
ಬೆಂಗಳೂರು, ನ. ೧೫- ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯದಲ್ಲಿ ನವೆಂಬರ್ ಕ್ರಾಂತಿ, ಸಂಪುಟ ಪುನಾರಚನೆ, ಅಧಿಕಾರ ಹಂಚಿಕೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಈ ಎಲ್ಲ ವಿಚಾರಗಳಿಗೂ ತಾತ್ಕಾಲಿಕ ತಡೆ ಬಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ಥಾನ ಭದ್ರವಾಗಿದೆ ಎಂಬ ಚರ್ಚೆಗಳು ಬಲವಾಗಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದೆಹಲಿಗೆ ತೆರಳಿದ್ದು, ವರಿಷ್ಠರನ್ನು ಭೇಟಿ ಮಾಡಲಿದ್ದಾರೆ.
ನವದೆಹಲಿಯಲ್ಲಿಂದು ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ರವರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಿಗ್ಗೆ ದೆಹಲಿಗೆ ತೆರಳಿದ್ದು, ಕಾರ್ಯಕ್ರಮಕ್ಕೂ ಮೊದಲು ಕೇಂದ್ರದ ಹಲವು ಸಚಿವರನ್ನು ಭೇಟಿ ಮಾಡಿ ರಾಜ್ಯದ ಯೋಜನೆಗಳ ಸಂಬಂಧ ಚರ್ಚೆ ನಡೆಸುವರು.
ಬಿಹಾರ ಚುನಾವಣೆ ಬೆನ್ನಲ್ಲೆ ರಾಜ್ಯದಲ್ಲಿ ಕ್ರಾಂತಿಯಾಗುತ್ತದೆ, ರಾಜಕೀಯ ವಿಪ್ಲವ ಆಗಬಹುದು ಎಂಬ ನಿರೀಕ್ಷೆಗಳು ಹುಸಿಯಾಗಿದ್ದು, ಬಿಹಾರ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್‌ನ ಕೇಂದ್ರ ನಾಯಕತ್ವ ಸದ್ಯಕ್ಕೆ ರಾಜ್ಯದ ಮಟ್ಟಿಗೆ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೆಹಲಿ ಭೇಟಿ ಕುತೂಹಲ ಮೂಡಿಸಿದೆ.
ಬಿಹಾರ ಚುನಾವಣೆಯಲ್ಲಿ ಮಹಾಘಟ ಬಂಧನ್ ಯಶಸ್ಸು ಸಾಧಿಸಿದ್ದರೆ ಅದು ರಾಜ್ಯದಲ್ಲೂ ರಾಜಕೀಯ ಬದಲಾವಣೆಗಳಿಗೆ ಕಾರಣವಾಗಬಹುದು ಎಂಬ ಚರ್ಚೆಗಳು ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ನಡೆದು ನವೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂಬ ಭವಿಷ್ಯವನ್ನು ಹಲವರು ಹೇಳಿದ್ದರು.
ಆದರೆ ಬಿಹಾರ ಚುನಾವಣೆಯ ಫಲಿತಾಂಶ ಸಂಪೂರ್ಣ ಉಲ್ಟಾ ಆಗಿ ಕಾಂಗ್ರೆಸ್ ಪಕ್ಷ ನೆಲಕಚ್ಚಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ಸದ್ಯಕ್ಕೆ ರಾಜ್ಯದ ಮಟ್ಟಿಗೆ ಯಾವುದೇ ಒಂದು ದೃಢ ರಾಜಕೀಯ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಗಳು ಕ್ಷೀಣವಾಗಿವೆ. ಹಾಗಾಗಿ ನವೆಂಬರ್ ಕ್ರಾಂತಿ, ಸಂಪುಟ ಪುನಾರಚನೆ, ಅಧಿಕಾರ ಹಂಚಿಕೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಈ ಎಲ್ಲಾ ವಿಚಾರಗಳಿಗೂ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದರೂ ರಾಹುಲ್‌ಗಾಂಧಿಯವರು ವಿದೇಶ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರ ನಾಯಕರನ್ನು ಸಿದ್ದರಾಮಯ್ಯನವರು ಭೇಟಿ ಮಾಡುವರು ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಸಂಪುಟ ಪುನಾರಚನೆಯ ದಾಳ ಉರುಳಿಸಿರುವರಾದರೂ ಸಂಪುಟ ಪುನಾರಚನೆಯ ಬಗ್ಗೆಯೂ ಹೈಕಮಾಂಡ್ ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಳ್ಳುವ ಲಕ್ಷಣಗಳು ಇಲ್ಲ. ಈಗ ಹೈಕಮಾಂಡ್ ಮಟ್ಟದಲ್ಲಿ ಸೂತಕ ಛಾಯೆ ಇದೆ. ಹಾಗಾಗಿ ಮಹತ್ವದ ರಾಜಕೀಯ ನಿರ್ಧಾರಗಳು ಸದ್ಯಕ್ಕೆ ಇಲ್ಲವಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರ್ಚಿ ಇನ್ನು ಸ್ವಲ್ಪ ದಿನದ ಮಟ್ಟಿಗೆ ಭದ್ರ ಎಂದೇ ಹೇಳಲಾಗುತ್ತಿದೆ.
