
ಬೆಂಗಳೂರು, ಜ. ೧೪- ಮನರೇಗಾ ಬದಲಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮ್‌ಜಿ ಕಾಯ್ದೆ ಬಗ್ಗೆ ಚರ್ಚಿಸಲು ಈ ತಿಂಗಳ ೨೭ ರಿಂದ ಮೂರು ದಿನಗಳ ವಿಧಾನಮಂಡಲದ ಅಧಿವೇಶನ ನಡೆಯಲಿದೆ.
ವಿಶೇಷ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಚಿವ ಸಭಾ ಮಂದಿರದಲ್ಲಿ ನಡೆದ ಸಚಿವ ಸಂಪುಟದ ತುರ್ತು ಸಭೆಯಲ್ಲಿ ವಿಬಿಜಿ ರಾಮ್‌ಜಿ ಕಾಯ್ದೆ ಬಗ್ಗೆ ಚರ್ಚಿಸಲು ವಿಧಾನಮಂಡಲದ ವಿಶೇಷ ಅಧಿವೇಶನ್ನು ಈ ತಿಂಗಳ ೨೭ ರಿಂದ ಮೂರು ದಿನಗಳ ಕಾಲ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಈ ವಿಶೇಷ ಅಧಿವೇಶನದಲ್ಲಿ ವಿಬಿಜಿ ರಾಮ್‌ಜಿ ಕಾಯ್ದೆಯನ್ನು ರದ್ದು ಮಾಡಿ ಮನರೇಗಾ ಕಾಯ್ದೆಯನ್ನೇ ಮರು ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ರಾಜ್ಯಸರ್ಕಾರ ಕೈಗೊಂಡಿದೆ.
ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಬಿಜಿ ರಾಮ್‌ಜಿ ಕಾಯ್ದೆಯನ್ನು ವಿರೋಧಿಸಿ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಅಲ್ಲದೆ, ಈ ಕಾಯ್ದೆ ವಿರುದ್ಧ ಕಾನೂನು ಹೋರಾಟ ನಡೆಸುವತೀರ್ಮಾನವನ್ನು ರಾಜ್ಯಸರ್ಕಾರ ಕೈಗೊಂಡಿತ್ತು. ಹಾಗೆಯೇ ಮನರೇಗಾ ಮತ್ತು ವಿಬಿಜಿ ರಾಮ್‌ಜಿ ಕಾಯ್ದೆಯ ಸಾಧಕ ಬಾಧಕಗಳ ಬಗ್ಗೆ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕು ಎಂಬ ಚರ್ಚೆಗಳು ನಡೆದಿದ್ದವು. ಅದರಂತೆ ಇಂದು ನಡೆದ ಸಚಿವ ಸಂಪುಟದ ತುರ್ತು ಸಭೆಯಲ್ಲಿ ವಿಬಿಜಿ ರಾಮ್‌ಜಿ ಕಾಯ್ದೆ ಬಗ್ಗೆಚರ್ಚಿಸಲುಈ ತಿಂಗಳ ೨೭ ರಿಂದ ೩ ದಿನಗಳ ಕಾಲ ವಿಧಾನಮಂಡಲದ ಅಧಿವೇಶನವನ್ನು ಕರೆಯುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಮನರೇಗಾ ಯೋಜನೆಯನ್ನು ಬದಲಿಸಿ ವಿಬಿಜಿ ರಾಮ್‌ಜಿ ಕಾಯ್ದೆ ಜಾರಿ ಮಾಡಿರುವುದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷ ರಾಷ್ಟ್ರಾದ್ಯಾಂತ ಈ ಬಗ್ಗೆ ಹೋರಾಟಕ್ಕೆ ಮುಂದಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ವಿಬಿಜಿ ರಾಮ್‌ಜಿ ಕಾಯ್ದೆ ವಿರುದ್ಧ ಸಮರ ಸಾರಿದ್ದು, ರಾಜ್ಯದಲ್ಲೂ ಮನರೇಗಾ ಬಚಾವ್ ಸಂಗ್ರಾಮವನ್ನು ನಡೆಸಲು ಮುಂದಾಗಿದೆ. ಜತೆಗೆ ಮನರೇಗಾ ಯೋಜನೆಯನ್ನು ರದ್ದು ಮಾಡಿ ವಿಬಿಜಿ ರಾಮ್‌ಜಿ ಕಾಯ್ದೆಯನ್ನು ತಂದಿರುವ ಬಗ್ಗೆ ಕಾನೂನು ಹೋರಾಟಕ್ಕೂ ತೀರ್ಮಾನ ಮಾಡಿದೆ.ಈಗ ಅಧಿವೇಶನದಲ್ಲಿ ವಿಬಿಜಿ ರಾಮ್‌ಜಿ ಕಾಯ್ದೆಯನ್ನು ರದ್ದುಗೊಳಿಸಿ ಮೊದಲಿನಂತೆಮನರೇಗಾ ಯೋಜನೆಯನ್ನು ಜಾರಿ ಮಾಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ನಿರ್ಣಯ ಕೈಗೊಳ್ಳಲಾಗಿದ್ದು, ವಿಬಿಜಿ ರಾಮ್‌ಜಿ ಸಮರ ಅಧಿವೇಶನವನ್ನು ಕಾವೇರಿಸುವುದು ನಿಶ್ಚಿತ.
ಮೊದಲ ದಿನ ರಾಜ್ಯಪಾಲರ ಭಾಷಣ ನಂತರ ಕಾಯ್ದೆ ಬಗ್ಗೆ ಚರ್ಚೆ
ವರ್ಷದ ಮೊದಲ ವಿಧಾನಮಂಡಲದ ಅಧಿವೇಶನವು ರಾಜ್ಯಪಾಲರ ಭಾಷಣದೊಂದಿಗೆ ಜಂಟಿ ಅಧಿವೇಶನ ನಡೆಸಬೇಕಾಗುತ್ತದೆ. ಹಾಗಾಗಿ ವಿಬಿಜಿ ರಾಮ್‌ಜಿ ಕಾಯ್ದೆ ಕುರಿತು ಚರ್ಚೆಗೆ ಕರೆಯಲಾಗುವ ವಿಶೇಷ ಅಧಿವೇಶನದ ಮೊದಲ ದಿನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡುವರು. ಅವರ ಭಾಷಣನಂತರ ಸದನವನ್ನು ಜ. ೨೮ಕ್ಕೆ ಮುಂದೂಡಲಾಗುತ್ತದೆ. ಜ. ೨೮ ಮತ್ತು ೨೯ ರಂದು ವಿಬಿಜಿ ರಾಮ್‌ಜಿ ಕಾಯ್ದೆ ಬಗ್ಗೆ ಚರ್ಚೆ, ಖಂಡನಾ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ಬರುವ ಮಾರ್ಚ್‌ನಲ್ಲಿ ನಡೆಯುವ ಬಜೆಟ್ ಅಧಿವೇಶನದಲ್ಲಿ ನಡೆಸಲಾಗುತ್ತದೆ ಎಂದು ಮೂಲಗಳು ಹೇಳಿವೆ.




























