
ಬೆಂಗಳೂರು, ಸೆ. ೨೬- ಮತದಾರರ ಪಟ್ಟಿಯ ಪರಿಷ್ಕರಣೆ, ಎಸ್ ಐಆರ್ ಪ್ರಕ್ರಿಯೆ ಹಾಗೂ ಚುನಾವಣಾ ದತ್ತಾಂಶ ನಿರ್ವಹಣೆ ಕುರಿತು ಸಾರ್ವಜನಿಕ ವಲಯದಲ್ಲಿ ಮೂಡಿರುವ ಅನುಮಾನಗಳಿಗೆ ಚುನಾವಣಾ ಆಯೋಗವು ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ವಿಶಿಷ್ಟ ಪ್ರತಿಭಟನೆ ನಡೆಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಮತದಾರರ ಹಕ್ಕು ಮತ್ತು ಚುನಾವಣಾ ಪ್ರಕ್ರಿಯೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕಾಪಾಡುವ ನಿಟ್ಟಿನಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ, ಅರ್ಹ ಮತದಾರರ ಹೆಸರುಗಳನ್ನು ಅನ್ಯಾಯವಾಗಿ ಕೈಬಿಡದಿರುವುದು, ಫಾರ್ಮ್ -೬ ಹಾಗೂ ಮತದಾರರ ದತ್ತಾಂಶ ನಿರ್ವಹಣೆಯಲ್ಲಿನ ಬದಲಾವಣೆಗಳ ಕುರಿತು ಸಮಗ್ರ ಮಾಹಿತಿ ಬಹಿರಂಗಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಅವರು ಮುಂದಿಟ್ಟರು.
“ಮತದಾನದ ಹಕ್ಕು ಪ್ರಜಾಪ್ರಭುತ್ವದ ಅಡಿಪಾಯ. ಮತದಾರರ ಪಟ್ಟಿಯ ಬಗ್ಗೆ ಜನರಲ್ಲಿ ಅನುಮಾನ ಮೂಡಿದರೆ, ಚುನಾವಣಾ ಆಯೋಗವೇ ಪಾರದರ್ಶಕವಾಗಿ ಉತ್ತರಿಸಬೇಕು. ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯನ್ನು ಕಾಪಾಡುವುದು ಚುನಾವಣಾ ಆಯೋಗದ ಸಂವಿಧಾನಾತ್ಮಕ ಜವಾಬ್ದಾರಿ,” ಎಂದು ಎಸ್. ಮನೋಹರ್ ಹೇಳಿದರು.
ಮತದಾರರ ಹಕ್ಕು, ಪಾರದರ್ಶಕ ಚುನಾವಣೆ ಮತ್ತು ಸಂವಿಧಾನಾತ್ಮಕ ಸಂಸ್ಥೆಗಳ ಹೊಣೆಗಾರಿಕೆಯನ್ನು ಬಲಪಡಿಸುವ ಉದ್ದೇಶದಿಂದ ಈ ಪ್ರತಿಭಟನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ಅರಣ್ಯ ಸಚಿವರಾದ ರಾಮಲಿಂಗಾ ರೆಡ್ಡಿ ಅವರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮನೋಹರ್, ಪ್ರಕಾಶ್, ಸುಧಾಕರ್, ಆನಂದ್, ಕುಶಾಲ್, ಮಾಧವ, ನವೀನ್, ಉಮೇಶ್, ಲಕ್ಷ್ಮೀನಾರಾಯಣ, ಪುಟ್ಟರಾಜು ಭಾಗವಹಿಸಿದ್ದರು.























