ಕಲಬುರಗಿ:ಸೆ.6: ನಿವೃತ್ತ ಅಪರ ನಿಬಂಧಕರಾದ ಶರಣಬಸಪ್ಪ ಬೆಣ್ಣೂರ ಕುರಿತಾಗಿ ಹಿರಿಯ ಪತ್ರಕರ್ತ ಗುಂಡೂರಾವ ಕಡಣಿ ಸಂಪಾದಕತ್ವದ ಸಹಕಾರ ಜ್ಯೋತಿ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು.
ಕಲಬುರಗಿ: ಮಾಡಿದ ಅಭಿವೃದ್ಧಿ ಕಾರ್ಯಗಳು, ಸಮಾಜಮುಖಿ ಸೇವೆಗಳು ಹಾಗೂ ಬರೆದ ಸಾಹಿತ್ಯ ಅಜರಾಮರವಾಗಿರುತ್ತದೆ ಎಂದು ಶ್ರೀಶೈಲಂ -ಸುಲಫಲ ಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.
ನಗರದ ಆಳಂದ ರಸ್ತೆಯ ಬೆಣ್ಣೂರ ಪೆಟ್ರೋಲ್ ಪಂಪ ಎದರುಗಡೆಯ ಎಸ್.ಬಿ. ಕನ್ವೆನ್ಷನ್ ಹಾಲ್‍ದಲ್ಲಿ ಶುಕ್ರವಾರ ನಡೆದ ನಿವೃತ್ತ ಅಪರ ನಿಬಂಧಕ ಶರಣಬಸಪ್ಪ ಎ. ಬೆಣ್ಣೂರ ಅಭಿನಂದನಾ ಹಾಗೂ ಸಹಕಾರಿ ಜ್ಯೋತಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಟ್ಟಿದ ಗುಡಿ-ಗುಂಡಾರಗಳು ಬಿದ್ದು ಹೋಗುತ್ತವೆ, ಆಳಿದ ರಾಜರು ಮಣ್ಣುಪಾಲು ಆಗಿರುತ್ತಾರೆ. ಆದರೆ ಮಾಡಿದ ಕಾರ್ಯಗಳು ಜತೆಗೆ ಬರೆದ ಸಾಹಿತ್ಯಕ್ಕೆ ಭವಿಷ್ಯವಿದೆಯಲ್ಲದೇ ಶಾಶ್ವತವಾಗಿರುತ್ತದೆ. ಇದೇ ಕಾರಣಕ್ಕೆ ಸಾಹಿತ್ಯಕ್ಕೆ ಇಂದಿಗೂ ಬೆಲೆ ಇದೆ ಎಂದರಲ್ಲದೇ ಸಹಕಾರಿ ಕ್ಷೇತ್ರದಲ್ಲಿ ಮೂರು ದಶಕಗಳ ಕಾಲದುದ್ದಕ್ಕೂ ನಿವೃತ್ತ ಅಪರ ನಿಬಂಧಕ ಶರಣಬಸಪ್ಪ ಎ. ಬೆಣ್ಣೂರ ಮಾಡಿದ ಕಾರ್ಯಗಳು ಮಾದರಿಯಾಗಿದ್ದು ಹಾಗೂ ಅವರ ಕಾರ್ಯ ಹಾಗೂ ವ್ಯಕ್ತಿತ್ವ ಕುರಿತು ಹಿರಿಯ ಪತ್ರಕರ್ತ, ಲೇಖಕ ಗುಂಡೂರಾವ್ ಕಡಣಿ ಸಂಪಾಕದಲ್ಲಿ ಹೊರ ತರಲಾದ ಸಹಕಾರ ಜ್ಯೋತಿ ಸಾಹಿತ್ಯ (ಅಭಿನಂದನಾ ಗ್ರಂಥ) ಕೃತಿಯೂ ನಿಜಕ್ಕೂ ದೊಡ್ಡ ಕೊಡುಗೆಯಾಗಿ ಹೊರ ಹೊಮ್ಮಿವೆ ಎಂದು ಹೇಳಿದರು.
