Home ಜಿಲ್ಲೆ ಬೆಂಗಳೂರು ಕೋರಗಂಡಹಳ್ಳಿ ಕಾಶಿ ವಿಶ್ವೇಶ್ವರಸ್ವಾಮಿ ದೇಗುಲದಲ್ಲಿ ಶಿವರಾತ್ರಿ ಸಂಭ್ರಮ

ಕೋರಗಂಡಹಳ್ಳಿ ಕಾಶಿ ವಿಶ್ವೇಶ್ವರಸ್ವಾಮಿ ದೇಗುಲದಲ್ಲಿ ಶಿವರಾತ್ರಿ ಸಂಭ್ರಮ

ಕೋಲಾರ,ಫೆ,೧೬- ತಾಲ್ಲೂಕಿನ ಕೋರಗಂಡಹಳ್ಳಿಯಲ್ಲಿನ ಪುರಾಣ ಪ್ರಸಿದ್ಧ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಡಿಐಜಿಪಿ ದೇವರಾಜ್ ಅವರ ಕುಟುಂಬದಿಂದ ಅಭಿಷೇಕ ವಿಶೇಷ ಪೂಜೆ, ಅಲಂಕಾರ, ಅನ್ನದಾಸೋಹ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪೌರಾಣಿಕ ನಾಟಕ ಪ್ರದರ್ಶನ, ಗ್ರಾಮಸ್ಥರಿಗಾಗಿ ವಿವಿಧ ಸ್ಪರ್ಧೆಗಳು ಇಡೀ ರಾತ್ರಿ ನಡೆದು ಜಾಗರಣೆಯನ್ನು ಸಂಪನ್ನಗೊಳಿಸಿತು.


ಡಿಐಜಿಪಿ ದೇವರಾಜ್ ಕುಟುಂಬದವರು ಜೀರ್ಣೋದ್ದಾರಗೊಳಿಸಿ ನಿರಂತರವಾಗಿ ವಿಶೇಷ ಪೂಜೆಗಳನ್ನು ನಡೆಸಿಕೊಂಡು ಬರುತ್ತಿರು ಈ ದೇವಾಲಯ ಮತ್ತು ಶಿವಲಿಂಗವನ್ನು ವಿಶಿಷ್ಟ ರೀತಿಯ ಹೂಗಳಿಂದ ಅಲಂಕರಿಸಿದ್ದು, ಸ್ವಾಮಿಗೆ ಅಭಿಷೇಕ, ಹೂವಿನ ಅಲಂಕಾರ ಮಾಡಲಾಯಿತು. ಸ್ವಾಮಿಯ ದರ್ಶನಕ್ಕೆ ಮುಂಜಾನೆಯಿಂದಲೇ ಸಹಸ್ರಾರು ಮಂದಿ ಆಗಮಿಸಿ ದರ್ಶನ ಪಡೆದರು.


ಈ ಹಬ್ಬವನ್ನು ಜಾತಿ ಬೇಧವಿಲ್ಲದೇ ಪ್ರತಿಯೊಬ್ಬರೂ ಆಚರಿಸಬಹುದಾಗಿದ್ದು, ಪ್ರತಿಯೊಬ್ಬರ ಆರಾಧ್ಯ ದೈವವಾಗಿರುವ ಶಿವ ಶಾಂತಿಯ ಸ್ವರೂಪನಾಗಿದ್ದಾನೆ ಎಂದು ತಿಳಿಸಿದರು.


ಮುಂಜಾನೆಯೇ ಪೂಜೆಯಲ್ಲಿ ಪಾಲ್ಗೊಂಡಿದ್ದ ಡಿಐಜಿಪಿ ದೇವರಾಜ್, ಶಿವನ ಆರಾಧನೆಯಿಂದ ಜಗತ್ತಿನಲ್ಲಿ ಶಾಂತಿ,ನೆಮ್ಮದಿ ನೆಲಸಲಿ, ಉತ್ತಮ ಮಳೆ,ಬೆಳೆಯಾಗಲಿ ಎಂದು ಪ್ರಾರ್ಥಿಸಿದ್ದಾಗಿ ನುಡಿದರು.


ಶಿವ ಸಕಲರ ದೇವವಾಗಿದ್ದು, ಆಡಂಬರವಿಲ್ಲ ಆರಾಧನೆಗೆ ಹೆಸರುವಾಸಿ, ಅತಿ ಬೇಗ ಭಕ್ತರ ಇಷ್ಟಾರ್ಥ ಪೂರೈಸುವ ಶಿವನ ಪೂಜೆಯನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ದೇವಾಲಯ ಮತ್ತು ಪಕ್ಕದ ಕಲ್ಯಾಣಿಯನ್ನು ಸುಂದರಗೊಳಿಸಲಾಗಿದೆ, ಭಕ್ತರು ಇದರ ಪ್ರಯೋಜನ ಪಡೆಯಬೇಕು ಎಂದರು.


