ಬೀದರ್: ಅ.14:ನೆರೆಯ ಮಹಾರಾಷ್ಟ್ರ ಸರಕಾರದ ಮಾದರಿಯಲ್ಲಿ ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು ಹಾಗೂ ಬೆಳೆ ಸಾಲ ಮನ್ನಾ ಮಾಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಆಗ್ರಹಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು,
ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್‍ಗೆ 48 ಸಾವಿರ ರೂ. ಪರಿಹಾರ ನೀಡುತ್ತಿದೆ. ಜಿಲ್ಲೆಯ ರೈತರಿಗೂ ಕನಿಷ್ಠ ಹೆಕ್ಟೇರ್‍ಗೆ 50 ಸಾವಿರ ರೂ. ಪರಿಹಾರ ಕೊಡಬೇಕು. ದೀಪಾವಳಿ ಹಬ್ಬದೊಳಗೆ ರೈತರ ಖಾತೆಗೆ ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.
ಜೂನ್‍ನಿಂದ ಇದುವರೆಗೆ ಸುರಿದ ಮಳೆ ಮತ್ತು ನೆರೆಗೆ ಜಿಲ್ಲೆಯಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೆಳೆಗಳು ಹಾನಿಯಾಗಿವೆ. ಜಿಲ್ಲೆಯ 7 ಕಡೆ ಬೆಳೆಹಾನಿ ವೀಕ್ಷಣೆ ಮಾಡಲಾಗಿದ್ದು, ಎಲ್ಲೆಡೆ ರೈತರು ತಮ್ಮ ಮುಂದೆ ಗೋಳು ತೋಡಿಕೊಂಡಿದ್ದಾರೆ. ಕೃಷಿ ಜತೆಗೆ ತೋಟಗಾರಿಕೆ ಬೆಳೆಗಳು ಸಹ ನಷ್ಟವಾಗಿದೆ ಎಂದರು.
ಜಿಲ್ಲೆಯಲ್ಲಿ ಶೇ.90ರಷ್ಟು ಹೆಸರು, ಉದ್ದು, ಸೋಯಾಅವರೆ, ತೊಗರಿ, ಹತ್ತಿ ಇತರೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ಆದರೆ ಜಿಲ್ಲಾಡಳಿತವು ಸರಕಾರಕ್ಕೆ ಬರೀ 1.66 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ಹಾಳಾಗಿವೆಂದು ಅವೈಜ್ಞಾನಿಕ ವರದಿ ಸಲ್ಲಿಸಿದೆ. ಆದರೆ ವಾಸ್ತವದಲ್ಲಿ 2 ಲಕ್ಷಕ್ಕೂ ಅಧಿಕ ಹೆಕ್ಟೇರ್‍ನಲ್ಲಿ ಬೆಳೆ ಹಾನಿಯಾಗಿದೆ. ಶೇ.67ರಷ್ಟು ಬೆಳೆ ಹಾನಿಗೊಳಗಾದ ರೈತರ ಮಾಹಿತಿಯೇ ಸಂಗ್ರಹಿಸಿಲ್ಲ. ಹೀಗಾಗಿ ಸರಕಾರ ಮತ್ತೊಮ್ಮೆ ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೇ ನಡೆಸಿ ವರದಿ ತಯಾರಿಸಿ ಎಲ್ಲ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರೈತರ ಪರಿಹಾರದ ಹಣ ಬ್ಯಾಂಕ್‍ನವರು ಯಾವುದೇ ಕಾರಣಕ್ಕೂ ಸಾಲ ಕಡಿತ ಮಾಡಿಕೊಳ್ಳಬಾರದು. ರೈತರಿಗೆ ಹಣ ಕೊಡದಿದ್ದರೆ ಅಂತಹ ಬ್ಯಾಂಕ್ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿಯಾದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಶಾಸಕ ಪ್ರಭು ಚವ್ಹಾಣ, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಬುಡಾ ಮಾಜಿ ಅಧ್ಯಕ್ಷ ಬಾಬು ವಾಲಿ ಮಾತನಾಡಿದರು. ಬಿಜೆಪಿ ಸ್ಥಳಿಯ ಮುಖಂಡರಾದ ಈಶ್ವರಸಿಂಗ್ ಠಾಕೂರ್, ಗುರುನಾಥ ಜ್ಯಾಂತಿಕರ್, ಕಿರಣ ಪಾಟೀಲ್, ಗುರುನಾಥ ರಾಜಗೀರಾ, ಬಸವರಾಜ ಪವಾರ, ಶ್ರೀನಿವಾಸ ಚೌಧರಿ ಇತರರಿದ್ದರು.
ಅತಿವೃಷ್ಟಿ ಜಿಲ್ಲೆ ಘೋಷಣೆ ಮಾಡಿ
ಮಳೆ ಮತ್ತು ನೆರೆ ಪ್ರವಾಹದಿಂದಾಗಿ ಜಿಲ್ಲೆಯ ರೈತರು ತತ್ತರಿಸಿ ಹೋಗಿದ್ದಾರೆ. ಬೀದರ್ ಅತಿವೃಷ್ಟಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಔರಾದ್ ಶಾಸಕ ಪ್ರಭು ಚವ್ಹಾಣ ಸರಕಾರಕ್ಕೆ ಆಗ್ರಹಿಸಿದರು.
