
ಕಲಬುರಗಿ, ನ.5: ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ್ ಹರವಾಳ ಅವರು ಜೆಸ್ಕಾಂ ನಿಗಮ ಕಚೇರಿಯಲ್ಲಿರುವ ಸಹಾಯವಾಣಿ ಕೊಠಡಿಯಲ್ಲಿ ವಿದ್ಯುತ್ ಗ್ರಾಹಕರ ಅಹವಾಲು ಆಲಿಸಿದರು.
ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ವಿಲೇವಾರಿ ಖುದ್ದು ಗಮನಿಸಿ ಅದನ್ನು ಯಾವ ರೀತಿ ನಿರ್ವಹಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಮತ್ತು ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡುವ ಉದ್ದೇಶದಿಂದ ಅಧ್ಯಕ್ಷರು ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಜೆಸ್ಕಾಂ ನಿಗಮ ಕಚೇರಿಯಲ್ಲಿರುವ ಸಹಾಯವಾಣಿ ಕೊಠಡಿಯಲ್ಲಿ ಕೆಲ ಹೊತ್ತು ಕುಳಿತು ಕರೆಗಳನ್ನು ತಾವೇ ಸ್ವೀಕರಿಸಿ ಸಾರ್ವಜನಿಕರ ಅಹವಾಲು ಆಲಿಸಿದ ಪ್ರವೀಣ್ ಪಾಟೀಲ್ ಹರವಾಳ ಅವರು, ಜನರ ಕುಂದು ಕೊರತೆಗಳಿಗೆ ಸಿಬ್ಬಂದಿಯ ಸ್ಪಂದನೆಯನ್ನು ಗಮನಿಸಿ, ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜನರಿಗೆ ಯಾವುದೇ ರೀತಿ ಕುಂದು ಕೊರತೆ ಉಂಟಾಗದಂತೆ ನೋಡಿಕೊಳ್ಳುವುದೇ ನಮ್ಮ ಗುರಿ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾದಾಗ ಜನರು ಜೆಸ್ಕಾಂ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ, ಸಹಾಯವಾಣಿ 1912 ಕ್ಕೆ ಕರೆಮಾಡಿ ಅಥವಾ ವಾಟ್ಸಪ್ ಸಂಖ್ಯೆ 9480847593 ಮೂಲಕ ನಿಮ್ಮ ದೂರನ್ನು ಹಂಚಿಕೊಳ್ಳಬಹುದು ಪರಿಹಾರ ಕಂಡುಕೊಳ್ಳಬಹುದು ಎಂದು ಈ ವೇಳೆ ಅಧ್ಯಕ್ಷರು ವಿನಂತಿಸಿದರು.

































