ಕಾರ್ತಿಕ ಮಾಸದ ಪ್ರಯುಕ್ತ ಶತರುದ್ರಾಭಿಷೇಕ

ಚಿಕ್ಕಬಳ್ಳಾಪುರ : ನ.೩-ಪುರಾತನ ಇತಿಹಾಸ ಇರುವ ಹಾಗೂ ಅತ್ಯಂತ ಮಹಿಮಾನ್ವಿತ ಕಂದವಾರ ಎದುರು ಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ನಗರದ ಗಾರ್ಮೆಂಟ್ಸ್ ಫ್ಯಾಕ್ಟ್ರಿ ಹಿಂಭಾಗದ ಬಡಾವಣೆಯ ನಾಗಮೋಹನ್ ಮತ್ತು ಅವರ ಕುಟುಂಬದವರು ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ಶತರುದ್ರಾಭಿಷೇಕ ’ ಏರ್ಪಡಿಸಿದ್ದು ಜ್ವರಹರೇಶ್ವರ ಮತ್ತು ವೈದ್ಯನಾಥೇಶ್ವರ ದೇವರುಗಳು ಹೂವಿನ ಅಲಂಕಾರಗಳಿಂದ ಕಂಗೊಳಿಸಿತು.


ವಿಪ್ರ ಬಾಂಧವರು ನಡೆಸಿಕೊಟ್ಟ ರುದ್ರ ಮಂತ್ರ ಕಿವಿಗೆ ಇಂಪಾಗಿತ್ತು.


ನಗರಕ್ಕೆ ಕೇವಲ ಒಂದು ಕಿಲೋಮೀಟರ್ ಸಮೀಪದಲ್ಲಿ ಇರುವ ಕಂದವಾರದ ಈ ದೇವಾಲಯದ ವಿಶೇಷ ಎಂದರೆ ಉತ್ತರ ಅಭಿಮುಖ ಮತ್ತು ದಕ್ಷಿಣ ಅಭಿಮುಖ ದಿಕ್ಕುಗಳಲ್ಲಿ ಪ್ರತ್ಯೇಕವಾಗಿ ಎರಡು ಶಿವಲಿಂಗಗಳು ಸ್ಥಾಪಿತಗೊಂಡಿದ್ದು ಈ ದೇವಾಲಯಕ್ಕೆ ಕೃತ ಯುಗದ ಶ್ರೀ ರಾಮನ ಜೀವಿತದ ಅವಧಿಯ ಇತಿಹಾಸ ಒಂದು ಇದೆ.


ಕಂದವಾರದ ಹಿರಿಯ ನಾಗರಿಕರು ಹೇಳುವಂತೆ ಶ್ರೀರಾಮಚಂದ್ರ ವನವಾಸಕ್ಕಾಗಿ ಬಂದ ಸಂದರ್ಭದಲ್ಲಿ ಶ್ರೀ ಸೀತ ಮಾತೆಗೆ ಅನಾರೋಗ್ಯ ಉಂಟಾಗಿದ್ದು ಈಶ್ವರನ ಪೂಜೆಯಿಂದ ಅನಾರೋಗ್ಯ ಕಡಿಮೆ ಆಗುತ್ತದೆ ಎಂಬ ಕಾರಣದಿಂದ ಶುಭ ಹಾಗೂ ಪ್ರಶಸ್ತ ಮುಹೂರ್ತದಲ್ಲಿ ಶ್ರೀರಾಮಚಂದ್ರ ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿದ್ದು ಆ ಶಿವಲಿಂಗಕ್ಕೆ ಜ್ವರಹರೇಶ್ವರ ಎಂದು ಆನಂತರ ಶ್ರೀ ರಾಮನ ಆದೇಶದಂತೆ ತಡವಾಗಿ ಶಿವಲಿಂಗವನ್ನು ತಂದ ಆಂಜನೇಯ ಸ್ವಾಮಿ ಶ್ರೀರಾಮಚಂದ್ರ ಪ್ರತಿಷ್ಠಾಪಿಸಿ ಆ ಶಿವಲಿಂಗಕ್ಕೆ ವೈದ್ಯನಾಥೇಶ್ವರ ಎಂದು ಹೆಸರಿಡಲಾಯಿತು ಇದು ಪೂರ್ವಜರು ಹೇಳುವ ಅಭಿಪ್ರಾಯ. ಈ ದೇವಾಲಯಗಳಲ್ಲಿ ಪ್ರತಿ ಸೋಮವಾರ ಕಾರ್ತಿಕ ಮಾಸದ ನಾಲ್ಕು ಸೋಮವಾರಗಳು ಹಾಗೂ ಮಹಾಶಿವರಾತ್ರಿ ದಿನಗಳಲ್ಲಿ ವಿಶೇಷ ಪೂಜೆಗಳು ನಡೆದು ಅಪಾರ ಭಕ್ತರು ದೇವಾಲಯಕ್ಕೆ ಆಗಮಿಸುವರು.


ಇಂತಹ ಅಪೂರ್ವ ಇತಿಹಾಸ ಇರುವ ಈ ದೇವಾಲಯ ಚಿಕ್ಕಬಳ್ಳಾಪುರ ನಗರದ ೧೪ನೇ ವಾರ್ಡ್ ವ್ಯಾಪ್ತಿಗೆ ಬರುತ್ತದೆ. ಪ್ರಸ್ತುತ ಈಗ ಕಾರ್ತಿಕ ಮಾಸ ಆಗಿದ್ದು ಇದೇ ಸಂದರ್ಭದಲ್ಲಿ ಇಲ್ಲಿ ಶತರುದ್ರಾಭಿಷೇಕ ಸಹ ನಡೆದಿದ್ದು ಭಕ್ತರಿಗೆ ತುಂಬಾ ಸಂತೋಷ ತಂದ ವಿಚಾರ ಆಗಿದೆ.