ಮಹಾಶಿವರಾತ್ರಿಯು ಶಿವ ಮತ್ತು ಪಾರ್ವತಿಯ ವಿವಾಹ, ಶಿವನ ತಾಂಡವ ನೃತ್ಯ, ಅಥವಾ ಲಿಂಗೋದ್ಭವದ ದ್ಯೋತಕವಾಗಿದೆ. ಪ್ರಮುಖ ಪುರಾಣದ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಜಗತ್ತನ್ನು ರಕ್ಷಿಸಲು ಶಿವನು ಹಾಲಾಹಲ ವಿಷವನ್ನು ಸೇವಿಸಿ, ಅದನ್ನು ಕಂಠದಲ್ಲಿ ಹಿಡಿದು ’ನೀಲಕಂಠ’ನಾದ ದಿನವನ್ನು, ಭಕ್ತರು ಉಪವಾಸ ಮತ್ತು ಜಾಗರಣೆಯ ಮೂಲಕ ಆಚರಿಸುವ ವಿಶೇಷ ಹಬ್ಬವಾಗಿದೆ ಎಂದು ತಿಳಿಸಿದರು.


ಶಿವರಾತ್ರಿ ಜಾಗರಣೆ ಅಂಗವಾಗಿ ದೇವಾಲಯದ ಆವರಣದಲ್ಲಿ ವಿವಿಧ ಸ್ಪರ್ಧೆಗಳನ್ನು ದೇವರಾಜ್ ಕುಟುಂಬದವರು ಆಯೋಜಿಸಿದ್ದರು. ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ನಡೆದಿದ್ದು, ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಇದಾದ ನಂತರ ಮಹಿಳೆಯರಿಗಾಗಿ ಮಡಿಕೆ ಹೊಡೆಯುವ ಸ್ಪರ್ಧೆ ನಡೆಯಿತು. ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕವಾಗಿ ಹಗ್ಗಜಗ್ಗಾಟ ಸ್ಪರ್ಧೆ ನಡೆದಿದ್ದು, ಆಕರ್ಷಣಿಯವಾಗಿತ್ತು.


ವಿವಿಧ ಸ್ಪರ್ಧೆಗಳಲ್ಲಿ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಪಾಲ್ಗೊಂಡಿದ್ದು, ಭಾಗವಹಿಸಿದ್ದವರೆಲ್ಲರಿಗೂ ಸಮಾಧಾನಕರ ಬಹುಮಾನ ನೀಡಿದರು.
ಇಡೀ ರಾತ್ರಿ ದೇವಾಲಯದ ಆವರಣದಲ್ಲಿ ವಿದ್ವತ್ ರಮ್ಯಶ್ರೀ ಕಲಾ ತಂಡದಿಂದ ಶಾಸ್ತ್ರೀಯ ಭಕ್ತಿ ಗೀತೆಗಳ ಕಾರ್ಯಕ್ರಮ ನಡೆಯಿತು. ಕಲಾವಿದ ಅಕ್ಬರ್ ನೇತೃತ್ವದಲ್ಲಿ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಿತು.


ದೇವಾಲಯದ ಆವರಣದಲ್ಲಿ ಜಾಗರಣೆ ಸಂಪನ್ನಗೊಳ್ಳಲು ಅನುವಾಗುವಂತೆ ರಾತ್ರಿ ೯ ಗಂಟೆಗೆ ಬೆಳ್ಳಿ ಕಿರೀಟ ಪುರಸ್ಕೃತ ಬೆಟ್ಟದ ಹೊಸಹಳ್ಳಿ ಕೃಷ್ಣಮೂರ್ತಿ ನಿರ್ದೇಶನದಲ್ಲಿ ‘ಮೂರುವರೆ ವಜ್ರಗಳು’ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.


ನಾಟಕದಲ್ಲಿ ಕಲಾವಿದರಾಗಿ ಕೋರಗಂಡಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ಹಲವಾರು ಮಂದಿ ನಟಿಸಿದ್ದು, ಕೃಷ್ಣನಾಗಿ ಸೋಮಶೇಖರ್, ಬಲರಾಮನಾಗಿ ಕೃಷ್ಣೇಗೌಡ, ಒಂದನೇ ನಾರದನಾಗಿ ಧನಂಜಯ್,೨ನೇ ನಾರದ ವೆಂಕಟೇಶಪ್ಪ, ಕೃತವರ್ಮನಾಗಿ ಸಂಪಂಗಿ ನಟಿಸಿದ್ದಾರೆ.


ಪೂಜೆಯಲ್ಲಿ ವಕ್ಕಲೇರಿ ಪಾಲಾಕ್ಷೇಗೌಡ, ಪುಟ್ಟರಾಜು,ಕೋಮುಲ್ ನಿರ್ದೇಶಕ ನಾಗರಾಜಪ್ಪ, ಪ್ರಕಾಶ್, ವೆಂಕಟೇಶಗೌಡ, ವಕ್ಕಲೇರಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್,ಮುಳ್ಳಹಳ್ಳಿ ಮಂಜುನಾಥ್, ಹೆಬ್ಬಟ ನಾರಾಯಣಗೌಡ, ವೆಂಕಟರಾಮರೆಡ್ಡಿ, ನಗರಸಭಾ ಮಾಜಿ ಅಧ್ಯಕ್ಷ ಕಾಲ ಪ್ರಕಾಶ್, ಮಂಜುನಾಥ್, ಪತ್ರಕರ್ತ ಕೆ.ಎಸ್.ಗಣೇಶ್, ಮುನಿವೆಂಕಟಯಾದವ್, ಅಮ್ಮೇರಹಳ್ಳಿ ಚಲಪತಿ, ನಿತಿನ್ ಯಾದವ್, ವಕೀಲ ಚಲಪತಿ ಮತ್ತಿತರರು ಹಾಜರಿದ್ದರು.