ಸನಾತನ ಧರ್ಮದ ಸಂಸ್ಕಾರ ಕಲಿಸುವಲ್ಲಿ ಶಿವದೀಕ್ಷೆ ಕಾರ್ಯಕ್ರಮ ಪೂರಕ

ಸಿರಾ, ಜ. ೧- ಸನಾತನ ಧರ್ಮದ ಸಂಸ್ಕಾರಗಳು ಮತ್ತು ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಶಿವದೀಕ್ಷೆಯಂತಹ ಕಾರ್ಯಕ್ರಮಗಳು ಅತ್ಯಂತ ಪ್ರಮುಖವಾಗಿವೆ ಎಂದು ವಿಧಾನ ಪರಿಷತ್ ಶಾಸಕ ಹಾಗೂ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಜಿಲ್ಲಾಧ್ಯಕ್ಷ ಚಿದಾನಂದ್ ಎಂ. ಗೌಡ ಅಭಿಪ್ರಾಯಪಟ್ಟರು.


ನಗರದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯತ ಹಿತರಕ್ಷಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ವೀರಶೈವ-ಲಿಂಗಾಯತ ವಟುಗಳ ಶಿವದೀಕ್ಷೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.


ವೀರಶೈವ-ಲಿಂಗಾಯತ ಧರ್ಮದ ಹಿರಿಮೆ ಮತ್ತು ಸಂಸ್ಕಾರಗಳ ಬಗ್ಗೆ ಬೆಳಕು ಚೆಲ್ಲಿದರು. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಯುವ ಪೀಳಿಗೆಗೆ ನಮ್ಮ ಮೂಲ ಬೇರುಗಳ ಪರಿಚಯ ಮಾಡಿಸುವುದು ಅಗತ್ಯ. ಧರ್ಮ ಜಾಗೃತಿಯ ಮೂಲಕ ಸಮಾಜವನ್ನು ಕಟ್ಟುವ ಕೆಲಸವಾಗಬೇಕು. ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಸಂಘಟಿಸಿದ ಸಮಿತಿಯ ಕಾರ್ಯ ಎಲ್ಲರಿಗೂ ಮಾದರಿ ಎಂದರು.


ಇದೇ ಸಂದರ್ಭದಲ್ಲಿ ವಟುಗಳಿಗೆ ಶುಭ ಹಾರೈಸಿ, ಸಮಾಜದ ಸಂಘಟನೆಗೆ ತಮ್ಮ ಸದಾಕಾಲದ ಬೆಂಬಲವನ್ನು ಘೋಷಿಸಿದರು.


ಕಾರ್ಯಕ್ರಮವು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಅದ್ದೂರಿಯಾಗಿ ನೆರವೇರಿತು. ನೂರಾರು ವಟುಗಳು ಜಗದ್ಗುರುಗಳಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದುಕೊಂಡರು.


ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಮಠಚಿದ ಶ್ರೀ ಕಾರದ ವೀರಬಸವ ಸ್ವಾಮೀಜಿ, ಕರೆವಾಡಿ ಮಠದ ಶ್ರೀ ಮಲೆ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು, ಮಠಾಧೀಶರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಶಾಸಕರನ್ನು ಸನ್ಮಾನಿಸಿದರು.