
ಧಾರವಾಡ, ನ.30: ಲಿಂಗೈಕ್ಯ ಮಹಾಂತೇಶ ಬೀಳಗಿ ಅವರದು ಮಾತೃಹೃದಯದ ಅಪರೂಪದ ವ್ಯಕ್ತತ್ವ; ಅಪ್ಪಟ ಗ್ರಾಮೀಣ ಪ್ರತಿಭೆ; ಉತ್ತರ ಕರ್ನಾಟಕದ ಅವರ ಮಾತಿನ ಸೊಗಡು ಎಲ್ಲರ ಹೃದಯಗೆದ್ದಿತು. ಯುವಕ, ಯುವತ್ತಿಯರಿಗೆ, ಸಾಧಕರಿಗೆ ಅವರು ಪ್ರೋತ್ಸಾಹಕ, ಪ್ರೇರಕ ವ್ಯಕ್ತ ಆಗಿದ್ದರು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ ಅವರು ಹೇಳಿದರು.
ಅವರು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಗಾಂಧಿಸ್ಮಾರಕ ವನದಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ, ವಾರ್ತಾ ಹಾಗೂ ಇತರ ಇಲಾಖೆಗಳ ಸರಕಾರಿ ನೌಕರರು ಆಯೋಜಿಸಿದ್ದ ಲಿಂಗೈಕ್ಯ ಮಹಾಂತೇಶ ಬೀಳಗಿ ಅವರ ಗೌರವಾರ್ಥ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾಂತೇಶ ಬೀಳಗಿ ಅವರು ಅಧಿಕಾರಿಗಳಿಗೆ ವಿಶೇಷವಾಗಿ ಉತ್ತರ ಕರ್ನಾಟಕದ ಸರಕಾರಿ ಅಧಿಕಾರಿ, ನೌಕರರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಪ್ರತಿಯೊಬ್ಬರಿಗೂ ಸಾಧನೆಗೆ ಪ್ರೇರಣೆ ನೀಡುತ್ತಿದ್ದರು. ಅವರಿಂದ ಶಿಕ್ಷಣ, ಮಾರ್ಗದರ್ಶನ ಪಡೆದ ಅನೇಕರು ಇಂದು ರಾಜ್ಯ ಹಾಗೂ ಕೇಂದ್ರ ಸರಕಾರದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಪ್ರೋತ್ಸಾಹದಿಂದಾಗಿ ಅನೇಕ ಗ್ರಾಮೀಣ ಪ್ರತಿಭಾವಂತ ಯುವಕ, ಯುವತಿಯರು ಇಂದು ಸರಕಾರಿ ಸೇವೆಯಲ್ಲಿದ್ದಾರೆ ಎಂದು ಹೇಳಿದರು.
ಮಹಾಂತೇಶ ಬೀಳಗಿ ಅವರು ಕೇವಲ ವ್ಯಕ್ತಿಯಾಗಿರದೆ, ಸ್ನೇಹಜೀವಿಯಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಅವರ ಮೃದು ಮಾತು, ಪರೋಪಕಾರಿ ಗುಣ ಹಾಗೂ ನಿಸ್ವಾರ್ಥ ಸೇವೆ ಇಂದಿನ ದಿನಗಳಲ್ಲಿ ಅಪರೂಪವಾಗಿತ್ತು. ಅವರ ಅಗಲಿಕೆ ಸಮಾಜಕ್ಕೆ ಹಾಗೂ ಅವರ ಒಡನಾಡಿಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಲಿಂಗೈಕ್ಯ ಮಹಾಂತೇಶ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಭಗವಂತನು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಅವರು ಮಾತನಾಡಿ, ಮಹಾಂತೇಶ ಬೀಳಗಿ ಅವರದು ಆಕರ್ಷಕ ವ್ಯಕ್ತಿತ್ವ. ಅವರ ನಿಸ್ವಾರ್ಥ ಸೇವೆ ಮತ್ತು ಮಾರ್ಗದರ್ಶನದಿಂದಾಗಿ ರವಿ ಚನ್ನಣ್ಣನವರಂತ ಐಪಿಎಸ್, ಯಶೋದಾ ಒಂಗೊಡಿ ಅವರಂತ ಎಸ್.ಪಿಗಳು ಪೆÇಲೀಸ್ ಇಲಾಖೆಗೆ ಸೇವೆಗೆ ಸೇರಿದ್ದಾರೆ. ಧಾರವಾಡದ ಕೀರ್ತಿಯನ್ನು ಅವರು ರಾಷ್ಟ್ರಮಟ್ಟಕ್ಕೆ ಹೆಚ್ಚಿಸಿದ್ದರು. ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಅವರು ನಿರಂತರವಾಗಿ ಪ್ರೇರಣೆ ನೀಡುತ್ತಿದ್ದರು ಎಂದರು.
