
ಮಾಲೂರು.ಜು೪: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ತಾಲೂಕಿನಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಜೊತೆಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರೋಗ್ಯದ ಹಿತ ದೃಷ್ಟಿಯಿಂದಲೂ ಸೇವೆಯನ್ನು ಮಾಡುತ್ತಿದೆ ಎಂದು ಜನಜಾಗೃತಿ ವೇದಿಕೆಯ ಸದಸ್ಯ ಹಾಗೂ ಪುರಸಭಾ ಸದಸ್ಯ ಪಿಎನ್ ಪರಮೇಶ್ ತಿಳಿಸಿದರು.
ಅವರು ಪಟ್ಟಣದ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆಯ ಕಚೇರಿಯಲ್ಲಿ ಮಂಗಾಪುರ ಗ್ರಾಮದ ಮುನಿರತ್ನಮ್ಮ ಎಂಬವರಿಗೆ ಮಾಸಾಶನದ ಹಣವನ್ನು ವಿತರಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಕಳೆದ ಹತ್ತಾರು ವರ್ಷಗಳಿಂದ ತಾಲೂಕಿನಲ್ಲಿ ಮಹಿಳಾ ಸಂಘಗಳಿಗೆ ಸಾಲವನ್ನು ನೀಡುವುದಲ್ಲದೆ ಜೊತೆಗೆ ಕೆರೆಗಳ ಅಭಿವೃದ್ಧಿ, ದೇವಾಲಯ ನಿರ್ಮಾಣ, ಶಾಲಾ ಕಾಂಪೌಂಡುಗಳು, ಹಾಲು ಡೈರಿ ನಿರ್ಮಾಣಕ್ಕೆ ಆರ್ಥಿಕ ಸಹಕಾರ, ವೃದ್ಧಾಪ್ಯ ವೇತನ, ಮಾಸಾಶನ, ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಇನಿತರೆ ಸವಲತ್ತುಗಳನ್ನು ಒದಗಿಸುತ್ತಿದೆ.
ಇತ್ತೀಚಿಗೆ ಮಂಗಾಪುರ ಗ್ರಾಮದಲ್ಲಿ ವಿದ್ಯಾರ್ಥಿಯೊಬ್ಬ ಕಾರಣಾಂತರಗಳಿಂದ ನಮ್ಮನ್ನು ಅಗಲಿದ್ದು ಅವರ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಮಾಶಾಸನವನ್ನು ಬಿಡುಗಡೆ ಮಾಡಿದ್ದು ಗ್ರಾಮ ಪಂಚಾಯಿತಿ ನೀಡಿರುವ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಡಲಿದ್ದಾರೆ, ಸಂಘವು ನಿಮ್ಮೊಂದಿಗೆ ಇದೆ ನಿಮ್ಮ ಮಗ ಕಳೆದುಕೊಂಡಿರಬಹುದು ಆದರೆ ಸಂಘದ ಪ್ರೀತಿ ವಿಶ್ವಾಸ ನಿಮ್ಮೊಂದಿಗೆ ಇರುತ್ತದೆ ಎಂದರು.
ತಾಲೂಕು ಯೋಜನಾಧಿಕಾರಿ ಸತೀಶ್ ಅವರು ಮಾತನಾಡಿ ಭಕ್ತರು ದಾನ ಪರಂಪರೆಯನ್ನು ಧರ್ಮಸ್ಥಳದಲ್ಲಿ ನೀಡುವುದನ್ನು ಬೆಳೆಸಿಕೊಂಡು ಬಂದಿದ್ದಾರೆ, ಅದೇ ರೀತಿ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು ಮಾತೃಶ್ರೀ ಹೇಮಾವತಿ ಅಮ್ಮನವರು ಕಷ್ಟದಲ್ಲಿರುವ ಭಕ್ತರಿಗೆ ಸಹಾಯ ಹಸ್ತ ನೀಡಲು ಸಾಂಸ್ಥಿಕ ರೂಪ ಸಂಸ್ಥೆ ಸ್ಥಾಪಿಸಿ ರಾಜ್ಯಾದ್ಯಂತ ಸೇವೆಯನ್ನು ಪ್ರಾರಂಭಿಸಿದ್ದಾರೆ. ಸಾಲ ವಿತರಣಾ ಜೊತೆಗೆ ನಿರ್ಗತಿಕರಿಗೆ ಮಾಸಾಶನ, ಅಂಗವಿಕಲಗಳಿಗೆ ವೀಲ್ ಚೇರ್, ವಾಕರ್ ಚೇರುಗಳನ್ನು ಒದಗಿಸುತ್ತಿದೆ.
ಸಮುದಾಯದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಆರೋಗ್ಯ ಶ್ರೀ ರಕ್ಷೆ ಜಾರಿಗೆ ತಂದಿದ್ದು, ಶಿಕ್ಷಣ ಕಾರ್ಯಕ್ರಮದಡಿ ಈಗಾಗಲೇ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಅವಶ್ಯಕತೆ ಕಡೆ ಇರುವ ಕಡೆ ಎಂಟು ಶಿಕ್ಷಕರನ್ನು ಒದಗಿಸಿದೆ. ಇನ್ನೂ ಏಳು ಶಿಕ್ಷಕರನ್ನು ಪ್ರಸ್ತುತ ವರ್ಷದಲ್ಲಿ ಒದಗಿಸಲಾಗುತ್ತಿದೆ.
ವೃತ್ತಿಪರ ಕೋರ್ಸ್ಗಳಿಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಮಾಡುವ ಮೂಲಕ ಸಾಲವನ್ನು ಮರುಪಾವತಿಸಿಕೊಳ್ಳಲಾಗುತ್ತಿದೆ, ಅವಘಡಗಳು ನಡೆದಾಗ ಅವರೊಂದಿಗೆ ಸಂಘವು ಇರುತ್ತದೆ, ಮಂಗಾಪುರ ಗ್ರಾಮದಲ್ಲಿ ಸಂಘದ ಮಹಿಳೆ ಮುನಿರತ್ನಮ್ಮ ಅವರು ಇತ್ತೀಚೆಗೆ ತಮ್ಮ ಮಗನನ್ನು ಕಳೆದುಕೊಂಡಿದ್ದು ಅವರಿಗೆ ಪ್ರತಿ ತಿಂಗಳು ಸಂಘದ ವತಿಯಿಂದ ಮಾಸಾಶನವನ್ನು ಅವರ ಕುಟುಂಬಕ್ಕೆ ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ ಮಂಗಾಪುರ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟಸ್ವಾಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ನೇತ್ರಾವತಿ, ಇನ್ನಿತರರು ಹಾಜರಿದ್ದರು.