
ಆನೇಕಲ್.ಡಿ,೧-ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿ ಎಂದು ಆನೇಕಲ್ ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ಆನೇಕಲ್ ಬ್ಲಾಕ್ ಯುವ ಕಾಂಗ್ರೆಸ್‌ನ ಅಧ್ಯಕ್ಷರಾದ ನಾಗನಾಯಕನಹಳ್ಳಿ ಆರ್.ಸಂದೀಪ್ ರವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಇನ್ನು ದೇವರ ಸನ್ನಿಧಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರವಿಟ್ಟು ಯುವ ಕಾಂಗ್ರೆಸ್ ಪದಾದಿಕಾರಿಗಳು ವಿಶೇಷ ಪೂಜೆ ಸಲ್ಲಿಸಿ ನಂತರ “ಆಗಲಿ ಆಗಲಿ” ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿ’ ಎಂದು ಘೋಷಣೆಗಳನ್ನು ಕೂಗಿದರು. ಬಳಿಕ, ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಸಿದರು.
ಈ ವೇಳೆ ಆನೇಕಲ್ ಬ್ಲಾಕ್ ಯುವ ಕಾಂಗ್ರೆಸ್‌ನ ಅಧ್ಯಕ್ಷರಾದ ನಾಗನಾಯಕನಹಳ್ಳಿ ಆರ್. ಸಂದೀಪ್ ರವರು ಸುದ್ದಿಗಾರರೊಂದಿಗೆ ಮಾತನಾಡಿ ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ಪಕ್ಷಕ್ಕಾಗಿ ೪೦ ವರ್ಷಗಳ ಕಾಲ ದುಡಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಡಿ.ಕೆ. ಶಿವಕುಮಾರ್ ಅವರು ಹೆಚ್ಚಿನ ಶ್ರಮ ವಹಿಸಿದ್ದಾರೆ. ಅವರ ದುಡಿಮೆಗಾಗಿ ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನದ ಕೂಲಿ ನೀಡಬೇಕು. ಪಕ್ಷಕ್ಕೆ ದುಡಿದವರಿಗೆ ಗೌರವಯುತವಾದ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಒತ್ತಾಯಿಸಿದರು.


























