವರಾತ್ರಿ ದಸರಾ ಕಾರ್ಯಕ್ರಮವನ್ನು ಬಳ್ಳಾರಿ ನಗರದಲ್ಲಿ ಆಯೋಜಿಸುವಂತೆ ಬಳ್ಳಾರಿ ಜಿಲ್ಲಾ ವೀರಶೈವ ಮುಖಂಡರು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಗದ್ಗುರುಗಳು, ಮುಂದಿನ ವರ್ಷದ ದಸರಾ ಮಹೋತ್ಸವವನ್ನು ವಿವಿಧ ನಗರಗಳಲ್ಲಿ ಆಯೋಜಿಸುವಂತೆ ಬೇಡಿಕೆಗಳು ಬಂದಿವೆ. ಅಕ್ಟೋಬರ್ 20ರಂದು ನಡೆಯುವ ಸಮಾರಂಭದ ಕೊನೆಯಲ್ಲಿ ಮುಂದಿನ ವರ್ಷದ ದಸರಾ ಆಚರಿಸುವ ಸ್ಥಳವನ್ನು ಅಂತಿಮಗೊಳಿಸಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಸಿದ್ದಪ್ಪ ಕವಟಗಿಗೆ ‘ರಂಭಾಪುರಿ ಯುವ ಸಿರಿ’ ಪ್ರಶಸ್ತಿ

ಜಮಖಂಡಿ ನಗರದ ಯುವಧುರೀಣ ಸಿದ್ದಪ್ಪ ಬಸಪ್ಪ ಕವಟಗಿ ಅವರ ಕ್ರಿಯಾಶೀಲ ಬದುಕನ್ನು ಗುರುತಿಸಿ ಶ್ರೀ ರಂಭಾಪುರಿ ಜಗದ್ಗುರುಗಳು ಅವರಿಗೆ ‘ರಂಭಾಪುರಿ ಯುವ ಸಿರಿ’ ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸುಳ್ಳ ಪಂಚಗ್ರಹ ಹಿರೇಮಠದ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಪರಮಾತ್ಮನು ಕೇವಲ ದೇವಾಲಯಗಳಲ್ಲಿ ಮಾತ್ರವಲ್ಲ, ಭಕ್ತನ ಹೃದಯದಲ್ಲಿಯೂ ನೆಲೆಸಿದ್ದಾನೆ. ದೇವರ ಮೇಲಿನ ನಂಬಿಕೆ ಬದುಕಿನ ಶಾಶ್ವತ ನಂದಾದೀಪವಾಗಿದೆ ಎಂದರು.

ಇಷ್ಟಲಿಂಗ ಪೂಜೆಯಲ್ಲಿ ಜಗದ್ಗುರುಗಳಿಗೆ ಗೌರವ ಸಮರ್ಪಣೆ

ಜಮಖಂಡಿ ತಾಲೂಕು ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಡಾ. ತೌಫೀಕ ಪಾರಥನಳ್ಳಿ ಹಾಗೂ ಸಮಿತಿಯ ಸದಸ್ಯರು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಭಕ್ತಿಪೂರ್ವಕ ಗೌರವ ಸಮರ್ಪಿಸಿದರು.

ಭೌತಿಕ ಬದುಕಿಗೆ ಆಧ್ಯಾತ್ಮಿಕ ಜ್ಞಾನ ಅಗತ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶಗಳೇ ದಾರಿದೀಪ. ನ್ಯಾಯ ಮತ್ತು ನೀತಿಗಳು ಕೇವಲ ಮಾತಿಗೆ ಸೀಮಿತವಾಗದೆ ಬದುಕಿನಲ್ಲಿ ಆಚರಣೆಯಾಗಬೇಕು. ಮನುಷ್ಯ ಧರ್ಮದಿಂದ ವಿಮುಖನಾದರೆ ಶಾಂತಿ ಮತ್ತು ನೆಮ್ಮದಿ ದೊರೆಯುವುದಿಲ್ಲ. ಭೌತಿಕ ಬದುಕಿನಲ್ಲಿ ಆಧ್ಯಾತ್ಮಿಕ ಅರಿವು ಹಾಗೂ ಅನುಸಂಧಾನ ಬೆಳೆಸಿಕೊಂಡಾಗ ಜೀವನದ ಶ್ರೇಯಸ್ಸು ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವಚನ ನೀಡಿದರು.

