
ಜೇವರ್ಗಿ: ಪಟ್ಟಣ ಹೊರವಲಯದ ಕೋಂದಮಿರುದ್ದೀನ್ ಸಾಬ್ ದರ್ಗಾದಲ್ಲಿ ಮುಸ್ಲಿಂ ಸಮುದಾಯದವರು ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದ ಮುಸ್ಲಿಂ ಬಸ್ತಿ, ಜೋಪಡಪಟ್ಟಿ, ಖಾಜಾ ಕಾಲೊನಿ, ಮುನ್ನಿ ಕಾಲೊನಿ ಹಾಗೂ ಇತರೆ ಬಡಾವಣೆಗಳ ನೂರಾರು ಜನರು ಮೌಲ್ವಿಗಳ ನೇತೃತ್ವದಲ್ಲಿ ಮಂಗಳವಾರ ದರ್ಗಾ ಬಳಿಯ ಈದ್ಧಾ ಮೈದಾನದಲ್ಲಿ ಒಂದು ತಾಸು ಪ್ರಾರ್ಥನೆ ಸಲ್ಲಿಸಿದರು.
ಮಸೀದಿಯಲ್ಲಿ ನಿತ್ಯ ಸಲ್ಲಿಸುವ ಪ್ರಾರ್ಥನೆಗಿಂತ ಭಿನ್ನವಾದ ಸಲಾತ್ ಅಲ್ ಇಸ್ತಿಸ್ಕಾ ನಮಾಜ್ ಸಲ್ಲಿಸಲಾಯಿತು. ಈ ವೇಳೆ ಮುಸ್ಲಿಮರು ಕೈಗಳನ್ನು ಭೂಮಿಯತ್ತ ತಿರುಗಿಸಿ ಅಲ್ಲಾಹುನಲ್ಲಿ ಕ್ಷಮೆಯಾಚಿಸಿ, ಮಳೆ ಸುರಿಸಿ ಸಮೃದ್ಧಿ ಕರುಣಿಸುವಂತೆ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಾಜೀದ್ ಸೇಠ ಗಿರಣಿ, ಮಹಿಮೂದ್ ನೂರಿ, ಬಶೀರಸಾಬ ಇನಾಮದಾರ, ಮೋಹಿಯುದ್ದೀನ್ ಇನಾಮದಾರ, ಅಮೀರಸಾಬ್ ಜಮಾದಾರ, ಇಬ್ರಾಹಿಂ ಪಟೇಲ್ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.























