
ಬೀದರ್:ಫೆ.3:ಜಿಲ್ಲಾ ಭೋವಿ ಸಮಾಜ ಸಂಘದ ವತಿಯಿಂದ ನಗರದ ರಂಗ ಮಂದಿರದಲ್ಲಿ ಶ್ರೀ ಸಿದ್ಧರಾಮೇಶ್ವರ ಜಯಂತ್ಯೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಗಣೇಶ ಮೈದಾನದಿಂದ ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತ ಮೂಲಕ ರಂಗ ಮಂದಿರದವರೆಗೆ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಭೋವಿ ಸಮಾಜದ ಮಹಿಳೆಯರು, ಯುವಕರು ಹಾಗೂ ಹಿರಿಯರು ಸಾಂಪ್ರದಾಯಿಕ ವೇಷಭೂಷಣ ಧರಿಸಿ ಪಾಲ್ಗೊಂಡಿದ್ದು, ಡೊಳ್ಳು ಕುಣಿತ, ಭಜನೆ, ಸಾಂಸ್ಕøತಿಕ ಕಲಾ ಪ್ರದರ್ಶನಗಳ ಮೂಲಕ ನಗರದ ರಸ್ತೆಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ಪಾ ಎಂ. ಅವರು ದೀಪ ಬೆಳಗಿಸುವ ಮೂಲಕ ಮಾಡಲಾಯಿತು.
ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ಪಾ ಎಂ. ಅವರು ಮಾತನಾಡಿ, ಭೋವಿ ಸಮಾಜದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಮಕ್ಕಳ ಶಿಕ್ಷಣ ಮತ್ತು ಮಹಿಳಾ ಆರ್ಥಿಕ ಸಬಲೀಕರಣ ಕುರಿತು ಜಾಗೃತಿ ಮೂಡಿಸಿ, ಕನಿಷ್ಠ ಪಿಯುಸಿ ಮಟ್ಟದವರೆಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಪೆÇೀಷಕರಿಗೆ ಮನವಿ ಮಾಡಿದರು.”ಯಾವುದೇ ಪರಿಸ್ಥಿತಿಯಲ್ಲೂ ಮಕ್ಕಳ ಶಿಕ್ಷಣವನ್ನು ನಿಲ್ಲಿಸಬಾರದು. ಶಿಕ್ಷಣವೇ ಬಡತನ ನಿವಾರಣೆಗೆ ಶಾಶ್ವತ ಪರಿಹಾರ” ಎಂದು ಅವರು ತಿಳಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಉಲ್ಲೇಖಿಸಿ, ಶಿಕ್ಷಣದ ಮೂಲಕವೇ ದಾರಿ ನಿರ್ಮೂಲನೆ ಸಾಧ್ಯವೆಂದು ಹೇಳಿದರು.
ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಕನಿಷ್ಠ ಹತ್ತು ಮಹಿಳೆಯರು ಸೇರಿ ಸಂಘ ಸ್ಥಾಪಿಸಿದರೆ ಐದು ಲಕ್ಷ ರೂಪಾಯಿ ಸಹಾಯ ನೀಡಲಾಗುವುದು ಎಂದು ತಿಳಿಸಲಾಗಿದ್ದು, ಸಣ್ಣ ಉದ್ಯಮಗಳು ಹಾಗೂ ಸ್ವಯಂ ಉದ್ಯೋಗ ಆರಂಭಿಸಲು ಪೆÇ್ರೀತ್ಸಾಹ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಭೋವಿ ಸಮಾಜ ಸಂಘದ ಅಧ್ಯಕ್ಷರಾದ ಶ್ರೀ ಮಾಣಿಕರಾವ ವಾಡೇಕರ್ ವಹಿಸಿ ಪ್ರಾಸ್ತಾವಿಕ ಮಾತನಾಡಿ, ಸಮಾಜದ ಏಕತೆ, ಶಿಕ್ಷಣಕ್ಕೆ ಮಹತ್ವ, ಯುವಕರ ಶಕ್ತಿಯ ಸದುಪಯೋಗ ಮತ್ತು ಸಮಾಜದ ಒಗ್ಗಟ್ಟು ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಬಾಗಲಕೋಟೆ-ಚಿತ್ರದುರ್ಗ ಭೋವಿ (ವಡ್ಡರ) ಗುರುಪೀಠದ ಪರಮ ಪೂಜ್ಯ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಹನ್ನೆರಡನೇ ಶತಮಾನದ ಮಹಾನ್ ಶಿವಶರಣ, ಮೂರನೇ ಶೂನ್ಯಪೀಠ ಚಕ್ರವರ್ತಿ, ಕಾಯಕಯೋಗಿ ಹಾಗೂ ಶ್ರೇಷ್ಠ ವಚನಕಾರರಾದ ಶರಣ ಸಿದ್ಧರಾಮೇಶ್ವರರ ಜಯಂತಿಯನ್ನು ಜಿಲ್ಲಾ ಭೋವಿ ಸಮಾಜ ಸಂಘದ ವತಿಯಿಂದ ಭಕ್ತಿಭಾವ ಮತ್ತು ಸಂಸ್ಕೃತಿಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುವುದು.
