
ವಿಜಯಪುರ, ಜೂ. 29 :ಟಿ. ಸಿದ್ದಲಿಂಗಯ್ಯ ಕನ್ನಡ ಸಾರಸ್ವತ ಲೋಕದ ದಿಗ್ಗಜರು, ದಲಿತ
ಚಳವಳಿಯ ಪ್ರಮುಖ ರೂವಾರಿ ಹಾಗೂ ‘ಹೊಲೆಮಾದಿಗರ ಹಾಡು’, ‘ಊರು ಕೇರಿ’
ಮುಂತಾದ ಮರೆಯಲಾಗದ ಕೃತಿಗಳನ್ನು ನೀಡಿದ ಜನಪರ ಕವಿ ಡಾ. ಸಿದ್ಧಲಿಂಗಯ್ಯನವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅನನ್ಯವಾದದ್ದು
ಎಂದು ಸಿಕ್ಯಾಬ್ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.
ಮಲ್ಲಿಕಾರ್ಜುನ ಮೇತ್ರಿ ಅಭಿಪ್ರಾಯಪಟ್ಟರು.
ಮೂರು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಕಾವ್ಯ, ನಾಟಕ, ವಿಮರ್ಶೆ ಹಾಗೂ
ಆತ್ಮಕಥನ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿರುವ ಅವರು, ಶೋಷಿತರ
ನೋವುಗಳಿಗೆ ತಮ್ಮ ಲೇಖನಿಯ ಮೂಲಕ ದನಿಯಾಗಿದ್ದರು. ಅವರ ಕವಿತೆಗಳು ಬಂಡಾಯ ಸಾಹಿತ್ಯದ ಪ್ರಮುಖ ಮೈಲಿಗಲ್ಲುಗಳಾಗಿ ನಿಲ್ಲುತ್ತವೆ ಎಂಬುದನ್ನು ಅನೇಕ
ನಿದರ್ಶನಗಳ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟರು.
ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕ ಸಾಹಿತ್ಯ ಸಮ್ಮೇಳನ ಹಿಟ್ಟನಹಳ್ಳಿ ಸಹಯೋಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ
“ಡಾ.ಸಿದ್ಧಲಿಂಗಯ್ಯ ಕವಿಗಳ ಕುರಿತು ಹಮ್ಮಿಕೊಂಡ ವಿಶೇಷ ಚಿಂತನಾ ಗೋಷ್ಠಿ” ಉದ್ಘಾಟಿಸಿ ಮಾತನಾಡಿದ ಅವರು, ಸಿದ್ಧಲಿಂಗಯ್ಯನವರು ಒಂದು ಸಮುದಾಯದ ಧ್ವನಿಯಾಗಿ
ಹೊರಹೊಮ್ಮಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ
ಅಭಿಷೇಕ ಚಕ್ರವರ್ತಿ ಮಾತನಾಡಿ, ನೊಂದವರನ್ನೆ ತಮ್ಮ ಕಾವ್ಯದ ಧ್ವನಿಯಾಗಿ ಬಳಸಿಕೊಂಡು, ಜನರ ನೋವನ್ನು ಅಕ್ಷರ ರೂಪದಲ್ಲಿ ಹೊರಹಾಕುವ ಕಾವ್ಯಗಳನ್ನು ರಚಿಸುವ ಮೂಲಕ ಡಾ.ಸಿದ್ಧಲಿಂಗಯ್ಯನವರು ಓರ್ವ ಸಂವೇದನಾಶೀಲ
ಕವಿಯಾಗಿದ್ದರು. ಇಂದು ಅವರ ಕುರಿತು ಪರಿಷತ್ತಿನಲ್ಲಿ ಚಿಂತನಾಗೋಷ್ಠಿ
ಏರ್ಪಡಿಸಿರುವುದು ಸಂತೋಷದ ಸಂಗತಿ ಎಂದರು.
“ಡಾ.ಸಿದ್ಧಲಿಂಗಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಶಿಕ್ಷಕಿ ಸಾಹಿತಿ ಶರಣಮ್ಮ ಹಾದಿಮನಿ ಮಾತನಾಡಿ, ಸದಾ ಶೋಷಿತರ ಪರವಾಗಿ ಮಿಡಿಯುತ್ತಿದ್ದ ಮನಸ್ಸು ಸಿದ್ದಲಿಂಗಯ್ಯ ಅವರದಾಗಿತ್ತು. ಶಿಷ್ಟ ಕಾವ್ಯ ಪರಂಪರೆಯನ್ನು ಮುರಿದು
ತಮ್ಮದೇ ಆದ ದಿಟ್ಟ, ನೇರವಾದ ಭಾಷೆಯಿಂದ ಬಂಡಾಯದ ಕವಿತೆಗಳನ್ನು ಬರೆದು, ಸದಾ ಶೋಷಿತರ ಪರವಾಗಿ ಮಿಡಿಯುತ್ತಿದ್ದ ಮನಸ್ಸು ಸಿದ್ದಲಿಂಗಯ್ಯ ಅವರದಾಗಿತ್ತು ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬಸವರಾಜ ಸೋಮಪುರ,
ಶರಣಗೌಡ ಪಾಟೀಲ, ಶಶಿಕಲಾ ಗುರು ಸ್ಥಾವರಮಠ, ಪರವೀನಬಾನು ಶೇಖ, ಶಿವಾಜಿ ಮೋರೆ ಮುಂತಾದವರು ಮಾತನಾಡಿದರು.
ಸುನಂದಾ ಕೋರಿ ಪ್ರಾರ್ಥಿಸಿದರು. ರಿಯಾಜ ಪಿಂಜಾರ ಸ್ವಾಗತಿಸಿ ಗೌರವಿಸಿದರು. ಕಸಾಪ ಗೌರವ
ಕಾರ್ಯದರ್ಶಿ ಡಾ.ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಭಾಗೀರಥಿ ಸಿಂದೆ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಅರ್ಜುನ ಶಿರೂರ, ಬಸನಗೌಡ
ಬಿರಾದಾರ, ರವಿ ಕಿತ್ತೂರ, ಮಲ್ಲಿಕಾರ್ಜುನ ಕೆಳಗಡೆ, ಜಿ.ಎಸ್.ಬಳ್ಳೂರ, ಶ್ರೀಕಾಂತ
ನಾಡಗೌಡ, ಭಾಗೀರಥಿ ಶಿಂಧೆ, ಅಹಮ್ಮದ ವಾಲೀಕಾರ, ಬಸವರಾಜ ಪಟ್ಟಣಶೆಟ್ಟಿ, ಪರಶುರಾಮ ಚಲವಾದಿ, ಸರೋಜನಿ ಬಡಿಗೇರ, ಜಯಶ್ರೀ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.




























