Home ಜಿಲ್ಲೆ ಬೆಂಗಳೂರು ಸ್ವಯಂ ಶಿಸ್ತು ಇಲ್ಲದೆ ಟ್ರಾಫಿಕ್ ಸಮಸ್ಯೆ ಪರಿಹಾರ ಅಸಾಧ್ಯ: ಕೃಷ್ಣ ಬೈರೇಗೌಡ

ಸ್ವಯಂ ಶಿಸ್ತು ಇಲ್ಲದೆ ಟ್ರಾಫಿಕ್ ಸಮಸ್ಯೆ ಪರಿಹಾರ ಅಸಾಧ್ಯ: ಕೃಷ್ಣ ಬೈರೇಗೌಡ

ಬೆಂಗಳೂರು, ಸೆ,೧-ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು, ಸಾರ್ವಜನಿಕರಲ್ಲಿ ಸ್ವಯಂ ಶಿಸ್ತು ಮೂಡದೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅಸಾಧ್ಯ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.


ನಗರದ ಸರ್ವಾಂಗೀಣ ಅಭಿವೃದ್ಧಿ ಕುರಿತು ಮಾಜಿ ಮಹಾಪೌರರಿಂದ ಸಲಹೆ-ಸೂಚನೆ ಪಡೆಯಲು ವಿಕಾಸಸೌಧದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಪ್ರಮುಖ ಸಮಸ್ಯೆಗಳಲ್ಲಿ ಟ್ರಾಫಿಕ್ ಸಮಸ್ಯೆ ಅಗ್ರಸ್ಥಾನದಲ್ಲಿದೆ. ಈಗಲೇ ಇದನ್ನು ನಿಯಂತ್ರಿಸದಿದ್ದರೆ ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲಾಗದಷ್ಟು ಗಂಭೀರವಾಗಲಿದೆ ಎಂದು ಎಚ್ಚರಿಸಿದರು.


ರಸ್ತೆ ನಿರ್ಮಿಸಿದರೂ ಪಾರ್ಕಿಂಗ್‌ಗೆ ಬಳಕೆ
ಎಲ್ಲಾ ಸರ್ಕಾರಗಳು ನಿರಂತರವಾಗಿ ರಸ್ತೆ ನಿರ್ಮಾಣ ಮಾಡುತ್ತಿವೆ. ಆದರೆ ನಿರ್ಮಾಣವಾಗುವ ರಸ್ತೆಗಳಲ್ಲಿ ಸುಮಾರು ಶೇ.೬೦ರಷ್ಟು ಭಾಗ ಪಾರ್ಕಿಂಗ್‌ಗೆ ಬಳಕೆಯಾಗುತ್ತಿದೆ. ಸಣ್ಣ ರಸ್ತೆಗಳಲ್ಲೂ ಎರಡೂ ಬದಿಯಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಸಂಚಾರಕ್ಕೆ ಅಡ್ಡಿಯಾಗಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಹೀಗಾಗಿ ಸರ್ಕಾರ ರಸ್ತೆ ನಿರ್ಮಿಸಿದರೂ ಜನರಿಂದ ಬೈಗುಳ ತಪ್ಪುತ್ತಿಲ್ಲ ಎಂದು ಸಚಿವರು ವಿಷಾದಿಸಿದರು.


ರಸ್ತೆಗಳಲ್ಲಿ ಶಿಸ್ತುಬದ್ಧ ಪಾರ್ಕಿಂಗ್ ವ್ಯವಸ್ಥೆ ಜಾರಿಯಾದರೆ ಟ್ರಾಫಿಕ್ ಕಿರಿಕಿರಿ ಬಹಳಷ್ಟು ಕಡಿಮೆಯಾಗಲಿದೆ. ಎರಡು ಕಿ.ಮೀ. ಒಳಗಿನ ಪ್ರಯಾಣಕ್ಕೆ ಮೈಕ್ರೋ ಮೊಬಿಲಿಟಿಗೆ ಉತ್ತೇಜನ ನೀಡಬೇಕಿದೆ. ಆದರೆ ಪಾದಚಾರಿ ಮಾರ್ಗ ತೆರವುಗೊಳಿಸುವ ಜೊತೆಗೆ ಸೂಕ್ತ ಪಾರ್ಕಿಂಗ್ ನಿಯಮಗಳನ್ನು ಜಾರಿಗೊಳಿಸುವುದು ಅಗತ್ಯ ಎಂದು ಹೇಳಿದರು.


ಪಾರ್ಕಿಂಗ್ ನಿಯಮಗಳ ಅನುಷ್ಠಾನಕ್ಕೆ ಪಾಲಿಕೆ ಮತ್ತು ಪೊಲೀಸರ ಬಳಿ ಅಗತ್ಯ ಪ್ರಮಾಣದ ಸಿಬ್ಬಂದಿ ಇಲ್ಲದಿರುವುದರಿಂದ, ಪ್ರತ್ಯೇಕ ಏಜೆನ್ಸಿಯನ್ನು ನಿಯೋಜಿಸಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.


