ಕಸಾಪದಲ್ಲಿ ರಂಗಭೂಮಿ ಕಲಾವಿದ ರಾಜು ತಾಳಿಕೋಟಿಗೆ ನುಡಿನಮನ

ಸಂಜೆವಾಣಿ ವಾರ್ತೆ,
ವಿಜಯಪುರ,ಅ.೨೦: ಉತ್ತರ ಕರ್ನಾಟಕದ ಜನರ ಮನದಲ್ಲಿ ಅಚ್ಚಳಿಯದೇ ಉಳಿದ ನಮ್ಮೆಲ್ಲರ ಹೆಮ್ಮೆಯ ಈ ಭಾಗದ ರಂಗಭೂಮಿ ಅದ್ಭುತ ಕಲಾವಿದ ರಾಜು ತಾಳಿಕೋಟಿಯವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಜಾನಪದ ತಜ್ಞ, ಹಿರಿಯ ಸಾಹಿತಿ ಡಾ. ಸಂಗಮೇಶ ಮೇತ್ರಿ ಅಭಿಪ್ರಾಯಪಟ್ಟರು.
ರವಿವಾರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಹಿರಿಯ ರಂಗಭೂಮಿ ಕಲಾವಿದ ರಾಜು ತಾಳಿಕೋಟಿ ಅವರ ನುಡಿನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಖಾಸ್ಗತೇಶ್ವರ ನಾಟಕ ಸಂಘವನ್ನು ಸ್ಥಾಪಿಸಿ ಹಲವಾರು ಕಲಾವಿದರಿಗೆ ಆಶ್ರಯದಾತರಾಗಿದ್ದ ಅವರು ರಂಗಾಯಣದ ನಿರ್ದೇಶಕರಾಗಿ ಖ್ಯಾತಿ ಪಡೆದಿದ್ದ ಹಾಸ್ಯ ನಟ ಕಲಿಯುಗದ ಕುಡುಕ ಎಂಬ ನಾಟಕದ ಮೂಲಕ ಪ್ರಖ್ಯಾತಿ ಪಡೆದಿದ್ದ ಅವರು ಬಹಳ ಕಷ್ಟದ ಜೀವನವನ್ನು ಸವೆಸಿ ಕಷ್ಟದಿಂದ ಮೇಲೆ ಬಂದಿದ್ದರು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಕಲಾವಿದನಾಗಿದ್ದರೂ ಸಹ ರಾಜು ತಾಳಿಕೋಟಿ ಕೃಷಿಯನ್ನು ಬಿಟ್ಟಿರಲಿಲ್ಲ. ಸಮಾಜದ ಬಗ್ಗೆ ಅಪಾರ ಕಾಳಜಿ ಕಳಕಳಿಯನ್ನು ಹೊಂದಿದ್ದ ಅವರ ಆಕಸ್ಮಿಕ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಆ ಭಗವಂತ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಅವರ ದಿವ್ಯ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಶೃದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ, ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ನಗರ ಘಟಕದ ಅಧ್ಯಕ್ಷ ಜಗದೀಶ ಬೋಳಸೂರ, ಜಿಲ್ಲಾ ಪದಾಧಿಕಾರಿಗಳಾದ ರವಿ ಕಿತ್ತೂರ, ಕಮಲಾ ಮುರಾಳ, ಸುಖದೇವಿ ಅಲಬಾಳಮಠ, ಅರ್ಜುನ ಶಿರೂರ, ಧರು ಕಿಲಾರಿ, ಜಯಶ್ರೀ ಹಿರೇಮಠ, ಶಾಂತಾ ವಿಭೂತಿ, ತೇಜಸ್ವಿನಿ ವಾಂಗಿ, ಬಿ.ವಿ. ಪಟ್ಟಣಶೆಟ್ಟಿ, ಜಿ. ಎಸ್. ಬಳ್ಳೂರ, ಅಶೋಕ ಸಿರಗುಪ್ಪಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.