Home ಜಿಲ್ಲೆ ಯಾದ್ಗೀರ್ ಎಸ್‌ಟಿ ಪ್ರಮಾಣಪತ್ರ ತಾರತಮ್ಯ ಖಂಡಿಸಿ ಅ.೧೨ರಿಂದ ಧರಣಿ

ಎಸ್‌ಟಿ ಪ್ರಮಾಣಪತ್ರ ತಾರತಮ್ಯ ಖಂಡಿಸಿ ಅ.೧೨ರಿಂದ ಧರಣಿ

ಯಾದಗಿರಿ: ಒಂದೇ ರಾಜ್ಯ, ಒಂದೇ ಸಮುದಾಯ, ಒಂದೇ ಹಕ್ಕು ಇದ್ದರೂ ಪರಿಶಿಷ್ಟ ಪಂಗಡ (ಎಸ್‌ಟಿ) ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ಜಿಲ್ಲೆ ಹಾಗೂ ತಾಲೂಕುಗಳ ನಡುವೆ ವಿಭಿನ್ನ ಮಾನದಂಡ ಅನುಸರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಇದನ್ನು ನಿವಾರಿಸುವಂತೆ ಆಗ್ರಹಿಸಿ ಕುರುಬ ಸಂಘಟನೆಗಳು ಅ.೧೨ರಿಂದ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿವೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಮರಾಮ್ ಭೀಮಗೊಂಡ ಕುರುಬ ಸಂಘಟನೆಯ ಕಲಬುರಗಿ ಜಿಲ್ಲಾ ಅಧ್ಯಕ್ಷ ಬಸವರಾಜ ಮದ್ರಿಕಿ, ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಕುರುಬ ಸಮುದಾಯಕ್ಕೆ ಸಂಬAಧಿಸಿದ ಎಸ್‌ಟಿ ಪ್ರಮಾಣಪತ್ರದ ವಿಚಾರದಲ್ಲಿರುವ ಗೊಂದಲ ಹಾಗೂ ತಾರತಮ್ಯವನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು.
ಒಂದೇ ಸಮುದಾಯಕ್ಕೆ ಸಂಬAಧಿಸಿದ ಪ್ರಮಾಣಪತ್ರವನ್ನು ಒಂದು ಪ್ರದೇಶದಲ್ಲಿ ಮಾನ್ಯ ಮಾಡುವುದು, ಮತ್ತೊಂದು ಪ್ರದೇಶದಲ್ಲಿ ನಿರಾಕರಿಸುವುದು ಅಥವಾ ವಿಭಿನ್ನ ಪ್ರಕ್ರಿಯೆ ಅನುಸರಿಸುವುದಕ್ಕೆ ಕಾರಣವೇನು ಎಂಬುದನ್ನು ಸರ್ಕಾರ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಬೀದರ್ ಜಿಲ್ಲೆ ಹಾಗೂ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ‘ಗೊಂಡ ಕುರುಬ’ ಹೆಸರಿನಲ್ಲಿ ಸಿಂಧುತ್ವ ಪ್ರಮಾಣಪತ್ರ ನೀಡಲಾಗುತ್ತಿದೆ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ. ಮತ್ತೊಂದೆಡೆ ಕೊಡಗು ಜಿಲ್ಲೆಯಲ್ಲಿ ಕಾಡುಕುರುಬ ಹಾಗೂ ಜೇನುಕುರುಬ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಮೀಸಲಾತಿ ಸೌಲಭ್ಯ ಜಾರಿಯಲ್ಲಿದೆ ಎಂದು ಅವರು ಹೇಳಿದರು. ವಿವಿಧ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಎಸ್‌ಟಿ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ ಎಂಬುದು ಸಂಘಟನೆಗಳ ಪ್ರಮುಖ ಆಕ್ಷೇಪವಾಗಿದೆ.
