ತಾಂತ್ರಿಕ ಕಾರಣಗಳಿಂದ ಎಸ್‌ಐಟಿ ವರದಿ ಸಲ್ಲಿಕೆ ವಿಳಂಬ

ಬೆಂಗಳೂರು, ನ. ೬- ಧರ್ಮಸ್ಥಳ ಪ್ರಕರಣದ ಬಗ್ಗೆ ಎಸ್‌ಐಟಿ ವರದಿ ಪಡೆಯುವುದನ್ನು ಕೆಲ ದಿನ ಮುಂದೂಡಿದ್ದೇವೆ. ತಾಂತ್ರಿಕ ಕಾರಣಗಳಿಂದ ವರದಿ ಸಲ್ಲಿಸುವಿಕೆ ವಿಳಂಬವಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.


ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿ ಎಸ್‌ಐಟಿನವರು ವರದಿ ಕೊಡುತ್ತಾರೆ. ತಾಂತ್ರಿಕ ಕಾರಣಗಳಿಂದ ವರದಿ ಸಲ್ಲಿಸುವಿಕೆ ವಿಳಂಬವಾಗಿದೆ ಎಂದರು.


ಧರ್ಮಸ್ಥಳ ಪ್ರಕರಣದ ಎಸ್‌ಐಟಿ ತನಿಖೆ ವಿಳಂಬವಾಗಿರುವ ಕುರಿತು ರಾಜ್ಯ ಮಹಿಳಾ ಆಯೋಗ ಅಸಮಾಧಾನ ಹೊರ ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮಹಿಳಾ ಆಯೋಗ ತನಿಖೆ ಮಾಡಿ ಎಂದಿದೆ. ಅದರಂತೆ ಸಮಗ್ರ ತನಿಖೆ ನಡೆದಿದೆ. ತನಿಖೆ ಹಾಗೂ ವರದಿ ಸಲ್ಲಿಸುವ ಸಂದರ್ಭದಲ್ಲಿ ಎಲ್ಲಾ ಆಯಾಮಗಳನ್ನು ನೋಡಿಯೇ ಎಲ್ಲವನ್ನು ಮಾಡಬೇಕಾಗುತ್ತದೆ ಎಂದರು.


ರಾಜ್ಯ ಕಾಂಗ್ರೆಸ್‌ನ ನಾಯಕರುಗಳು ದೆಹಲಿಗೆ ಬರಬೇಡಿ ಎಂಬ ಹೈಕಮಾಂಡ್ ಸೂಚನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರು ದೆಹಲಿಗೆ ಹೋಗುತ್ತಾರೋ ನನಗೆ ಗೊತ್ತಿಲ್ಲ. ಅವಶ್ಯಕತೆ ಇದ್ದವರು ದೆಹಲಿಗೆ ಹೋಗುತ್ತಾರೆ. ನಾನು ಕಳೆದ ಬಾರಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದೆ. ಪೊಲೀಸರಿಗೆ ೫ ಸಾವಿರ ವಸತಿ ನಿರ್ಮಿಸಲು ಕೇಳಿದ್ದೆ. ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದರು.


ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಹೋಗಿರುವ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ. ಇಲಾಖಾ ವಿಚಾರಕ್ಕೆ ಸಂಬಂಧಿಸಿದಂತೆ ಅವರು ದೆಹಲಿಗೆ ಹೋಗಿದ್ದಾರೆ. ಈ ಬಗ್ಗೆ ಡಿ.ಕೆ. ಶಿವಕುಮಾರ್ ರವರೇ ಮಾತನಾಡಿದ್ದಾರೆ ಎಂದರು.


ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಯನ್ನು ತಡೆ ಹಿಡಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ನಗರದ್ದನ್ನು ಮಾತ್ರ ತಡೆ ಹಿಡಿಯಲಾಗಿದೆ. ಗ್ರಾಮಾಂತರದ ಎಲ್ಲಾ ವರ್ಗಾವಣೆಯನ್ನು ಪೂರ್ಣಗೊಳಿಸಿದ್ದೇವೆ. ಕೆಲ ಶಾಸಕರ ಬೇಡಿಕೆಗೆ ಅನುಗುಣವಾಗಿ ವರ್ಗಾವಣೆ ಮಾಡಬೇಕಾಗುತ್ತದೆ. ಹಾಗೆಯೇ ಮುಖ್ಯಮಂತ್ರಿಗಳು ಕೆಲ ಬದಲಾವಣೆ ಸೂಚಿಸಿದ್ದಾರೆ. ಹಾಗಾಗಿ ತಡವಾಗಿದೆ. ಸದ್ಯದಲ್ಲೇ ವರ್ಗಾವಣೆಯನ್ನು ಪೂರ್ಣಗೊಳಿಸುತ್ತೇವೆ ಎಂದರು.