ಅಧಿಕಾರಿಯಾಗಿ ಕಾರ್ಯನಿರ್ವಹಿಸುವಾಗಲೂ ತಮ್ಮ ಸರಳತೆ ಮತ್ತು ಸಜ್ಜನಿಕೆಯನ್ನು ಬಿಟ್ಟುಕೊಡದ ಮಹಾಂತೇಶ್ ಅವರು, ಇಂದಿನ ಅನೇಕ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ. ಸ್ವತಃ ಆಸಕ್ತಿ ವಹಿಸಿ ಮಕ್ಕಳಿಗೆ ಇಂಗ್ಲಿμï ವ್ಯಾಕರಣ ಬೋಧಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ ಎಂದು ಅವರು ತಿಳಿಸಿದರು.
ಅವರು ಒಬ್ಬ ಜನಸ್ನೇಹಿ ಅಧಿಕಾರಿಯಾಗಿ, ಕರ್ತವ್ಯ ನಿರ್ವಹಿಸಿದ್ದ ಊರುಗಳಲ್ಲಿ ಮೆಚ್ಚುಗೆ ಗಳಿಸಿದ್ದರು. ಅವರ ವ್ಯಕ್ತಿತ್ವ ನಮಗೆಲ್ಲ ಮಾದರಿ ಆಗಿದೆ ಎಂದು ಶಾಲಂ ಹುಸೇನ್ ತಿಳಿಸಿದರು.
ಧಾರವಾಡ ತಹಶೀಲ್ದಾರ ಡಾ. ಡಿ.ಎಚ್.ಹೂಗಾರ ಅವರು ಮಾತನಾಡಿ, ಧಾರವಾಡದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಅವರು ತೋರುತ್ತಿದ್ದ ಕಾರ್ಯಕ್ಷಮತೆ ಮತ್ತು ಜನಪರ ಕಾಳಜಿ ಇಂದಿಗೂ ಸ್ಮರಣೀಯವಾಗಿದೆ. ಉನ್ನತ ಹುದ್ದೆಯಲ್ಲಿದ್ದರೂ ಅಹಂಕಾರವಿಲ್ಲದೆ, ಎಲ್ಲರೊಂದಿಗೂ ಬೆರೆಯುವ ಅವರ ಗುಣ ಅವರನ್ನು ಅಧಿಕಾರಿಯನ್ನಾಗಿ ಮಾಡಿತ್ತು ಎಂದು ತಿಳಿಸಿದರು.
ಕೇವಲ ಆಡಳಿತಾತ್ಮಕ ಕೆಲಸಗಳಿಗೆ ಸೀಮಿತವಾಗದೆ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲ ಹೊಂದಿದ್ದ ಮಹಾಂತೇಶ್ ಅವರು ಶೈಕ್ಷಣಿಕ ಕ್ಷೇತ್ರಕ್ಕೂ ಅಮೂಲ್ಯ ಕಾಣಿಕೆ ನೀಡಿದ್ದಾರೆ. ತಮ್ಮ ಸರಳ ವ್ಯಕ್ತಿತ್ವ ಮತ್ತು ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದಾಗಿ ಮಹಾಂತೇಶ ಅವರು ಧಾರವಾಡ ಭಾಗದ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಹೇಳಿದರು.
ಬೀಳಗಿ ಸರ್ ನಮಗೆಲ್ಲ ದೊಸ್ತ್ ಅಂತಾ ಮಾತಾಡಿಸಿ, ನಮ್ಮ ಸಮಸ್ಯೆಗಳಿಗೆ ಪರಿಹಾರ ಹೇಳುತ್ತಿದ್ದರು. ನೌಕರ ಸ್ನೇಹಿ ಆಗಿ ಅವರು ಎಲ್ಲ ಸಿಬ್ಬಂದಿಗಳಿಗೆ ಗೌರವಯುತವಾಗಿ ಮಾತನಾಡಿ, ವಿಶ್ವಾಸ ತುಂಬುತ್ತಿದ್ದರು. ಕೆಲಸದಲ್ಲಿ ವಿಳಂಬ, ತಪ್ಪುಗಳಾದರೂ ತಿದ್ದಿ ಹೇಳುತ್ತಿದ್ದರು. ಅವರಲ್ಲಿ ಮಾನವೀಯತೆ ಮನೆ ಮಾಡಿತ್ತು. ಕಚೇರಿಗೆ ಬರುವ ಸಾರ್ವಜನಿಕರನ್ನು ತಮ್ಮ ಕುಟುಂಬ ಸದಸ್ಯರಂತೆ ಕಾಣುತ್ತಿದ್ದರು. ಬಡವರ ಬಗ್ಗೆ, ಗ್ರಾಮೀಣ ಜನರ ಬಗ್ಗೆ ಅವರಿಗೆ ಅತಿಯಾದ ಕಾಳಜಿ, ಕಳಕಳಿ ಇತ್ತು. ಅವರ ಆಡಳಿತಶೈಲಿ ನಮಗೆಲ್ಲ ಅನುಕರಣೀಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಚುನಾವಣಾ ತಹಶೀಲ್ದಾರ ಪ್ರವೀಣ ಹುಚ್ಚಣ್ಣವರ, ಸರಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ, ಡಿಸಿ ಕಚೇರಿಯ ಶಿರಸ್ತೆದಾರರಾದ ಮಲ್ಲಿಕಾರ್ಜುನ ಸೊಲಗಿ, ಕೆ. ಶ್ರೀಧರ, ಮುಖಂಡರಾದ ಲಕ್ಷ್ಮಣ ಬಕ್ಕಾಯಿ, ಮಹಾನಗರ ಪಾಲಿಕೆ ವಲಯ-3 ರ ಸಹಾಯಕ ಆಯುಕ್ತ ಅರವಿಂದ ಜಮಖಂಡಿ, ಎ.ಸಿ. ಕಚೇರಿ ತಹಶೀಲ್ದಾರ ಅಶ್ವಿನಿ ಚಡಚಣ, ಬೇಂದ್ರೆ ಟ್ರಸ್ಟ್ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ, ಪತ್ರಕರ್ತ ಜಾವೀದ ಅದೋನಿ ಸೇರಿದಂತೆ ಇತರರು ಮಾತನಾಡಿ ಮಹಾಂತೇಶ ಬೀಳಗಿ ಅವರಿಗೆ ನುಡಿನಮನ ಸಲ್ಲಿಸಿದರು.
ಕಂದಾಯ ನಿರೀಕ್ಷಕ ಗುರು ಸುಣಗಾರ ಸ್ವಾಗತಿಸಿದರು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ (ಪ್ರ) ಸುರೇಶ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಎ.ಸಿ ಕಚೇರಿಯ ಶಿರಸ್ತೆದಾರ ರವಿ ಕಟ್ಟಿ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಠಾಚಾರ ತಹಶೀಲ್ದಾರ ಪ್ರಭಾಕರ ಭಟ್, ಧಾರವಾಡ ತಹಶೀಲ್ದಾರ ಕಚೇರಿ ಶಿರಸ್ತೆದಾರ ರಮೇಶ ಬಂಡಿ, ನೌಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಪ್ರಕಾಶ ಹಳಪೇಟ, ಜಿಲ್ಲಾ ಪಂಚಾಯತ ಸಹಾಯಕ ಕಾರ್ಯದರ್ಶಿ ಅಜಯ ಎನ್., ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕ ನಿರ್ದೇಶಕ ರಾಜಶೇಖರ ಕಂಟೆಪ್ಪಗೌಡ್ರ, ಶಿರಸ್ತೇದಾರ ಶಿವಕುಮಾರ ಮೇಟಿ, ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಸಾಗರ ಫಡ್ನಿಸ್, ನೌಕರರ ಸಂಘದ ವಿವಿಧ ಪದಾಧಿಕಾರಿಗಳಾದ ನಂದೀಶ ಟಿ. ಖಾಕಂಡಕಿ, ರಾಜಶೇಖರ ಹೊನ್ನಪ್ಪನವರ, ಎನ್.ಎಸ್.ಕಮ್ಮಾರ, ಸೋಮು ಅಗಸಿಮನಿ, ಸಂಗಮೇಶ ಭಾವಿಕಟ್ಟಿ, ಆತ್ಮಾನಂದ ಸತ್ಯನ್ನವರ, ಅಮೀತ ಕಲ್ಯಾಣಶಟ್ಟರ, ಸಿ.ಸಿ. ಹಿರೇಮಠ, ಶಿಕ್ಷಕರಾದ ಸಿದ್ದು ಪಿ. ಹಿರೇಮಠ, ವಿನಾಯಕ ಬಿಸಲಹಳ್ಳಿ ಸೇರಿದಂತೆ ಶಾಲಾ ಶಿಕ್ಷಣ, ಖಜಾನೆ, ಭೂದಾಖಲೆಗಳ ಇಲಾಖೆ, ಪಂಚಾಯತ ರಾಜ್, ನೀರಾವರಿ, ವಾರ್ತಾ, ಅಂತರಜಲ ಸಂರಕ್ಷಣೆ, ವಾಣಿಜ್ಯ ತೆರಿಗೆ ಇಲಾಖೆ, ಧಾರವಾಡ ಎ.ಸಿ. ಕಚೇರಿ, ತಹಶೀಲ್ದಾರ ಕಚೇರಿ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿ, ಮಹಾಂತೇಶ ಬೀಳಗಿ ಅವರಿಗೆ ನಮನ ಸಲ್ಲಿಸಿದರು.

























