
ಕಲಬುರಗಿ: ಮೇ.21: ಜೇವರ್ಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ” ಹಮ್ಮಿಕೊಳ್ಳಲಾದ ಕೌಶಲ್ಯದ ಅರಿವು ಕಾರ್ಯಕ್ರಮ”ವನ್ನು ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷರು ಹಾಗೂ ಕಲಬುರಗಿ ವಿ.ಜಿ.ಮಹಿಳಾ ಮಹಾವಿದ್ಯಾಲಯದ ನಿವೃತ್ತ ಪ್ರೊಫೇಸರ್‍ರಾದ ಡಾ. ಮೀನಾಕ್ಷಿ ಬಾಳಿ ಅವರು ಇತ್ತೀಚೆಗೆ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಜೇವರ್ಗಿ ತಾಲೂಕಿನ ಸರ್ಕಾರಿ ಐ.ಟಿ.ಐ. ಸಂಸ್ಥೆಯಲ್ಲಿ ಎಲ್ಲಾ ಯಂತ್ರೋಪಕರಣಗಳ ಸೌಕರ್ಯಗಳು ಇದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಈ ತರಬೇತಿ ಸಂಸ್ಥೆಯ ಪ್ರಾಚಾರ್ಯರು ವಿಶೇಷ ಕಾಳಜಿಯೊಂದಿಗೆ ಉತ್ತಮ ಶಿಕ್ಷಕರ ತಂಡವನ್ನು ಕಟ್ಟಿಕೊಂಡು ಸಂಸ್ಥೆಯ ಉನ್ನತ ದರ್ಜೆಗೆ ಕೊಂಡೊಯ್ಯುತ್ತಿದ್ದಾರೆ. ಈ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಸರ್ಕಾರಿ/ ಅರೆ-ಸರ್ಕಾರಿ/ಬೃಹತ್ ಉದ್ದಿಮೆಗಳಲ್ಲಿ ಹಾಗೂ ವಿದೇಶಗಳಲ್ಲಿಯೂ ಸಹ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಸಂಸ್ಥೆಯ ಪ್ರಾಚಾರ್ಯರಾದ ಡಾ. ರುಬಿನಾ ಪರ್ವೀನ್ ಅವರು ಮಾತನಾಡಿ, ಸಂಸ್ಥೆಯು ಬೆಳೆದು ಬಂದ ಹಾದಿ ಕುರಿತು ಸಂಕ್ಷಿಪ್ತವಾಗಿ ಹೇಳುತ್ತಾ, ಇತ್ತೀಚಿನ ದಿನಗಳಲ್ಲಿ ಕೌಶಲ್ಯಾಧಾರಿತ ಕೋರ್ಸುಗಳು ದೇಶ ಮತ್ತು ವಿದೇಶದಲ್ಲಿಯೂ ಹೆಚ್ಚಿನ ಪ್ರಾಮುಖ್ಯತೆ ಹೊಂದಿದ್ದು, ಆ ನಿಟ್ಟಿನಲ್ಲಿ ಜೇವರ್ಗಿ ಸರ್ಕಾರಿ ಐ.ಟಿ.ಐ. ಸಂಸ್ಥೆಯಲ್ಲಿ ನೀಡಲಾಗುವ ಉನ್ನತ ಮಟ್ಟದ ತರಬೇತಿಯ ಜೊತೆಗೆ ವಿವಿಧ ವೃತ್ತಿಗಳಲ್ಲಿ ಹಲವಾರು ಕೌಶಲ್ಯಕಲಿಕೆಯ ಜೊತೆಗೆ ಪ.ಜಾ./ಪ.ಪಂ. ತರಬೇತಿದಾರರಿಗೆ ಸರ್ಕಾರದಿಂದ ವಿಶೇಷ ಸವಲತ್ತುಗಳಾದ ಟೂಲ್‍ಕಿಟ್, ಲ್ಯಾಪ್‍ಟಾಪ್, ಸ್ಟೇಷನರಿ ಕಿಟ್, ಸಮವಸ್ತ್ರ ಹಾಗೂ ವಿದ್ಯಾರ್ಥಿ ವೇತನಗಳನ್ನು ನೀಡಲಾಗುತ್ತಿದೆ. ಜೇವರ್ಗಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸಿ.ಟಿ.ಎಸ್. ಯೋಜನೆಯಡಿ 05 ವಿವಿಧ ಕೋರ್ಸುಗಳನ್ನು ಹಾಗೂ ಸರ್ಕಾರದ ಉದ್ಯೋಗ ಯೋಜನೆಯಡಿಯಲ್ಲಿ ಟಾಟಾ ಕಂಪನಿಯವರ ಒಡಂಬಡಿಕೆಯೊಂದಿಗೆ ಹೊಸ 06 ಕೋರ್ಸುಗಳನ್ನು ಪ್ರಾರಂಭಿಸಿ ಇಂಡಸ್ಟ್ರಿ 4.0 ಮಾದರಿಯ ಉನ್ನತ ತಂತ್ರಜ್ಞಾನವನ್ನು ನೀಡಲಾಗುತ್ತಿದೆ. ಜೊತೆಗೆ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನದ ಮೂಲಕ ಶಿಶುಕ್ಷು ತರಬೇತಿ ಹಾಗೂ ಉದ್ಯೋಗ ಪಡೆಯಲು ನೆರವು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ನೀಲಾ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕøತ ಅನ್ನಪೂರ್ಣ ಆರ್. ಸಂಗೋಳಗಿ ಅವರು ಮಾತನಾಡಿದರು.
ಡೆಮಾಕ್ರೆಟಿಕ್ ಯುತ್ ಫೆಡರೇಷನ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷೆ ಲಲಿತಾ ವಸ್ತ್ರದ ಅವರು ಮಾತನಾಡಿ, ಯುವಕರು ತಮ್ಮ ಸಮಯವನ್ನು ಮೊಬೈಲ್‍ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಲಹರಣ ಮಾಡದೇ ಚೆನ್ನಾಗಿ ಅಭ್ಯಾಸ ಮಾಡಿ ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ವ-ಸಹಾಯ ಗುಂಪಿನ ಮಹಿಳೆಯರು, ಕಾರ್ಮಿಕ ವರ್ಗ, ಸಿಬ್ಬಂದಿಗಳು, ತರಬೇತಿದಾರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಿರಿಯ ತರಬೇತಿ ಅಧಿಕಾರಿ ಶಿವಶರಣಪ್ಪ ಅÀವರು ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ಸುಧಾಕರಎಸ್. ಚಿಕ್ಕಯ್ಯನವರ್‍ಮಠ ವಂದಿಸಿದರು. ಕಿರಿಯ ತರಬೇತಿ ಅಧಿಕಾರಿ ಬಸನಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.