ವಿಶೇಷ ಚೇತನರು ಬುದ್ದನ ಮಕ್ಕಳು: ಕೆ.ವಿ.ಪ್ರಭಾಕರ್

ಬೆಂಗಳೂರು.ಆ೨೨: ಭಿನ್ನ, ವಿಭಿನ್ನ ಸಾಧ್ಯತೆಗಳ ವಿಶೇಷ ಚೇತನರು ಹುಟ್ಟುತ್ತಲೇ ಮನುಷ್ಯ ಜಗತ್ತಿನ ಸಣ್ಣತನಗಳಿಂದ ಮುಕ್ತರಾದವರು. ಹೀಗಾಗಿ ಇವರೆಲ್ಲರೂ ಬುದ್ದನ ಮಕ್ಕಳು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಬಣ್ಣಿಸಿದರು.


ಬಾಲಭವನದಲ್ಲಿ ನಡೆದ “ವಿಶೇಷ ಚೇತನ ಮಕ್ಕಳ ಸ್ವಾತಂತ್ರ್ಯ ದಿನಾಚರಣೆ ಮತ್ತು ಸಾಂಸ್ಕೃತಿಕ ಕಲರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಿನ್ನ ಚೇತನರನ್ನು ಸಮಾಜದ ಅಸಹಜ ರೂಢಿಗತ ಕಣ್ಣುಗಳಿಂದ ನೋಡುವುದಕ್ಕಿಂತ ಮನುಷ್ಯ ಸಹಜ ಒಳಗಣ್ಣುಗಳಿಂದ ಗಮನಿಸಬೇಕಿದೆ.


ಈ ಮಕ್ಕಳು ಜೀವನ ಪರ್ಯಂತ ಮಕ್ಕಳಾಗೇ ಇರುತ್ತಾರೆ. ಅಂದರೆ ಮಗುವಿನ ಸಹಜ ನಿಷ್ಕಲ್ಮಷ ಸ್ವಭಾವ ಜೀವನವಿಡೀ ಇರುತ್ತದೆ. ಈ ಮಕ್ಕಳು ಸುಳ್ಳು ಹೇಳುವುದಿಲ್ಲ.ಈ ಮಕ್ಕಳು ವಂಚಕರಾಗುವುದಿಲ್ಲ.ಈ ಮಕ್ಕಳು ಕಳ್ಳರು, ಕೊಲೆಗಾರರಾಗುವುದಿಲ್ಲ.ಈ ಮಕ್ಕಳು ಹೊಟ್ಟೆಕಿಚ್ಚು ಪಡುವುದಿಲ್ಲ.ಈ ಮಕ್ಕಳು ದುರಾಸೆ ಪಡುವುದಿಲ್ಲ.ಈ ಮಕ್ಕಳು ಜಾತಿವಾದಿಗಳಾಗುವುದಿಲ್ಲ.ಈ ಮಕ್ಕಳು ಕೋಮುವಾದಿಗಳಾಗುವುದಿಲ್ಲ.


ಹೀಗಾಗಿ ಇವರೆಲ್ಲರೂ ಹುಟ್ಟುತ್ತಲೇ ಉಳಿದ ಮನುಷ್ಯ ಜಗತ್ತು ಆಚರಿಸುವ ಸಣ್ಣತನಗಳಿಂದ ಮುಕ್ತವಾಗಿ ತೊಳೆದ ನೀತಿನಂಥಾ ವ್ಯಕ್ತಿಗಳಾಗುತ್ತಾರೆ.


ಬುದ್ದ ಜೀವಮಾನವಿಡೀ ಮನುಷ್ಯ ಜಗತ್ತನ್ನು ಸಣ್ಣತನಗಳಿಂದ ಮುಕ್ತಿಗೊಳಿಸಲು ಶ್ರಮಿಸಿದ್ದರು. ಅದಕ್ಕೇ ಇವರೆಲ್ಲರೂ ಬುದ್ದನ ಮಕ್ಕಳು. ಹೀಗಾಗಿ ನನಗೆ ಈ ಮಕ್ಕಳ ಬಗ್ಗೆ ಮಾತನಾಡುವುದು ಏನೂ ಇಲ್ಲ.


ಆಗಸ್ಟ್ ೧೫ ರಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಪರೇಡ್ ನಲ್ಲಿ ದೃಷ್ಟಿಹೀನ ಮಕ್ಕಳ ತಂಡವೂ ಉಳಿದ ಮಕ್ಕಳ ತಂಡದಷ್ಟೇ ಯಶಸ್ವಿಯಾಗಿ ಭಾಗವಹಿಸಿತ್ತು. ದೇಶಕ್ಕೆ ಒಲಂಪಿಕ್ ನಲ್ಲಿ, ಕ್ರೀಡೆಗಳಲ್ಲಿ ಅತಿ ಹೆಚ್ಚು ಪದಕ ತರುತ್ತಿರುವುದು ಭಿನ್ನ ಚೈತನ್ಯದ ಪಟುಗಳೇ ಎನ್ನುವುದನ್ನು ಮರೆಯಬಾರದು. ಹೀಗಾಗಿ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಮುಂದಿನ ಜನವರಿ ೨೬ ಮತ್ತು ಆಗಸ್ಟ್ ೧೫ ರಂದು ವಿಶೇಷ ಚೇತನ ಮಕ್ಕಳ ತಂಡವೂ ಮಾಣಿಕ್ ಷಾ ಪರೇಡ್ ಮೈದಾನದಲ್ಲೇ ಉಳಿದ ಮಕ್ಕಳ ಜೊತೆ ಪ್ರದರ್ಶನ ನೀಡುವಂತಾಗಲಿ ಎಂದು ಬಯಸುತ್ತೇನೆ ಎಂದರು.


ಬಾಲಭವನ ಅಧ್ಯಕ್ಷರಾದ ಬಿ.ಆರ್.ನಾಯ್ಡು, ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ನಟರಾಜ್ ಹಾಗೂ ೧೮ ಟಿoಣ ouಣ ಸರ್ಕಾರೇತರ ಸಂಸ್ಥೆಯ ಮುಖ್ಯಸ್ಥರಾದ ಬಸವರಾಜು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ೩೦೦ ಕ್ಕೂ ಹೆಚ್ಚು ಭಿನ್ನ, ವಿಭಿನ್ನ ಚೈತನ್ಯದ ಮಕ್ಕಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.