ಸಿದ್ಧರಾಮೇಶ್ವರರು ಸೊನ್ನಲಿಗೆ (ಇಂದಿನ ಸೊಲ್ಲಾಪುರ)ಯಲ್ಲಿ ಕಾಯಕ, ದಾಸೋಹ ಮತ್ತು ಸಮಾಜಸೇವೆಯ ಮೂಲಕ ಜನಹಿತಕ್ಕಾಗಿ ದುಡಿದ ಮಹಾನ್ ಶರಣರಾಗಿದ್ದು, “ಕಪಿಲಸಿದ್ಧ ಮಲ್ಲಿಕಾರ್ಜುನ” ಎಂಬ ವಚನಾಂಕಿತದಲ್ಲಿ ವಚನಗಳನ್ನು ರಚಿಸಿದ್ದಾರೆ. ಅವರ ಜೀವನ ಆದರ್ಶಗಳು ಇಂದಿಗೂ ಯುವ ಪೀಳಿಗೆಗೆ ಪ್ರೇರಣೆಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಹಾಗೂ ಪರಮ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಹಾಗೂ ಲಾಡಗೇರಿ ಹಿರೇಮಠ ಸಂಸ್ಥಾನದ ಶ್ರೀ ಷÀ.ಬ್ರ ಗಂಗಾಧರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ಧಾರ್ಮಿಕ ಉಪನ್ಯಾಸದಲ್ಲಿ ಅವರು ಶ್ರೀ ಸಿದ್ಧರಾಮೇಶ್ವರರ ಆದರ್ಶ, ತ್ಯಾಗ, ಸೇವಾಭಾವ ಮತ್ತು ಸಾಮಾಜಿಕ ಸಮಾನತೆ ಕುರಿತು ಪ್ರೇರಣಾದಾಯಕ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಪುಂಡಲೀಕ ನಿಂಗದಳ್ಳಿ ಹಾಗೂ ವೆಂಕಟರಾವ ಶಿಂಧೆ, ಹೈದ್ರಶಬಾದಿನ ಜಾತೀಯ ವಡ್ಡೇರಾ ಸಂಗಮದ ಅಧ್ಯಕ್ಷರಾದ ಪಿಟ್ಲಾ ಶ್ರೀಧರ, ಕಲಬುರಗಿಯ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜುನ ಕುಸ್ತಿ,ಭಾಲ್ಕಿ ಸಿ.ಪಿ.ಐ ಹನಮರೇಡ್ಡಿ ಭೋವಿ, ಜಹಿರಾಬಾದಿನ ರಾಮಲು ವಡ್ಡೇರಾ, ಧನರಾಜ ವಡೆಯರ, ಗಿರೀಶ ವಡೆಯರ, ಸಂಜುಕುಮಾರ ವಡೆಯರ, ಗಣೇಶ ಭೋವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ಸಿದ್ದಮ ಶಿಂಧೆ.ವಿವಿಧ ಸಮಾಜದ ಮುಖಂಡರು, ಗಣ್ಯರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವೇದಿಕೆಯಲ್ಲಿ ವಿಶೇಷ ಸಾಧಕರಿಗೆ ಸನ್ಮಾನ ನಡೆಯಿತು.
ಕಾರ್ಯಕ್ರಮದ ನಿರೂಪಣೆ ಶರಣಪ್ಪಾ ವಾಡೇಕರ ಹಾಗೂ ಡಾ. ಬಸವರಾಜ ಎನ್ ವಾಡೇಕರ್ ಅವರು ಸ್ವಾಗತ ಕೋರಿದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾವಿರಾರು ಭೋವಿ ಸಮಾಜದ ಬಂಧುಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಂತ್ಯೋತ್ಸವವನ್ನು ಯಶಸ್ವಿಗೊಳಿಸಿದರು.






















