
ಬಾದಾಮಿ,ಡಿ.೨೦: ಸಹಕಾರಿ ಸಂಘಗಳನ್ನು ಕಟ್ಟುವುದು ಸುಲಭ. ಇವುಗಳನ್ನು ನಡೆಸಿಕೊಂಡು ಹೋಗುವುದು ತುಂಬಾ ಕಷ್ಟ. ಸಹಕಾರಿಸಂಘಗಳ ಬೆಳವಣಿಗೆಯಲ್ಲಿ ನಿರ್ದೇಶಕರು ಹಾಗೂ ಆಡಳಿತ ಮಂಡಳಿಯವರ ಪಾತ್ರ ಮಹತ್ತರವಾಗಿದೆ ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಹೊನ್ನಯ್ಯ ಹಿರೇಮಠ ಹೇಳಿದರು.
ಅವರು ಪಟ್ಟಣದ ಕುಮಾರೇಶ್ವರ ಕಲ್ಯಾಣ ಮಂಟಪದಲ್ಲಿ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರಿ ಯುನಿಯನ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾದಾಮಿ-ಗುಳೇದಗುಡ್ಡ ತಾಲೂಕಿನ ಎಲ್ಲ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ನಿರ್ದೇಶಕರು ಹಾಗೂ ಆಡಳಿತ ಮಂಡಳಿಯವರು ಕೂಡಿದಾಗ ಚಪ್ಪಾಳೆ ಸಾಧ್ಯ. ನಿರ್ದೇಶಕರು, ಆಡಳಿತ ಮಂಡಳಿಯವರು, ಸಿಬ್ಬಂದಿಗಳು ಸೇರಿದಾಗ ಸಂಘಗಳ ಬೆಳವಣಿಗೆಯಾಗುತ್ತದೆ. ಇವುಗಳನ್ನು ಉಳಿಸಿ ಬೆಳೆಸಬೇಕಾದರೆ ಎಲ್ಲರ ಸಹಕಾರ ಬಹಳ ಮುಖ್ಯ. ಸಂಘಗಳಲ್ಲಿ ಯಾವುದೇ ಹಣಕಾಸಿನ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯ ಮೇಲೆ ಸಹಕಾರಿ ಯುನಿಯನ್ ನಿರ್ದೇಶಕ ಮುತ್ತಪ್ಪ ಹುಗ್ಗಿ, ರಾಜ್ಯ ಕುರಿ ಸಾಕಾಣಿಕೆ ಹಾಗೂ ಉಣ್ಣೆ ಉತ್ಪಾದಕರ ಸಹಕಾರಿ ಸಂಘಗಳ ಮಹಾಮಂಡಳದ ಉಪಾಧ್ಯಕ್ಷ ಕಾಶಿನಾಥ ಹುಡೇದ, ಹನಮಂತ ದೊಡ್ಡಸಿನ್ನನ್ನವರ ಹಾಜರಿದ್ದರು. ಅನ್ನಪೊರ್ಣ ಹೇಮವಾಡಗಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ನಂತರ ಸಹಕಾರಿ ಸಂಘಗಳ ಅಧಿಕ್ಷಕ ಹನಮಂತ ದೊಡ್ಡಸಿನ್ನನ್ನವರ ಇವರು ನಿರ್ದೇಶಕರ ಹಕ್ಕು ಮತ್ತು ಕರ್ತವ್ಯಗಳು ಮತ್ತು ಚುನಾವಣಾ ಪ್ರಕ್ರಿಯೆ ಕುರಿತು ಸುವಿವರವಾಗಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕಿನ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕರು ಭಾಗವಹಿಸಿದ್ದರು.























