ಸ್ಪೈಸ್ ಪಾರ್ಕ್ ಶೀಘ್ರ ಆರಂಭ

ಬೆಳಗಾವಿ,ಡಿ.೧೨- ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಪೈಸ್ ಪಾರ್ಕ್‌ನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಯಲ್ಲಿಂದು ಹೇಳಿದರು.


ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ರಾಜೇಗೌಡ ಅವರ ಪ್ರಶ್ನೆಗೆ ತೋಟಗಾರಿಕಾ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪರವಾಗಿ ಉತ್ತರ ನೀಡಿದ ಅವರು, ಈ ಮೊದಲು ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ತಾಲ್ಲೂಕಿನ ಹೊಸಕೋಟೆ ಗ್ರಾಮದಲ್ಲಿ ಸ್ಪೈಸ್ ಪಾರ್ಕ್‌ಗೆ ೧೦ ಎಕರೆ ಜಮೀನು ಗುರುತಿಸಲಾಗಿತ್ತು. ಆದರೆ ಈ ಜಾಗದಲ್ಲಿ ಭೌತಿಕ ಪರಿಶೀಲನೆಯ ನಂತರ ಸಾಂಬಾರು ಮಂಡಳಿ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಹಾಗೂ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಈಜಾಗವು ಸ್ಪೈಸ್ ಪಾರ್ಕ್ ನಿರ್ಮಾಣ ಮಾಡಲು ಸೂಕ್ತವಾಗದೇ ಇರುವ ಹಿನ್ನೆಲೆಯಲ್ಲಿ ಮೂಡುಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿ ಬೆಟ್ಟದ ಮನೆ ಗ್ರಾಮದ ೯ ಎಕರೆ ಜಮೀನಿನಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿಗಳು ತೋಟಗಾರಿಕಾ ಇಲಾಖೆಗೆ ಭೂಮಿ ವರ್ಗಾಯಿಸಿದ್ದಾರೆ ಎಂದು ಹೇಳಿದರು.


ಈಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡಲಾಗುತ್ತಿದ್ದು, ಮೆಸೆಸ್ ಐಡೆಕ್ ಸಂಸ್ಥೆಯವರನ್ನು ವ್ಯವಹಾರಣಾ ಸಮಾಲೋಚಕರನ್ನಾಗಿ ನೇಮಿಸಿದ್ದು ಕಾರ್ಯಸಿದ್ಧತಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಆದಷ್ಟು ಬೇಗ ಈ ಸ್ಪೈಸ್ ಪಾರ್ಕ್‌ನ್ನು ಕಾರ್ಯಾರಂಭಗೊಳಿಸಲಾಗುವುದು ಎಂದು ಹೇಳಿದರು.


ಈ ಸ್ಪೈಸ್ ಪಾರ್ಕ್ ನಿರ್ಮಾಣದಿಂದ ಅತ್ಯಾಧುನಿಕ ಸಂಸ್ಕರಣಾ ಸೌಲಭ್ಯಗಳ ಮೂಲಕ ಸಾಂಬಾರ್ ಬೆಳೆಗಳ ಸಂಸ್ಕರಣಾಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡುವುದು, ರಫ್ತು ಮಾರುಕಟ್ಟೆಗೆ ಅಗತ್ಯವಿರುವ ಕಾಳು ಮೆಣಸಿನ ಅಂತಾರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ನಿರ್ವಹಿಸಲು ಗುಣಮಟ್ಟ ಪರೀಕ್ಷಾ ಪ್ರಯೋಗಾಲಯದ ಹಾಗೂ ಇ- ಹರಾಜು ಕೇಂದ್ರವು ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.


ಈ ಸ್ಪೈಸ್ ನಿರ್ಮಾಣದಿಂದ ಸ್ಥಳೀಯ ಪ್ರದೇಶದಲ್ಲಿ ಸಾಂಬಾರು ಬೆಳೆಗಾರರ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವುದು ರಫ್ತು ಅವಕಾಶಗಳನ್ನು ಒದಗಿಸಿ ಸ್ಥಳೀಯವಾಗಿ ಉದ್ಯೋಗವಕಾಶವನ್ನುಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.