
ಕಲಬುರಗಿ : ಡಿ.26:ದೇವನ ತೆಗನೂರ್ ಗ್ರಾಮದಲ್ಲಿರುವ ಶಿವಯೋಗಿಶ್ವರ ದೇವಸ್ಥಾನವು ಕಲ್ಯಾಣಿ ಚಾಲುಕ್ಯರ ವಾಸ್ತುಶಿಲ್ಪವನ್ನು ಹೊಂದಿದ್ದು, ತುಂಬಾ ಕಲಾತ್ಮಕವಾಗಿದೆ. ದೇವಾಲಯದ ಆವರಣದಲ್ಲಿ ವೀರಗಲ್ಲುಗಳು, ಶಿಲ್ಪಗಳು, ಕಲ್ಯಾಣಿ ನಾಡಿಗೆ ಐತಿಹಾಸಿಕ ದಾಖಲೆಗಳನ್ನು ಒದಗಿಸುತ್ತವೆ. ಇವುಗಳ ಸಂರಕ್ಷಣೆ ಮಾಡಬೇಕು ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.
ಶಹಬಾದ ತಾಲೂಕಿನ ದೇವನ ತೆಗನೂರ್‍ನಲ್ಲಿನ ಶಿವಯೋಗಿಶ್ವರ ದೇವಾಲಯದಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗುದ ‘ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-45’ರಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ, ಅವರು ಮಾತನಾಡುತ್ತಿದ್ದರು.
ಈ ದೇವಾಲಯವಯ ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಾಣಗೊಂಡಿದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಊರು ಹೆಸರಿನ ಹಿಂದೆ ದೇವರು ಅಂತ ವಿಶೇಷಣೆಯಿರುವುದು ಗ್ರಾಮದ ಹೆಸರಿನ ವೈಶಿಷ್ಟತೆಯಾಗಿದೆ. ಶಹಾಬಾದ ಪಟ್ಟಣ, ತಾಲೂಕಿನ ಕೊಂದನೂರು, ಹೊನಗುಂಟಾ, ಭಂಕೂರ, ಮರತೂರ, ಮಾಲಗತ್ತಿ ಸೇರಿದಂತೆ ಮುಂತಾದ ಗ್ರಾಮಗಳು ಐತಿಹಾಸಿಕ ಸ್ಥಳಗಳು, ಸ್ಮಾರಕಗಳನ್ನು ಹೊಂದಿವೆ. ಧರ್ಮ, ಆಧ್ಯಾತ್ಮ, ಶಿಕ್ಷಣ, ಕಲೆ, ಸಾಹಿತ್ಯ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿವೆ. ಎಲ್ಲರಲ್ಲಿ ಐತಿಹಾಸಿಕ ಪ್ರಜ್ಞೆ ಅಗತ್ಯವಾಗಿದೆ ಎಂದರು.
ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾರಕಗಳು, ಶಿಲ್ಪಕಲೆಗಳು, ಶಾಸನಗಳ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕು ಮತ್ತು ಅವುಗಳ ಸಂರಕ್ಷಣೆ, ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಕಳೆದ ಒಂದುವರೆ ವರ್ಷದಿಂದ ಜಿಲ್ಲೆಯಾದ್ಯಂತ ಐತಿಹಾಸಿಕ ಸ್ಥಳಗಳಿಗೆ ತೆರಳಿ, ಅಲ್ಲಿನ ಮಾಹಿತಿಯನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಶಹಾಬಾದ ತಾಲೂಕಾ ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಕಸಾಪ ಕಲಬುರಗಿ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್. ಬಿರಾದಾರ, ಇತಿಹಾಸ ಉಪನ್ಯಾಸಕ ಶಶಿಕಾಂತ ಮಡಿವಾಳ, ದೇವಸ್ಥಾನದ ಕಾರ್ಯದರ್ಶಿ ಸೋಮಶೇಖರ ಮಕಾಸಿ, ಅರ್ಚಕ ನಾಗೇಂದ್ರ ಹೂಗಾರ, ಪ್ರಮುಖರಾದ ಗುರುಪ್ರಸಾದ ಕೋಬಾಳ, ಹಣಮಂತರಾವ ಶಂಕರವಾಡಿ, ರಾಜು ಪಾಟೀಲ್, ಗುರುಶಾಂತ ದೇವಣಿ, ಮಲ್ಲಯ್ಯ ಮಠಪತಿ, ವಿಷ್ಣು ಪ್ರಸಾದ, ಸಿದ್ದು ಸಲಗರ, ಪೀರಪ್ಪ ಜಮಾದಾರ, ಅಯ್ಯಪ್ಪ ಸೋನಾರ, ಬಸವರಾಜ ಹೂಗಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
























