ಬಾಗಲಕೋಟೆ,ಆ12: ಜಿಲ್ಲೆಯಲ್ಲಿರುವ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿರುವ ಮಕ್ಕಳ ಆಧಾರ ನೋಂದಣಿಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಆಧಾರ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿಯೊಂದು ಮಗು ಆಧಾರ ಕಾರ್ಡ ಹೊಂದುವುದು ಅಗತ್ಯವಾಗಿದ್ದು, ಈ ಹಿನ್ನಲೆಯಲ್ಲಿ ಪ್ರತಿಯೊಂದು ಶಾಲೆಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ರೂಟ್ ಮ್ಯಾಪ್ ಹಾಕಿಕೊಳ್ಳಲು ಸೂಚನೆ ನೀಡಿದರು.
ಹೊಸದಾಗಿ ಆಧಾರ ನೋಂದಣಿ, ಲಿಂಗ, ಜನ್ಮ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆಗಳ ಸರಿಪಡಿಸುವಿಕೆ, ನವೀಕರಣಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಸರಿಪಡಿಸಲು ಸರಕಾಋ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಪಡೆದುಕೊಳ್ಳತಕ್ಕದ್ದು. ನಿಗದಿತ ಹಣಕ್ಕಿಂತ ಹೆಚ್ಚಿನ ಹಣ ಪಡೆದಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು. 5 ರಿಂದ 7 ವರ್ಷ ಹಾಗೂ 15 ರಿಂದ 17 ವರ್ಷದೊಳಗಿನವರಿಗೆ ಒಂದು ಬಾರಿಗೆ ಉಚಿತವಾಗಿ ನವೀಕರಣಕ್ಕೆ ಅವಕಾಶವಿದೆ. ಇಲ್ಲದಿದ್ದಲ್ಲಿ 100 ರೂ.ಗಳನ್ನು ನೀಡಬೇಕಾಗುತ್ತದೆ ಎಂದರು.
ಬಯೋಮೆಟ್ರಿಕ್ ನವೀಕರಣ ಸಮಯದಲ್ಲಿ ಮಾಡಿದರೆ ಉಚಿತವಾಗಿದ್ದು, ಪ್ರತ್ಯೇಕವಾಗಿ 50 ರೂ. ಶುಲ್ಕವಿರುತ್ತದೆ. ಮೈ ಆಧಾರ ಪೋರ್ಟಲ್‍ನಲ್ಲಿ ಜೂನ್ 14, 2026 ವರೆಗೆ ಉಚಿತವಾಗಿದೆ. ಆಧಾರ ಕೇಂದ್ರದಲ್ಲಿ ಮಾತ್ರ 50 ರೂ.ಶುಲ್ಕ ಪಾವತಿಸಿ ನವೀಕರಣ ಮಾಡಿಕೊಳ್ಳಬಹುದಾಗಿದೆ. ನಕಲಿ ಆಧಾರ ಕಾರ್ಡ ಕಂಡುಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗಳಲ್ಲಿ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ಆಧಾರ ನವೀಕರಣದ ಬಗ್ಗೆ ಸರಕಾರಿ ಕಾರ್ಯಕ್ರಮಗಳಲ್ಲಿ ಪೋಸ್ಟರ, ಕರಪತ್ರ ಹಂಚುವ ಮೂಲಕ ಅರಿವು ಮೂಡಿಸುವ ಕೆಲಸವಾಗಬೇಕು. ಅಂದಾಗ ಮಾತ್ರ ಆಧಾರ ನವೀಕರಣಕ್ಕೆ ಜನ ಮುಂದಾಗುತ್ತಾರೆ ಎಂದು ತಿಳಿಸಿದರು.
ಯುಐಡಿಎಐನ ಸಹಾಯಕ ವ್ಯವಸ್ಥಾಪಕ ಡೆವಿಡ್ ಅವರು ಜಿಲ್ಲೆಯಲ್ಲಿ ಆಧಾರ ನೋಂದಣಿ ಕೇಂದ್ರಗಳು 144 ಇದ್ದು, 24,08,331 ಆಧಾರ ಕಾರ್ಡ ಜನರೇಟ್ ಮಾಡಲಾಗಿದೆ. ಇದರಲ್ಲಿ 0 ದಿಂದ 5 ವರ್ಷದ 85,393, 5 ರಿಂದ 18 ವರ್ಷದೊಳಗಿನ 6,90,755 ಹಾಗೂ 18 ವರ್ಷ ಮೇಲ್ಪಟ್ಟವರು 16,32,183 ಜನರೇಟ ಆಗಿವೆ. 22,89,517 ಆಧಾರ ಕಾರ್ಡಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಲಾಗಿದೆ. 1,18,814 ಮೊಬೈಲ್ ಲಿಂಕ್‍ಗೆ ಬಾಕಿ ಉಳಿದಿವೆ. ಜಿಲ್ಲೆಯ 3,76,642 ವಿದ್ಯಾಥಿಗಳ ಪೈಕಿ 3,09,134 ವಿದ್ಯಾರ್ಥಿಗಳ ಆಧಾರ ಕಾರ್ಡ ಪರಿಶೀಲನೆಗೆ ಕಳುಹಿಸಿದ್ದು, ಆ ಪೈಕಿ 2,35,990 ಆಧಾರ ಕಾರ್ಡ ಪೂರ್ಣಗೊಂಡಿವೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಶಾಲಾ ಶಿಕ್ಷಣ ಇಲಾಖೆಯ ಉಪ ಸಮನ್ವಯಾಧಿಕಾರಿ ಸಿ.ಆರ್.ಓಣಿ, ಅಂಚೆ ಕಚೇರಿಯ ಅಧೀಕ್ಷಕ ಹಸದಿ, ಜಿಲ್ಲಾ ಅಗ್ರಣಿ ಬ್ಯಾಂಕನ ವ್ಯವಸ್ಥಾಪಕ ರಾಜಶೇಖರ ಹೂಗಾರ, ಜಿಲ್ಲಾ ಆಧಾರ ಸಮಾಲೋಚಕ ಸಿದ್ದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
