ಬೆಣ್ಣೂರ ಸರ್ಕಾರಿ ಅಧಿಕಾರಿಯಾಗಿ ಎಲ್ಲರೊಂದಿಗೆ ಬೆರೆತು, ಸೌಜನ್ಯದೊಂದಿಗೆ ಮಾಡಿರುವ ದೊಡ್ಡ ಕಾರ್ಯಗಳು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ರೈತ ಬಂದರೆ ಆತನೊಂದಿಗೆ, ಅಧಿಕಾರಿಗಳು ಅವರೊಂದಿಗೆ ಅಷ್ಟೇ ಏಕೆ, ಮಠಾಧೀಶರು ಬಂದರೆ ಅವರೊಂದಿಗೆ ಹೇಗೆ ಮಾತನಾಡಬೇಕೆಂಬುದನ್ನು ಬೆಣ್ಣೂರು ಅವರನ್ನು ನೋಡಿ ಈಗಿನವರು ಅರಿಯುವುದು ಅಗತ್ಯವಾಗಿದೆ ಎಂದು ಜಗದ್ಗುರುಗಳು ಕಿವಿ ಮಾತು ಹೇಳಿದರು.
ಕಡಗಂಚಿ ಮಠದ ವೀರತಪಸ್ವೀ ವೀರಭದ್ರ ಶಿವಾಚಾರ್ಯರು, ಚವದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು ಹಗೂ ಶ್ರೀನಿವಾಸಸರಡಗಿಯ ಡಾ. ಅಪ್ಪಾರಾವ ದೇವಿ ಮುತ್ಯಾ ಅವರು ಸಮ್ಮುಖತೆ ವಹಿಸಿ, ಶರಣಬಸಪ್ಪ ಅವರು ತಮ್ಮ ತಂದೆಯಂತೆ ಹೆಸರು ಮಾಡಿದ್ದಾರೆ. ನಿವೃತ್ತಿ ನಂತರವೂ ಹತ್ತಾರು ಸಮಾಜಮುಖಿ ಕಾರ್ಯಗಳು ಮುಂದುವರೆಯಲಿ ಎಂದು ಹೇಳಿದರು.
ಮಾಜಿ ಸಚಿವ ಎಸ್.ಕೆ. ಕಾಂತಾ ಸಮಾರಂಭ ಉದ್ಘಾಟಿಸಿ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ, ಸರ್ಕಾರಿ ಅಧಿಕಾರಿಗಳಿಗೆ ಒಳ್ಳೆಯವರು ಇಲ್ಲವೇ ಕೆಟ್ಟವರು ಎಂಬ ಎರಡೇ ಹೆಸರು ಬರುತ್ತವೆ. ಬೆಣ್ಣೂರ ಅವರ ಒಳ್ಳೆಯವರು ಎಂಬ ಹೆಸರು ಗಳಿಸಿದವರು. ಹೆಸರು ಕೆಡಿಸಿಕೊಂಡಿಲ್ಲ. ಪ್ರಮುಖವಾಗಿ ಸಾಕಷ್ಟು ರೈತರಿಗೆ ಸಹಾಯ ಮಾಡಿದ್ದಾರೆ ಎಂದು ವಿವರಣೆ ನೀಡಿದರು.
ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‍ನ ಅಧ್ಯಕ್ಷ ಸೋಮಶೇಖರ ಗೋನಾಯಕ ಮಾತನಾಡಿ, ಬೆಣ್ಣೂರ ಹಾಗೂ ತಾವು ಸಮಾನ ವಯಸ್ಕ ಹಾಗೂ ಸಮಾನ ಮನಸ್ಸಿನವರು. ಇದೇ ಕಾರಣ ಅವರು ಹಾಗೂ ತಾವು ಸಹಕಾರ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಜಿಲ್ಲೆಯ ಹೈನುಗಾರಿಕೆ ಹೆಚ್ಚಿಸುವ ನಿಟ್ಟಿನ ಕಾಮಧೇನು ಯೋಜನೆಯೇ ಇದಕ್ಕೆ ಸಾಕ್ಷಿ ಎಂದರು. ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಬೆಣ್ಣೂರ ಎಲ್ಲರೊಂದಿಗೆ ಸಾಮಾನ್ಯವಾಗಿ ಬೆರೆಯುತ್ತಿದ್ದರಲ್ಲದೇ ಕೆಲವೊಂದು ಸಂದರ್ಭದಲ್ಲಿ ಕಠಿಣ ನಿಲುವು ತಳೆಯುತ್ತಿದ್ದರಾದರೂ ಅದು ಸಮಾಜಮುಖಿಯೇ ಆಗಿರುತ್ತಿತ್ತು ಎಂದು ಹೇಳಿದರು.
ಸನ್ಮಾನ: ಸಮಾರಂಭದಲ್ಲಿ ಅಪರ ನಿಬಂಧಕರಾಗಿ ನಿವೃತ್ತಿ ಹೊಂದಿದ ಶರಣಬಸಪ್ಪ ಬೆಣ್ಣೂರ ದಂಪತಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅದೆ ತೆರನಾಗಿ ಸಹಕಾರ ಜ್ಯೋತಿ ಅಭಿನಂದನಾ ಗ್ರಂಥದ ಸಂಪಾದಕರಾದ ಗುಂಡೂರಾವ ಕಡಣಿ ಅವರನ್ನು ಸನ್ಮಾನಿಸಲಾಯಿತು. ತದನಂತರ ಗಣ್ಯರು ಹಾಗೂ ಮಠಾಧೀಶರು ಗ್ರಂಥ ಮೌಲ್ಯಧಾರಿತವಾಗಿ ಬಂದಿದೆ ಎಂದು ಶ್ಲಾಘಿಸಿದರು.
ಸೊನ್ನ ವಿರಕ್ತ ಮಠದ ಡಾ. ಶಿವಾನಂದ ಸ್ವಾಮಿಗಳು, ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎನ್. ಪಾಟೀಲ್, ಸಹಕಾರ ಸಂಘಗಳ ಜಂಟಿ ನಿಬಂಧಕ ವಿಶ್ವನಾಥ ಮಲಕೂಡ, ಮುಖಂಡರಾದ ನೀಲಕಂಠರಾವ ಮೂಲಗೆ, ಶರಣಬಸಪ್ಪ ಪಾಟೀಲ್ ಅಷ್ಠಗಾ, ಚಂದ್ರಶೇಖರ ಬೆಣ್ಣೂರ, ಧೂಳಪ್ಪ ಬೆಣ್ಣೂರ, ವಿಶ್ವನಾಥ ಬೆಣ್ಣೂರ, ನವೀನ ಬೆಣ್ಣೂರ ಹಾಗೂ ಬೆಣ್ಣೂರ ಗೆಳೆಯರ ಬಳಗದವರಾದ ಬಸವರಾಜ ವಾಲಿ, ಕೆ.ಎಸ್. ಮಾಲಿಪಾಟೀಲ್, ಅರುಣಕುಮಾರ ಪಾಟೀಲ್, ಡಾ. ಸಂಗಮೇಶ ಹಿರೇಮಠ, ಗುರುಬಸಪ್ಪ ಪಾಟೀಲ್, ಶ್ರೀಶೈಲ್ ಘೂಳಿ, ಚಂದ್ರಕಾಂತ ಬಿರಾದಾರ, ಸಿದ್ಧಣ್ಣಗೌಡ ಮಾಲಿಪಾಟೀಲ್, ಶಿವಶರಣಪ್ಪ ಜಮಾದಾರ, ರಾಜಶೇಖರ ಬಿರಾದಾರ ಸೇರಿದಂತೆ ಮುಂತಾದವರಿದ್ದರು. ಪ್ರಾಚಾರ್ಯರಾದ ಡಾ. ಸುರೇಶ ನಂದಗಾಂವ ಸ್ವಾಗತಿಸಿದರು. ಆರ್.ಜೆ ವಾಣಿ ನಿರೂಪಿಸಿದರು. ಡಾ. ಸೂರ್ಯಕಾಂತ ಪಾಟೀಲ್ ಸರಸಂಬಾ ವಂದಿಸಿದರು.
…………………………….
ಶರಣಬಸಪ್ಪ ಬೆಣ್ಣೂರ ಅವರು ಸಹಕಾರ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಲ್ಲದೇ ಉದ್ಯಮಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿ ಅವರ ತಂದೆ ಅಣ್ಣಾರಾವ ಬೆಣ್ಣೂರ ಮಾಸ್ತರ್ ಹೆಸರಿನಲ್ಲಿ ರೆಸಿಡೆನ್ಷಿಯನ್ ಶಾಲೆ ತೆರೆಯುವ ಮುಖಾಂತರ ಮತ್ತೊಂದು ಸಮಾಜಮುಖಿ ಕಾರ್ಯಕ್ಕೆ ಮುಂದಾಗಲಿ.
– ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಶ್ರೀಶೈಲಂ-ಸುಲಫಲ ಮಠ

























