ಸಿರನೂರಕರ್ ಅವರಿಗೆ ಆರ್ಷ ಸಾಹಿತ್ಯ ವಿಶಿಷ್ಟ ಸಮಾಜಮುಖಿ ಸೇವಾ ಶಿರೋಮಣಿ ಬಿರುದು

ಕಲಬುರಗಿ,ನ.4- ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಅಂಕಣಕಾರ ಶ್ರೀನಿವಾಸ ಸಿರನೂರಕರ್ ಅವರಿಗೆ “ಆರ್ಷ ಸಾಹಿತ್ಯ ವಿಶಿಷ್ಟ ಸಮಾಜಮುಖಿ ಸೇವಾ ಶಿರೋಮಣಿ” ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ.
ಮೈಸೂರಿನಲ್ಲಿ ನಡೆದ ಶ್ರೀ ಯಾಜ್ಞವಲ್ಕ್ಯ ಜಯಂತೋತ್ಸವ ಹಾಗು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶ್ರೀ ಯಾಜ್ಞವಲ್ಕ್ಯ ಶುಕ್ಲ ಯಜುರ್ವೇದ ಮಹಾಸಭಾ ಅಧ್ಯಕ್ಷರಾದ ಆರ್.ರಾಮಕೃಷ್ಣ ಅವರು ಈ ಬಿರುದನ್ನು ಪ್ರದಾನ ಮಾಡಿ ಸನ್ಮಾನ ಪತ್ರವನ್ನು ಅರ್ಪಿಸಿದರು. ಪತ್ರಕರ್ತರಾಗಿ, ಸಾಹಿತಿಯಾಗಿ, ಅಂಕಣಕಾರನಾಗಿ, ಆರ್ಷ ಸಾಹಿತ್ಯ ಕೃಷಿ ಮೂಲಕ ಬಹುಮುಖಿ ಸಮಾಜಮುಖಿ ಸೇವೆ ಸಲ್ಲಿಸಿರುವುದಕ್ಕಾಗಿ ಈ ಬಿರುದನ್ನು ನೀಡಲಾಗಿದೆ.
ಸಮಾಜದಲ್ಲಿ ಅನಿಷ್ಟ ಪದ್ಧತಿಗಳ ನಿವಾರಣೆಗೆ ಮಾಡಿದ ಪ್ರಯತ್ನ, ಪರಿಸರ ಸಂರಕ್ಷಣೆಯಲ್ಲಿ ವಹಿಸಿದ ಪಾತ್ರ, ಮಾಹಿತಿ ಹಕ್ಕಿನ ಆಂದೋಲನ, ನಾಗರಿಕ ಹಕ್ಕುಗಳ ಸಂರಕ್ಷಣೆ ಮತ್ತು ಆರ್ಷ ಸಾಹಿತ್ಯ ಸೇರಿದಂತೆ ವಿವಿಧ ರೀತಿಯ ಸಾಹಿತ್ಯಕ್ಕೆ ನೀಡಿದ ಕಾಣಿಕೆಯನ್ನು ಸಿರನೂರಕರ್ ಅವರಿಗೆ ಅರ್ಪಿಸಿದ ಸನ್ಮಾನ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪರಮಾಣು ವಿಜ್ಞಾನಿ ಡಾ.ಗುಂಡೂರಾವ್ ಮತ್ತು ವೇದ ವಿದ್ವಾನ್ ಹೆಚ್.ವಿ.ಅಶ್ವಥ ನಾರಾಯಣ ಅವರು ತಮ್ಮ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಅವರನ್ನು ಸತ್ಕರಿಸಿ ಸನ್ಮಾನ ಪತ್ರವನ್ನು ಅರ್ಪಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಬಹುಮಾನಗಳನ್ನು ವಿತರಿಸಲಾಯಿತು.