ರೈತರ ಬಾಕಿ ಇರುವ ಬೆಳೆ ವಿಮೆ ಹಣ ಕಬಳಿಸುವ ಹುನ್ನಾರ:ಸಿರಗಾಪೂರ ಆರೋಪ

ಕಲಬುರಗಿ:ಅ.7: ಕಳೆದ ವರ್ಷ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾದ ತೊಗರಿ ಬೆಳೆ ನಷ್ಟಕ್ಕೆ ರೈತರ ಖಾತೆಗೆ 2ನೆಯ ಕಂತಿನ ವಿಮೆ ಹಣ ಜಮಾ ಮಾಡದೆ ಸರಕಾರ ನುಂಗಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಅವರು ಬಲವಾಗಿ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ವರ್ಷ ಜುಲೈ ತಿಂಗಳಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ವಿಮೆಗೆ ರೈತರು ತೊಗರಿ ಬೆಳೆಗೆ ಪ್ರತಿ ಹೆಕ್ಟೇರಿಗೆ ಸುಮಾರು ರೂ 560,ಉದ್ದು ಬೆಳೆಗೆ ರೂ 800, ಹೆಸರು ಬೆಳೆಗೆ 950, ಸೋಯಾಬೀನ್ ಗೆ ರೂ.760 ರಂತೆ ವಿಮೆ ಕಂಪನಿಗಳಿಗೆ ಹಣ ಪಾವತಿಸಿದ್ದಾರೆ.ಅದರಂತೆ ತೊಗರಿ, ಹತ್ತಿ, ಸೋಯಾಬೀನ್,ಉದ್ದು, ಹೆಸರು ಬೆಳೆಗಳುಹಾಳಾಗಿದ್ದವು.ಅತಿವೃಷ್ಟಿಯಿಂದ ಕಳೆದ ಬಾರಿ ಬಹುತೇಕ ತೊಗರಿ ಬೆಳೆ ನೆಟೆ ಹೊಗಿ ನಷ್ಟವಾಗಿದೆ.ಅದರಲ್ಲೂ ಬಿಸಿಲು ನಾಡು ಕಲಬುರಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ತೊಗರಿ ಎರಡೆರಡು ಬಾರಿ ಬಿತ್ತನೆ ಮಾಡಲಾಗಿದೆ.ಇದರಿಂದ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.ಒಂದು ಬಾರಿ ಬಿತ್ತನೆಗೆ ಪ್ರತಿ ಎಕರೆಗೆ 10 ಸಾವಿರ ಖರ್ಚು ಮಾಡಿದ್ದಾರೆ.ಹೇಕ್ಟರಿಗೆ ಸರಾಸರಿ 25 ಸಾವಿರ ಖರ್ಚಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ಜೂನ್ ತಿಂಗಳಲ್ಲಿ ವಿಮೆ ಹಣ ಮೊದಲನೆ ಕಂತಿನ 325 ಕೋಟಿ ನೀಡಲಾಗಿದೆ.ಉಳಿದ 309 ಕೋಟಿಯಷ್ಷು ವಿಮೆ ಹಣ ತಡೆ ಹಿಡಿಯಲಾಗಿದೆ.ಇದರ ಹಿಂದಿನ ಉದ್ದೇಶ ರೈತರ ವಿಮೆ ಹಣ ಕಬಳಿಸುವ ಹುನ್ನಾರ ನಡೆದಿದೆ.ಸಾಲ ಮಾಡಿ ರೈತರು ವಿಮೆ ಕಂಪನಿಗಳಿಗೆ ಹಣ ಕಟ್ಟಿರುತ್ತಾರೆ . ವರ್ಷ ಕಳೆದರೂ ಇನ್ನೂ ಬಾಕಿ ಇರುವ ವಿಮೆ ಹಣ ಬಂದಿಲ್ಲ. ಕೂಡಲೇ ಸರಕಾರ ರೈತರ ಖಾತೆಗಳಿಗೆ ವಿಮೆ ಹಣ ಜಮಾ ಮಾಡುವಂತೆ ಸೂಚಿಸಬೇಕು.ವಿಮೆ ಮಾಡಿಸದ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.