ಕಟ್ಟಡ ನಿರ್ಮಾಣದಲ್ಲೂ ನಿಯಮ ಉಲ್ಲಂಘನೆ
ನಗರದಲ್ಲಿ ಕಟ್ಟಡ ನಿರ್ಮಾಣದ ಸಂದರ್ಭದಲ್ಲೂ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗುತ್ತಿದೆ. ಸೀವೇಜ್ ಸಂಪರ್ಕ ಬದಲಿಸದೆ, ಮನೆಗಳಲ್ಲಿ ಪಾರ್ಕಿಂಗ್‌ಗೆ ಜಾಗ ಮೀಸಲಿಡದೆ ಕಟ್ಟಡ ನಿರ್ಮಿಸುವ ಪ್ರವೃತ್ತಿ ಹೆಚ್ಚಿದೆ. ಇಂತಹ ವರ್ತನೆಯನ್ನು ಇನ್ನೆಷ್ಟು ದಿನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುವುದು ಅನಿವಾರ್ಯ ಎಂದು ಕೃಷ್ಣ ಬೈರೇಗೌಡ ಹೇಳಿದರು.


ಕಟ್ಟಡ ತ್ಯಾಜ್ಯಕ್ಕೆ ಜಿಪಿಎಸ್ ಕಡ್ಡಾಯ:

ಕಸದ ಸಮಸ್ಯೆ ನಿಯಂತ್ರಣಕ್ಕೂ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಿ&ಡಿ ತ್ಯಾಜ್ಯ ಸಾಗಿಸುವ ಎಲ್ಲಾ ವಾಹನಗಳ ನೋಂದಣಿ ಕಡ್ಡಾಯಗೊಳಿಸಲಾಗಿದ್ದು, ಜಿಪಿಎಸ್ ಅಳವಡಿಸುವುದನ್ನೂ ಕಡ್ಡಾಯ ಮಾಡಲಾಗಿದೆ. ತ್ಯಾಜ್ಯವನ್ನು ನಿಗದಿತ ಘಟಕಗಳಲ್ಲೇ ವಿಲೇವಾರಿ ಮಾಡುವಂತೆ ಐದು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದರು.


ಮಾಜಿ ಮಹಾಪೌರರಿಂದ ಹಲವು ಸಲಹೆಗಳು
ಸಭೆಯಲ್ಲಿ ಮಾಜಿ ಮಹಾಪೌರರು ನಗರದ ವಿವಿಧ ಸಮಸ್ಯೆಗಳ ಕುರಿತು ಹಲವು ಸಲಹೆಗಳನ್ನು ನೀಡಿದರು. ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುವುದು, ಕಸದ ಸಮಸ್ಯೆಗೆ ಶಾಶ್ವತ ಪರಿಹಾರ, ೨,೦೦೦ ಕೋಟಿ ವೆಚ್ಚದ ಬೃಹತ್ ನೀರುಗಾಲುವೆ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಹಾಗೂ ಸಂಚಾರ ದಟ್ಟಣೆ ಕಡಿಮೆ ಮಾಡಲು ಬಫರ್ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.


ಇದರ ಜೊತೆಗೆ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ, ಬೀದಿ ದೀಪಗಳ ದುರಸ್ತಿ, ಮೇಲ್ಸೇತುವೆಗಳ ನಿರ್ವಹಣೆ, ಹಳೆಯ ಮೇಲ್ಸೇತುವೆಗಳ ಬೇರಿಂಗ್ಸ್ ಪರಿಶೀಲನೆ, ರಸ್ತೆಬದಿ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕ್ರಮ, ಏಕಬಳಕೆ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಸೇರಿದಂತೆ ಹಲವು ಸಲಹೆಗಳನ್ನು ನೀಡಿದರು.


ಪಾಲಿಕೆಯೇ ಡಾಂಬರು ಘಟಕ ಸ್ಥಾಪಿಸಿ ರಸ್ತೆ ಡಾಂಬರೀಕರಣಕ್ಕೆ ಗುತ್ತಿಗೆದಾರರ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು. ತಿಂಗಳಿಗೊಮ್ಮೆ ಇ-ಖಾತಾ ಮೇಳ ಆಯೋಜಿಸಿ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಿಸಬೇಕು. ಅನಧಿಕೃತವಾಗಿ ರಸ್ತೆ ಕತ್ತರಿಸುವುದನ್ನು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಿಯಂತ್ರಿಸಬೇಕು ಎಂದು ಸಲಹೆ ನೀಡಲಾಯಿತು.


ನಗರದ ಗುಂಡಿ ಮುಚ್ಚುವಿಕೆ, ಬೀದಿ ದೀಪ ದುರಸ್ತಿ, ಕಸ ವಿಲೇವಾರಿ, ಪಾರ್ಕ್ ನಿರ್ವಹಣೆ, ಮರಗಳ ಕೊಂಬೆ ತೆರವು ಹಾಗೂ ಪಾರ್ಕ್‌ಗಳಲ್ಲಿನ ಹಳೆಯ ಆಟಿಕೆಗಳ ಬದಲಾವಣೆ ಸೇರಿದಂತೆ ನಾಗರಿಕರ ದೈನಂದಿನ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಮಾಜಿ ಮಹಾಪೌರರು ಒತ್ತಾಯಿಸಿದರು.


ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಎಂ. ಸೇರಿದಂತೆ ಮಾಜಿ ಮಹಾಪೌರರು, ಆಡಳಿತ ಪಕ್ಷದ ನಾಯಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.