Home ಜಿಲ್ಲೆ ಮೌಲ್ಯಾಧಾರಿತ ಬದುಕಿಗೆ ಶರಣರ ಸಂದೇಶಗಳೇ ದಾರಿದೀಪ :ವ್ಹಿ.ಸಿ.ನಾಗಠಾಣ

ಮೌಲ್ಯಾಧಾರಿತ ಬದುಕಿಗೆ ಶರಣರ ಸಂದೇಶಗಳೇ ದಾರಿದೀಪ :ವ್ಹಿ.ಸಿ.ನಾಗಠಾಣ

ವಿಜಯಪುರ:ಮೇ.೨೫: ವಿಜಯಪುರ ಶರಣರ, ಸಂತರ ನಾಡು. ಸಂಸ್ಕೃತಿ, ಸಂಸ್ಕಾರ ಆಚಾರ-ವಿಚಾರಗಳು ನಮ್ಮ ಈ ಮಣ್ಣಿನ ಗುಣ ಧರ್ಮದಲ್ಲಿಯೇ ಅಡಗಿವೆ. ೧೨ನೇ ಶತಮಾನದ ಶರಣರ ಸಂದೇಶಗಳು ಸಮಾನತೆ, ಕಾಯಕನಿಷ್ಠೆ ಮತ್ತು ಮಾನವೀಯತೆಯ ಮೇಲೆ ಆಧಾರಿತವಾಗಿದ್ದು, ಜಾತಿ ಬೇಧವಿಲ್ಲದೇ ಪ್ರತಿಯೊಬ್ಬರಿಗೂ ಸಮಾನ ಅವಕಾಶವಿರುವ ಸಮಾಜ ನಿರ್ಮಾಣವೇ ಅವರ ಮುಖ್ಯ ಗುರಿಯಾಗಿತ್ತು. ಇಂದು ನಾವೆಲ್ಲರೂ ಮೌಲ್ಯಾಧಾರಿತ ಬದುಕನ್ನು ನಡೆಸಲು ಶರಣರ ಸಂದೇಶಗಳೇ ದಾರಿದೀಪವಾಗಿವೆ ಎಂದು ವಿಜಯಪುರ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ವ್ಹಿ.ಸಿ.ನಾಗಠಾಣ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಲಿಂ. ಬಸವರಾಜ ಪರಪ್ಪ ಆಲೂರ ದತ್ತಿ. ದಿ.ವೈ.ಎಸ್.ವಿ ಸೂರ್ಯನಾರಾಯಣ ದತ್ತಿ ಹಾಗೂ ಲಿಂ. ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ದತ್ತಿನಿಧಿಗೋಷ್ಠಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿದಾನಿಗಳು ತಮ್ಮ ಹಿರಿಯರ ಸ್ಮರಣೆಗೋಸ್ಕರ ಇಟ್ಟಿರುವ ದತ್ತಿಗಳಿಗೆ ನ್ಯಾಯ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಕೈಕೊಂಡು ಇಡೀ ಕನ್ನಡ ನಾಡಿನಲ್ಲಿಯೇ ನಮ್ಮ ಜಿಲ್ಲೆ ದತ್ತಿನಿಧಿಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಬಹುದೊಡ್ಡ ಕೊಡುಗೆ ನೀಡಿದ್ದು, ದತ್ತಿಗೋಷ್ಠಿಗಳ ಮೂಲಕ ಶರಣರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯಪುರದ ಸಾಯಿ ಸಕ್ಸೆಸ್ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಕಲ್ಪನಾ ಶಾಬಾದಿ ಮಾತನಾಡಿ ಶರಣರ ಸಂದೇಶಗಳು ನಮ್ಮೆಲ್ಲರ ಬಾಳಿಗೆ ಬೆಳಕಾಗಿ ನಿಲ್ಲಬಲ್ಲ ಅನೇಕ ದಿಕ್ಸೂಚಿಯಾದ ವಚನಗಳಲ್ಲಿ ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳಿದ್ದು ಅದರ ಸಂದೇಶಗಳನ್ನು ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
“ಬಸವಣ್ಣನವರ ವಚನಗಳಲ್ಲಿನ ಸಂದೇಶಗಳು” ಎಂಬ ವಿಷಯದ ಕುರಿತು ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಶರಣಗೌಡ ಪಾಟೀಲ ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿ, ಬಸವಣ್ಣನವ ವಚನಗಳಲ್ಲಿ ಮಾನವೀಯ ಮೌಲ್ಯಗಳಿದ್ದು, ಸಮಾನತೆ ಮತ್ತು ನೖತಿಕತೆಯ ತಳಹದಿಯ ಮೇಲೆ ಯಾವುದೇ ಜಾತಿ ಧರ್ಮಕ್ಕೆ ಸೀಮೀತವಾಗಿರದೇ ಇಡೀ ವಿಶ್ವಕ್ಕೆ ಸಾರ್ವಕಾಲಿಕ ಸಂದೇಶಗಳನ್ನು ನೀಡುವ ವಚನಗಳಿದ್ದು, ಅಂತಹ ಅನೇಕ ವಚನಗಳನ್ನು ಹಲವಾರು ದೃಷ್ಠಾಂತ ಹಾಗೂ ನಿದರ್ಶನಗಳೊಂದಿಗೆ ಮಾರ್ಮಿಕವಾಗಿ ವಿವರಿಸಿದರು.