ಕಾಂಗ್ರೆಸ್ ಹೈಕಮಾಂಡ್ ಮಹತ್ವದ ರಾಜಕೀಯ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಡೆ ಕುತೂಹಲ ಮೂಡಿಸಿದೆ. ಅವರು ಎಲ್ಲಿಯವರೆಗೂ ತಾಳ್ಮೆ ವಹಿಸುತ್ತಾರೆ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಲ್ಲಿಯವರೆಗೂ ತಾಳ್ಮೆ ವಹಿಸುತ್ತಾರೋ ಅಲ್ಲಿಯವರೆಗೂ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಗಳು ಇಲ್ಲ ಎಂದೇ ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ.
ಬಿಹಾರ ಚುನಾವಣೆಯ ಅಭೂತಪೂರ್ವ ಗೆಲುವಿನಿಂದ ಹೊಸ ಶಕ್ತಿ ಪಡೆದುಕೊಂಡಿರುವ ಬಿಜೆಪಿ ರಾಜ್ಯದಲ್ಲಿ ರಾಜಕೀಯ ಬದಲಾವಣೆಗೇನಾದರೂ ಕೈ ಹಾಕುತ್ತದೆಯೇ ಎಂಬುದು ಚರ್ಚೆಗೆ ಗ್ರಾಸವಾಗಿದೆಯಾದರೂ ಕಾಂಗ್ರೆಸ್‌ನಲ್ಲಿ ಆಂತರಿಕ ಸಂಘರ್ಷಗಳು ತಾರಕ್ಕಕ್ಕೇರುವವರೆಗೂ ಬಿಜೆಪಿ ಯಾವುದೇ ರೀತಿಯ ರಾಜಕೀಯ ವಿಪ್ಲವಕ್ಕೆ ಕೈ ಹಾಕುವ ಸಾಧ್ಯತೆ ಇಲ್ಲದೇ ಇರುವುದರಿಂದ ಸದ್ಯಕ್ಕಂತೂ ರಾಜ್ಯದ ಮಟ್ಟಿಗೆ ಮಹತ್ತರ ರಾಜಕೀಯ ಬದಲಾವಣೆಗಳು ಇಲ್ಲ ಎಂದು ಹೇಳಬಹುದು.
ಡಿಕೆಶಿ ಸಹ ದೆಹಲಿಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿರುವ ಬೆನ್ನಲ್ಲೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಇಂದು ದೆಹಲಿಗೆ ತೆರಳಿದ್ದು, ಅವರು ಸಹ ಕಪಿಲ್ ಸಿಬಲ್ ರವರ ಕಾರ್ಯಕ್ರಮದಲ್ಲಿ ಭಾಗಿಯಾಗುವರು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಇಬ್ಬರು ನಾಯಕರು ದೆಹಲಿಯಲ್ಲಿ ಯಾರೆಲ್ಲಾ ವರಿಷ್ಠರನ್ನು ಭೇಟಿಯಾಗುತ್ತಾರೆ, ಏನೆಲ್ಲಾ ಚರ್ಚೆ ನಡೆಸುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.
ಏನೇ ಆದರೂ ಸದ್ಯಕ್ಕಂತೂ ರಾಜ್ಯದಲ್ಲಿ ರಾಜಕೀಯ ಬದಲಾವಣೆಗಳು ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದಂತೂ ನಿಶ್ಚಿತ.


























