Home ಮುಖಪುಟ ಸುದ್ದಿ ಪ್ರೇಕ್ಷಕರಿಗೆ ಶಾಕ್ ಸಿನಿಮಾ ಟಿಕೆಟ್‌ಗಳ ಶೇ ೨ ಸೆಸ್

ಪ್ರೇಕ್ಷಕರಿಗೆ ಶಾಕ್ ಸಿನಿಮಾ ಟಿಕೆಟ್‌ಗಳ ಶೇ ೨ ಸೆಸ್

ಬೆಂಗಳೂರು.ಸೆ.೧೮- ಸಿನಿಮಾ ಟಿಕೆಟ್‌ಗಳ ಮೇಲೆ ಶೇ. ೨ರಷ್ಟು ಹೆಚ್ಚುವರಿ ಸೆಸ್ ವಿಧಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು,ಈ ಮೂಲಕ ಸಿನಿಮಾ ಪ್ರೇಕ್ಷಕರಿಗೆ ಬಿಗ್ ಶಾಕ್ ನೀಡಿದೆ.

ರಾಜ್ಯ ಸರ್ಕಾರವು ೨೦೨೪ ರಲ್ಲಿ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕ ಮಂಡಿಸಿತ್ತು.
ಇದೀಗ ಈ ಹೊಸ ನಿಯಮವು ಸೆಪ್ಟೆಂಬರ್ ೩೦ ರಿಂದ ಅಧಿಕೃತವಾಗಿ ಜಾರಿಗೆ ಬರಲಿದ್ದು,ಸಿನಿಮಾ ಟಿಕೆಟ್‌ಗಳ ಮೇಲೆ ಶೇ.೨ರಷ್ಟು ಹೆಚ್ಚುವರಿ ಉಪಕರ ವಿಧಿಸಲಾಗುತ್ತಿದೆ. ಇದರೊಂದಿಗೆ ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯದ ಚಿತ್ರಮಂದಿರಗಳ ಸಿನಿಮಾ ಟಿಕೆಟ್‌ಗಳ ಮೇಲೆ ಶೇ.೨ರಷ್ಟು ಸೆಸ್ ವಿಧಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಉದಾಹರಣೆಗೆ, ೨೦೦ರ ಟಿಕೆಟ್ ಮೇಲೆ ಶೇ.೨ರ ಸೆಸ್ ಎಂದರೆ ೪ ರೂ. ಹೆಚ್ಚುವರಿ ಮೊತ್ತವಾಗಲಿದೆ.

೨೦೨೪ರ ಸೆಪ್ಟೆಂಬರ್ ೨೩ ರಂದು ಈ ಮಸೂದೆಗೆ ರಾಜ್ಯಪಾಲರು ಅಧಿಕೃತವಾಗಿ ಅಂಕಿತ ಹಾಕಿದ್ದರು.ಅದರ ಮರುದಿನವೇ, ಅಂದರೆ ಸೆಪ್ಟೆಂಬರ್ ೨೪ ರಂದು ಸರ್ಕಾರದ ವಿಶೇಷ ರಾಜ್ಯಪತ್ರದಲ್ಲಿ ಇದನ್ನು ಪ್ರಕಟಿಸಲಾಗಿತ್ತು.ಇದೀಗ ಎರಡು ವರ್ಷಗಳ ಸುದೀರ್ಘ ಪ್ರಕ್ರಿಯೆಯ ಬಳಿಕ ಈ ಅಧಿನಿಯಮವನ್ನು ಜಾರಿಗೆ ತರಲಾಗುತ್ತಿದೆ.

೨೦೨೫ರಲ್ಲಿ ಪ್ರಕಟಿಸಲಾದ ಕಾಯ್ದೆಯ ನಿಯಮಗಳಲ್ಲೂ ಎಲ್ಲಾ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳ ಸಿನಿಮಾ ಟಿಕೆಟ್‌ಗಳ ಮೇಲೆ ಶೇ.೨ರ ಸೆಸ್ ಸಂಗ್ರಹಿಸುವುದಾಗಿ ಸ್ಪಷ್ಟಪಡಿಸಲಾಗಿತ್ತು. ಸಂಗ್ರಹವಾದ ಹಣವನ್ನು ಸರ್ಕಾರದ ಮೂಲಕ ಕಲ್ಯಾಣ ಮಂಡಳಿಗೆ ವರ್ಗಾಯಿಸುವ ವ್ಯವಸ್ಥೆಯೂ ಇದೆ.
ಸಿನಿಮಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುವ ಕಲಾವಿದರು ಮತ್ತು ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ೨೦೨೪ರಲ್ಲಿ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕವನ್ನು ಮಂಡಿಸಿತ್ತು.


ಸೆಸ್‌ನ ಹಣ ಯಾರ ಕಲ್ಯಾಣಕ್ಕೆ? :


ಸರ್ಕಾರದ ಉದ್ದೇಶ ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುವ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಒದಗಿಸುವುದು. ಕಾಯ್ದೆಯಡಿ ಕಲ್ಯಾಣ ಮಂಡಳಿ ಹಾಗೂ ಕಲ್ಯಾಣ ನಿಧಿ ರಚಿಸುವ ವ್ಯವಸ್ಥೆಯಿದ್ದು, ನೋಂದಾಯಿತ ಕಾರ್ಯಕರ್ತರಿಗೆ ಅಪಘಾತ, ಮರಣ, ಅಂಗವೈಕಲ್ಯ ಹಾಗೂ ವೈದ್ಯಕೀಯ ನೆರವು ಸೇರಿದಂತೆ ವಿವಿಧ ಕಲ್ಯಾಣ ಸೌಲಭ್ಯಗಳನ್ನು ಒದಗಿಸುವ ನಿಯಮಗಳಿವೆ.


ಅಂದರೆ, ಟಿಕೆಟ್ ಮೇಲೆ ವಿಧಿಸಲಾಗುವ ಹೆಚ್ಚುವರಿ ಮೊತ್ತವು ಸಾಮಾನ್ಯ ಸರ್ಕಾರಿ ಆದಾಯವಾಗಿ ಉಳಿಯುವುದಕ್ಕಿಂತಲೂ ನಿರ್ದಿಷ್ಟವಾಗಿ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣಕ್ಕಾಗಿ ಬಳಸುವ ಉದ್ದೇಶ ಹೊಂದಿದೆ.

ಇನ್ನೊಂದೆಡೆ, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸೆಸ್ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ.ಸೆಸ್‌ನಿಂದ ಪ್ರೇಕ್ಷಕರಿಗೆ ಹೆಚ್ಚುವರಿ ವೆಚ್ಚವಾಗುವುದರ ಜೊತೆಗೆ,ಅದರ ಮೇಲೆ ಉSಖಿ ಅನ್ವಯವಾದರೆ ತೆರಿಗೆಯ ಮೇಲೆಯೇ ತೆರಿಗೆ ಬೀಳುವ ರೀತಿಯ ಪರಿಣಾಮ ಉಂಟಾಗಬಹುದು ಎಂದು ಸಂಘಟನೆ ಹೇಳಿದೆ.ಚಿತ್ರಮಂದಿರಗಳ ಉದ್ಯಮ ಕೋವಿಡ್ ನಂತರ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಹೊಸ ಹೊರೆ ವಿಧಿಸುವುದು ಸೂಕ್ತವಲ್ಲ ಎಂಬುದು ಸಂಘಟನೆಯ ನಿಲುವಾಗಿದೆ.