ಸಮಾಜದ ಓರೆಕೋರೆಗಳನ್ನು ತಿದ್ದಿ, ಜನರನ್ನು ಸನ್ಮಾರ್ಗದತ್ತ ಮುನ್ನಡೆಸುವುದು ಮಹಾನುಭಾವರ ಕರ್ತವ್ಯವಾಗಿದೆ. ಹೊಸತನದೊಂದಿಗೆ ಹಿರಿಯತನದ ಮೌಲ್ಯಗಳು ಮೇಳೈಸಿದಾಗ ಬದುಕಿಗೆ ಬೆಲೆ ಮತ್ತು ಬಲ ಬರುತ್ತವೆ. ಕೆಡುಕುಗಳನ್ನು ಮೆಟ್ಟಿನಿಂತು ಒಳಿತಿನತ್ತ ಹೆಜ್ಜೆ ಹಾಕುವುದೇ ಮಾನವನ ಗುರಿಯಾಗಬೇಕು ಎಂದರು.

ಕಾಯಿಸಿದ ಚಿನ್ನ ಒಡವೆಯಾಗುತ್ತದೆ, ಬಡಿದ ತಾಮ್ರ ತಂತಿಯಾಗುತ್ತದೆ, ಕೆತ್ತಿದ ಕಲ್ಲು ಸುಂದರ ಮೂರ್ತಿಯಾಗುತ್ತದೆ. ಅದೇ ರೀತಿ ಮನುಷ್ಯನ ಜೀವನದಲ್ಲಿ ಎದುರಾಗುವ ಕಷ್ಟಗಳು ವ್ಯಕ್ತಿತ್ವವನ್ನು ರೂಪಿಸಿ ಜೀವನದ ಮೌಲ್ಯಗಳನ್ನು ಹೆಚ್ಚಿಸುತ್ತವೆ. ಬಾಲ್ಯದಲ್ಲಿ ಜ್ಞಾನ, ಯೌವನದಲ್ಲಿ ಸಂಪತ್ತು ಹಾಗೂ ವೃದ್ಧಾಪ್ಯದಲ್ಲಿ ಪುಣ್ಯ ಸಂಪಾದಿಸಿಕೊಂಡು ಬಾಳಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ ಎಂದು ತಿಳಿಸಿದರು.

ಬೆಳಗುವ ದೀಪಕ್ಕೆ ಎಣ್ಣೆ ಮುಖ್ಯವಾದಂತೆ ಎಲ್ಲ ಚಟುವಟಿಕೆಗಳಿಗೆ ಆತ್ಮವಿಶ್ವಾಸವೇ ಮೂಲ. ಸ್ವಾರ್ಥರಹಿತ ಬದುಕಿಗೆ ಬೆಲೆ ಮತ್ತು ಬಲವಿದೆ. ಹಿರಿಯರ ಮೌಲ್ಯಾಧಾರಿತ ಚಿಂತನೆಗಳು ಬದುಕಿನ ಆಶಾದೀಪಗಳಾಗಿದ್ದು, ಸ್ವಾರ್ಥಕ್ಕಾಗಿ ಆದರ್ಶ ಮೌಲ್ಯಗಳನ್ನು ಬಲಿಕೊಡಬಾರದು. ದೇವರು ಎಲ್ಲೆಡೆ ನೆಲೆಸಿದ್ದರೂ ಮನುಷ್ಯನ ಅಂತರಂಗದಲ್ಲಿಯೂ ಇದ್ದಾನೆ. ವೀರಶೈವ ಧರ್ಮದ ಆಧ್ಯಾತ್ಮಿಕ ಚಿಂತನೆಗಳು ಹಾಗೂ ಮಾನವೀಯ ಮೌಲ್ಯಗಳು ಸುಂದರ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ನಾಡೋಜ ಜಗದೀಶ ಗುಡಗುಂಟಿ, ಪ್ರಕಾಶ ಮೀಶಿ, ದಿಲೀಪ ಜೋಗದಂಡೆ, ವಿವೇಕ ಪತಂಗೆ, ವಿನಾಶ ರಜಪೂತ, ನಿಲೇಶ ಹಜಾರೆ ಸೇರಿದಂತೆ ವಿವಿಧ ಮಠಗಳ ಮಠಾಧೀಶರು, ಗಣ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಗೀತಾ ಸೂರ್ಯವಂಶಿ ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ಗಾನಭೂಷಣ ಶ್ರೀ ವೀರೇಶ ಕಿತ್ತೂರ, ಗದಗ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ಸಮಾರಂಭದ ಕೊನೆಯಲ್ಲಿ ಆಕರ್ಷಕ ನಜರ್ ಸಮರ್ಪಣೆ ನಡೆಯಿತು. ಮಳಲಿ ಡಾ. ನಾಗಭೂಷಣ ಶಿವಾಚಾರ್ಯರು ನಿರೂಪಿಸಿದರು.