ಬೆಂಗಳೂರು,ಆ.೨೧:ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋ ಆಯೋಜಿಸಲು ಅನುಮತಿ ನೀಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ದಸರಾ ಉತ್ಸವದಲ್ಲಿ ಭಾಗವಹಿಸುವಂತೆಯೂ ರಾಜ್‌ನಾಥ್‌ಸಿಂಗ್ ಅವರಿಗೆ ಆಹ್ವಾನ ನೀಡಿದ್ದಾರೆ.
ಏರ್ ಶೋ ಐತಿಹಾಸಿಕ ಉತ್ಸವದ ಭವ್ಯತೆಗೆ ಹೆಚ್ಚಿನ ಮೆರುಗು ನೀಡುವುದಲ್ಲದೆ ದಸರಾ ವೀಕ್ಷಣೆಗೆ ಬರುವ ಲಕ್ಷಾಂತರ ಜನರಲ್ಲಿ ದೇಶಭಕ್ತಿಯ ಭಾವ ತುಂಬುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್‌ನಾಥ್‌ಸಿಂಗ್ ಅವರು ಪಾಲ್ಗೊಂಡರೆ ಅದಕ್ಕಿಂತ ದೊಡ್ಡ ಗೌರ ಇನ್ನೊಂದಿಲ್ಲ. ನಿಮ್ಮ ಉಪಸ್ಥಿತಿ ಸಶಸ್ತ್ರ ಪಡೆಗಳ ಬಗ್ಗೆ ಹೊಂದಿರುವ ಗೌರವ ಮತ್ತು ಮೆಚ್ಚುಗೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.
ಏರ್ ಶೋ ಯಾವಾಗ ಮತ್ತು ಎಲ್ಲಿ ನಡೆಸಬೇಕೆಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ದಸರಾದಲ್ಲಿ ಏರ್ ಶೋ ನಡೆಸಲು ಅನುಮತಿ ನೀಡುವಂತೆ ಕೋರಿ ಕಳೆದ ತಿಂಗಳು ದೆಹಲಿಯಲ್ಲಿ ರಾಜ್‌ನಾಥ್‌ಸಿಂಗ್ ಅವರನ್ನು ಖುದ್ದು ಭೇಟಿ ಮಾಡಿ ಸಿದ್ದರಾಮಯ್ಯ ಮನವಿ ಸಲ್ಲಿಸಿದರು.
