‘ಜಿಲ್ಲೆಯ ಗಡಿ ಬದಲಾಗುತ್ತಿದ್ದಂತೆ ಸಮುದಾಯದ ಹಕ್ಕುಗಳ ಮಾನದಂಡವೂ ಬದಲಾಗುತ್ತದೆಯೇ?’ ಎಂಬ ಪ್ರಶ್ನೆ ಎತ್ತಿದ ಬಸವರಾಜ ಮದ್ರಿಕಿ, ಪ್ರಮಾಣಪತ್ರ ವಿತರಣೆ ಮತ್ತು ಸಿಂಧುತ್ವಕ್ಕೆ ಸಂಬAಧಿಸಿದ ದಾಖಲೆಗಳು, ಸರ್ಕಾರದ ಆದೇಶಗಳು ಹಾಗೂ ಅನ್ವಯವಾಗುವ ಕಾನೂನುಬದ್ಧ ಮಾನದಂಡಗಳ ಕುರಿತು ರಾಜ್ಯ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಕುರುಬ ಸಮುದಾಯಕ್ಕೆ ಸಂಬAಧಿಸಿದ ಬೇಡಿಕೆಗಳನ್ನು ರಾಜ್ಯ ಸರ್ಕಾರ ತನ್ನ ಶಿಫಾರಸಿನೊಂದಿಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು. ರಾಜ್ಯ ಹಾಗೂ ಕೇಂದ್ರ ಮಟ್ಟದ ಸಂಬAಧಿಸಿದ ಪ್ರಾಧಿಕಾರಗಳ ನಡುವೆ ಸಮನ್ವಯ ಸಾಧಿಸಿ, ಸಮುದಾಯದಲ್ಲಿರುವ ಗೊಂದಲಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಸ್ಪಷ್ಟ ಆದೇಶ ಹೊರಡಿಸುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಸಂಘಟನೆಯ ಮುಖಂಡರು ತಿಳಿಸಿದರು. ಬೇಡಿಕೆ ಈಡೇರದಿದ್ದರೆ ಮೂರು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸಂಘಟಿಸಿ ಮುಂದಿನ ಹಂತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಮುದಾಯಕ್ಕೆ ಸಂಬAಧಿಸಿದ ದಾಖಲೆಗಳು, ಪ್ರಮಾಣಪತ್ರ ವಿತರಣೆ, ಸಿಂಧುತ್ವ ಹಾಗೂ ಮೀಸಲಾತಿ ಅರ್ಹತೆ ಕುರಿತು ಸರ್ಕಾರವು ಕಾನೂನು ಮತ್ತು ಅಧಿಕೃತ ದಾಖಲೆಗಳ ಆಧಾರದ ಮೇಲೆ ಪಾರದರ್ಶಕ ಹಾಗೂ ಸ್ಪಷ್ಟ ನಿಲುವು ಪ್ರಕಟಿಸಬೇಕು. ಜಿಲ್ಲೆ ಹಾಗೂ ತಾಲೂಕುಗಳ ನಡುವೆ ಕಂಡುಬರುತ್ತಿರುವ ವ್ಯತ್ಯಾಸಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಅರ್ಹರಿಗೆ ಅನ್ಯಾಯವಾಗದಂತೆ ಗೊಂದಲ ನಿವಾರಿಸಬೇಕು ಎಂದು ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬೀದರ್ ಗೊಂಡಕುರುಬ ಹೋರಾಟಗಾರ ಬಾಲಾಜಿ ಜಬಾಡೆ, ಆದಿವಾಸಿ ಬುಡಕಟ್ಟು ಕಾಡುಕುರುಬ-ಜೇನುಕುರುಬ ಸಂಘಟನೆಯ ಕಲಬುರಗಿ ಜಿಲ್ಲಾಧ್ಯಕ್ಷ ಗೋಪಾಲ ಎಂ.ಪಿ., ಕರ್ನಾಟಕ ರಾಜ್ಯ ಕುರುಬರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ಶಿವಕುಮಾರ ಮುನಗಲ್, ತಾಲೂಕು ಅಧ್ಯಕ್ಷ ಸಿದ್ದು ಪೂಜಾರಿ, ಎಸ್. ನಿಜಲಿಂಗಪ್ಪ, ದೇವಿಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.