ಮಹೆಬೂಬ ಸುಭಾನಿ ಉರುಸುನಲ್ಲಿ ಭಾಗಿಯಾಗಿ ಭಾವೈಕ್ಯತೆ ಸಂದೇಶ ಸಾರಿದ ಶಿವಕುಮಾರ ಸವದಿ

ಅಥಣಿ : ಅ.೬:ಪಟ್ಟಣದಲ್ಲಿ ತನ್ನದೇ ಆದ ಐತಿಹಾಸಿಕ ಧಾರ್ಮಿಕ ಮತ್ತು ಭಾವೈಕ್ಯತೆಯ ಪರಂಪರೆ ಹೊಂದಿರುವ ಮುಲ್ಲಾ ಗಲ್ಲಿಯಲ್ಲಿರುವ ಪ್ರಸಿದ್ಧ ಮಹೆಬೂಬ್ ಸುಭಾನಿ ದರ್ಗಾದ ಉರುಸು ಅನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಂಭ್ರಮ ಸಡಗರದಿಂದ ಜರುಗಿತು. ಜಾತಿ ಭೇದ ಮರೆತು ಹಿಂದೂ-ಮುಸ್ಲಿಮರೆಲ್ಲ ಸಹೋದರತೆಯಿಂದ ಶ್ರದ್ಧೆ-ಭಕ್ತಿಯಿಂದ ಉರುಸ್ ಆಚರಿಸುತ್ತಾ ಬಂದಿದ್ದಾರೆ.
ಈ ಉರುಸು ಆಚರಣೆಗೆ ವಿವಿಧ ಸಮುದಾಯಗಳ ಭಕ್ತಾದಿಗಳು ದೂರ ದೂರದಿಂದ ಆಗಮಿಸಿ, ದೀಪಗಳಿಗೆ ಎಣ್ಣೆ ಹಾಕಿ, ಮಜಾರ ಮೇಲೆ ಗಲೀಫ ಹಾಕುವ ಮೂಲಕ ಮಹೆಬೂಬ್ ಸುಭಾನಿ ಅವರ ಆಶೀರ್ವಾದ ಪಡೆದರು.
ಉರುಸು ನಿಮಿತ್ಯ ದರ್ಗಾವನ್ನು ವಿಶೇಷ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪೊಲೀಸ್ ಇಲಾಖೆಯ ಅಧಿಕಾರಿಗಳ ಹಾಗೂ ಸಿಬ್ಬಂದಿ ವರ್ಗದವರು ಮೆರವಣಿಗೆ ಮೂಲಕ ಗಲೀಫ್ ತಂದು ದರ್ಗಾಕ್ಕೆ ಅರ್ಪಿಸಿದರು.
ಈ ಭಾವೈಕ್ಯತಾ ಉರುಸು ಸಂಗಮದಲ್ಲಿ ಯುವ ನಾಯಕ, ಉದ್ಯಮಿ ಶಿವಕುಮಾರ್ ಸವದಿ ಅವರು ಭಾಗವಹಿಸಿ ಮಹೆಬೂಬ ಸುಭಾನಿ ಅವರು ಮಜಾರೆಗೆ ಗಲೀಫ್ ಹಾಗೂ ಹೂಮಾಲೆ ಹಾಕಿ ಆಶೀರ್ವಾದ ಪಡೆದು, ನಾಡಿಗೆ ಮಹತ್ವದ ಭಾವೈಕ್ಯತೆ ಹಾಗೂ ಸಹೋದರತ್ವದ ಸಂದೇಶ ಸಾರಿದರು.
ಈ ವೇಳೆ ಯುವ ನಾಯಕ ಹಾಗೂ ಉದ್ಯಮಿ ಶಿವಕುಮಾರ್ ಸವದಿ ಮಾತನಾಡಿ ನಮ್ಮೆಲ್ಲರ ಜಾತಿ -ಧರ್ಮಗಳು ಮತ ಪಂಥಗಳು ಬೇರೆ ಬೇರೆಯಾಗಿದ್ದರೂ, ನಾವೆಲ್ಲರೂ ಭಗವಂತನ ಮುಂದೆ ಒಂದೇ ಇಲ್ಲಿ ಯಾರೂ ಕೀಳಲ್ಲ, ಯಾರೂ ಮೇಲಿಲ್ಲ. ‘ದೇವನೊಬ್ಬ ನಾಮ ಹಲವು’ ಎಂಬ ಮಾತಿನಂತೆ, ನಾವು ಆಚರಿಸುವ ಪದ್ಧತಿಗಳು ಭಿನ್ನವಾಗಿರಬಹುದು. ಆದರೆ, ನಾವು ಶುದ್ಧ ಮನಸ್ಸು ಮತ್ತು ಪ್ರಾಮಾಣಿಕ ಭಕ್ತಿಯಿಂದ ಯಾವುದೇ ಹಬ್ಬಗಳು. ಉರುಸು. ಸತ್ಪುರುಷರ ಜಯಂತಿಗಳನ್ನು ಆಚರಣೆ ಮಾಡಿದರೆ, ನಮ್ಮ ಪ್ರತಿಯೊಂದು ಪ್ರಾರ್ಥನೆಯೂ ದೇವರಿಗೆ ಸಲ್ಲುತ್ತದೆ, ಎಂದ ಅವರು ದೇವಸ್ಥಾನ, ದರ್ಗಾ. ಚರ್ಚ ಹಾಗೂ ಮಸೀದಿಗಳಂತಹ ಧಾರ್ಮಿಕ ಶೃದ್ಧಾ ಕೇಂದ್ರಗಳು ಶಾಂತಿ ಮತ್ತು ಸಮನ್ವಯತೆ ಭಾವೈಕ್ಯತೆಯ ಕೇಂದ್ರಗಳಾಗಿವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಇನೂಸ್ ಮುಲ್ಲಾ, ಹಾಜಿ ಶಫೀ ಮುಲ್ಲಾ, ಹಾಜಿ ಕುತುಬುದ್ದೀನ್ ಮುಲ್ಲಾ, ದರ್ಗಾ ಕಮಿಟಿ ಅಧ್ಯಕ್ಷರಾದ ಮುಷ್ತಾಕ್ ಮುಲ್ಲಾ, ಅಂಜುಮನ್ ಕಮಿಟಿ ಸದಸ್ಯ ಅಬ್ದುಲ್ ಅಜೀಜ್ ಮುಲ್ಲಾ, ಮಂಜು ಹೋಳಿಕಟ್ಟಿ, ಮಹಾಂತೇಶ ಬಾಡಗಿ, ಖಲೀಲ್ ಮುಲ್ಲಾ. ದಾದಾಪೀರ್ ಜಮಾದಾರ ಸೇರಿದಂತೆ ಹಲವು ಗಣ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.