ರಾಜ್ಯದಲ್ಲಿ ಕುರ್ಚಿಗಾಗಿ ಕಿತ್ತಾಟ ನಡೆದಿದೆ. ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ. ರೈತ ವಿರೋಧ ಸರಕಾರ ಇದಾಗಿದೆ. ಕಾಂಗ್ರೆಸ್ ಸರಕಾರ ರೈತರ ಪರವಾಗಿಲ್ಲ. ಓಲೈಕೆ ರಾಜಕಾರಣ, ಗ್ಯಾರಂಟಿ ಎಂದು ಹೇಳಿಕೊಂಡು ರೈತರನ್ನು ಕಡೆಗಣಿಸಿದೆ. ಬೆಳೆ ನಷ್ಟಕ್ಕೆ ಮಧ್ಯಂತರ ಪರಿಹಾರವನ್ನೂ ನೀಡಿಲ್ಲ. ಸಮೀಕ್ಷೆಯನ್ನೂ ಸರಿಯಾಗಿ ಮಾಡುತ್ತಿಲ್ಲ. ರೈತರ ಸಾಲ ಮನ್ನಾ, ಮರು ಸಮೀಕ್ಷೆ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.18ರಂದು ಔರಾದ್‍ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಿಎಂ ಕಾಟಾಚಾರಕ್ಕೆ ವೈಮಾನಿಕ ಸಮೀಕ್ಷೆ
ಧಾರಾಕಾರ ಸುರಿದ ಮಳೆ, ನೆರೆ ಪ್ರವಾಹದಿಂದಾಗಿ ಹಾನಿಗೊಳಗಾದ ಪ್ರದೇಶಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಟಾಚಾರಕ್ಕೆ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಅತಿವೃಷ್ಟಿ ಭೂಮಿ ಮೇಲೆ ಕಾಲಿಡದೇ ಭೂತಾಯಿಗೆ ದ್ರೋಹ ಬಗೆದಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರವು ರೈತರ ಸಂಕಷ್ಟ ಗಂಭೀರವಾಗಿ ಪರಿಗಣಿಸಿಲ್ಲ. ಪಂಚಗ್ಯಾರಂಟಿ ಮುಂದಿಟ್ಟು 5 ವರ್ಷ ರಾಜ್ಯವನ್ನು ಅದೋಗತಿ ಮಾಡುವ ಸಂಕಲ್ಪ ಮಾಡಿದೆ. ರೈತರ, ಬಡವರ, ಕಾರ್ಮಿಕರ ಶಾಪ ಸಿಎಂ, ಡಿಸಿಎಂ ಸೇರಿ ಸಚಿವ ಸಂಪುಟದ ಎಲ್ಲ ಸಚಿವರಿಗೆ ತಟ್ಟಲಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾನ, ಮರ್ಯಾದೆ ಇದ್ದರೆ ಎರಡ್ಮೂರು ದಿನದೊಳಗೆ ಬೆಳೆಹಾನಿ ಪರಿಹಾರ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ರೈತರ ಬೆಳೆ ಸಾಲ ಮನ್ನಾ ಮಾಡಬೇಕು. ಸಂಕಷ್ಟದಲ್ಲಿರುವ ರೈತರಿಗೆ ಹಿಂಗಾರು ಬಿತ್ತನೆಗಾಗಿ ಉಚಿತ ಬೀಜ, ರಸಗೊಬ್ಬರ ವಿತರಣೆ ಮಾಡಬೇಕು. ಮಳೆಯಿಂದ ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್‍ಗೆ 50 ಸಾವಿರ ರೂ. ಪರಿಹಾರ ಹಣ ದೀಪವಾಳಿ ಹಬ್ಬದೊಳಗೆ ಅವರ ಖಾತೆಗೆ ಜಮೆ ಮಾಡಬೇಕು.
-ಡಾ.ಶೈಲೇಂದ್ರ ಬೆಲ್ದಾಳೆ ಶಾಸಕರು ಬೀದರ್ ದಕ್ಷಿಣ
ರೈತರ ಸಂಪೂರ್ಣ ಸಾಲ ಮನ್ನಾ, ಬೆಳೆಹಾನಿ ಮತ್ತು ಬೆಳೆವಿಮೆ ಪರಿಹಾರ ನೀಡುವುದು ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಜೆಪಿಯು 10 ಸಾವಿರ ರೈತರೊಂದಿಗೆ ಬಸವಕಲ್ಯಾಣದಲ್ಲಿ ಅ.17ರಂದು ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.
-ಸೋಮನಾಥ ಪಾಟೀಲ್ ಜಿಲ್ಲಾಧ್ಯಕ್ಷ ಬಿಜೆಪಿ ಬೀದರ್.






