“ಬಸವಣ್ಣನವರ ಸಮಕಾಲೀನ ಶರಣರ ಕುರಿತು ಚಿಂತನೆ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಹೊನವಾಡದ ಶಿಕ್ಷಕಿ, ಸಾಹಿತಿ ಶರಣಮ್ಮ ಹಾದಿಮನಿ ಮಾತನಾಡಿ,ಬಸವಣ್ಣನ ಸಮಕಾಲೀನ ವಚನಕಾರರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಆಯ್ದಕ್ಕಿ ಮಾರಯ್ಯ- ಆಯ್ದಕ್ಕಿ ಲಕ್ಕಮ್ಮ, ಜೇಡರ ದಾಸಿಮಯ್ಯ, ಮಡಿವಾಳ ಮಾಚಿದೇವ, ಚನ್ನಬಸವಣ್ಣ, ಅಂಬಿಗೇರ ಚೌಡಯ್ಯ. ಸೂಳೆ ಸಂಕವ್ವೆ, ಹಡಪದ ಅಪ್ಪಣ್ಣ, ಶರಣೆ ಲಿಂಗಮ್ಮ ಹೀಗೆ ಅನೇಕ ಶರಣ-ಶರಣೆಯರು ಈ ಸಮಾಜಕ್ಕೆ ನೀಡಿದ ಸಂದೇಶಗಳನ್ನು ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟರು.
ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನಂದು ಗಡಗಿ, ಶ್ರೀಶೈಲ ಕನ್ನೂರ, ಕಲ್ಪನಾ ಬಾಬಕರ ಮಾತನಾಡಿದರು.ಶಕುಂತಲಾ ಹಿರೇಮಠ ಪ್ರಾರ್ಥಿಸಿದರು. ಮಹಾದೇವಿ ತೆಲಗಿ ಸ್ವಾಗತಿಸಿ ಗೌರವಿಸಿದರು. ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಶಿಕಲಾ ನಾಯ್ಕೋಡಿ ಗೀತಗಾಯನ ಮಾಡಿದರು. ಯಮನಪ್ಪ ಪವಾರ ನಿರೂಪಿಸಿದರು. ಪರವೀನ ಶೇಖ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ವಿಜಯಲಕ್ಷ್ಮಿ ಹಳಕಟ್ಟಿ, ಜಿ.ಎಸ್.ಬಳ್ಳೂರ, ಸಿದ್ದಣ್ಣ ಸಾತಲಗಾಂವ, ಟಿ. ಆರ್, ಹಾವಿನಾಳ, ಬಿ.ಕೆ. ಗೋಟ್ಯಾಳ, ಅಂಬಾದಾಸ ಜೋಶಿ, ಡಾ.ಕೆ. ಬಿ.ಹಿರೇಮಠ, ಬಿ.ಎಸ್.ಕೋನರೆಡ್ಡಿ, ಅರ್ಜುನ ಶಿರೂರ, ಬಸವರಾಜ ಬಿರಾದಾರ, ಸಿದ್ದು ಮಾನೆ, ಎಂ.ಎಸ್ ಬಗಲಿ, ಶ್ರೀಕಾಂತ ನಾಡಗೌಡ, ಬಿ.ವಿ. ಪಟ್ಟಣಶೆಟ್ಟಿ, ಎಂ.ಆರ್ ಬಡಿಗೇರ, ಎ.ವಿ. ಜಹಾಗೀರದಾರ, ತ್ರಿವೇಣಿ ಬುರ್ಲಿ, ಎ.ಎಂ.ಹಳ್ಳೂರ, ಫಕ್ರುದ್ದೀನ್ ಅಲಿಅಹ್ಮದ ಹಿರೇಕೊಪ್ಪ, ಸಿದ್ದು ಬೀಳಗಿ, ಎಸ್.ಎನ್ ಪೋಳ, ಎಂ. ಎಸ್ ಕನ್ನೂರ, ನಿಖಿಲ ವಾಲಿಕಾರ, ಪಿ.ಎಂ.ಭಾವಿಕಟ್ಟಿ, ವಿರೇಶ ಕನ್ನೂರ,ಆರ್.ಎಚ್ ಹುಣಸಿಗಿಡದ, ಆರ್.ಆರ್ ಮದರಳ್ಳಿ, ಬಸವರಾಜ ಹಿರೇಮಠ ಚಂದ್ರಶೇಖರ ಸರೂರ, ಶಿವಾಜಿ ಮೋರೆ ಮುಂತಾದವರು ಉಪಸ್ಥಿತರಿದ್ದರು.