
ಕಲಬುರಗಿ,ಸೆ.5:ಶರಣಬಸವೇಶ್ವರ ಸಂಸ್ಥಾನವು ಮೊದಲಿನಿಂದಲೂ ಕೃಷಿಗೆ ಮಹತ್ವ ನೀಡುತ್ತಾ ಬಂದಿದೆ ಎಂದು ಮುಕ್ತಾಂಬಿಕಾ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಆರ್.ಹುಗ್ಗಿ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶುಕ್ರವಾರ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಮತ್ತು ಒಕ್ಕಲುತನ ಸಂಸ್ಕøತಿ ದಾಸೋಹ ವಿಷಯ ಕುರಿತು ಮಾತನಾಡಿ, ಮಹಾದಾಸೋಹಿ ಶರಣಬಸವೇಶ್ವರರು ಒಕ್ಕಲುತನವನ್ನು ಮೂಲ ಕಾಯಕವಾಗಿಸಿಕೊಂಡಿದ್ದರು. ಅವರು ತಾವು ಬೆಳೆದ ಬೆಳೆಯನ್ನು ಬಡವರಿಗೆ ಹಂಚುತ್ತಿದ್ದರು. ಹೊಲದ ನಾಲ್ಕು ದಿಕ್ಕುಗಳಲ್ಲಿ ರಂಜಣಿಗೆಯನ್ನು ಇಟ್ಟು ಹಕ್ಕಿ ಪಕ್ಕಿಗಳಿಗೆ ನೀರುಣಿಸುತ್ತಿದ್ದರು. ದಾನ್ಯಗಳನ್ನು ತಿನ್ನಲು ಕೊಡುತ್ತಿದ್ದರು. ಅದರಂತೆ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಸಹ ಕೃಷಿಗೆ ಬಹಳ ಆದ್ಯತೆ ನೀಡಿದ್ದರು. ಸ್ವತಃ ಅವರೇ ಹೊಲಕ್ಕೆ ಹೋಗುತ್ತಿದ್ದರು. ತಮ್ಮ ಹೊಲದಲ್ಲಿ ದುಡಿಯುತ್ತಿದ್ದ ರೈತರನ್ನು ಮಕ್ಕಳಂತೆ ಕಾಣುತ್ತಿದ್ದರು.
ಪೂಜ್ಯ ಡಾ. ಅಪ್ಪ ಅವರು ಕಾಯಕ, ದಾಸೋಹ, ಮಾನವೀಯತೆ ಮತ್ತು ಸಮಾಜಮುಖಿ ಚಿಂತನೆಗಳಿಗೆ ಮಹತ್ವ ನೀಡಿದ ಮಹನೀಯರು. ಅವರ ಬದುಕಿನ ಚಿಂತನೆಗಳಲ್ಲಿ ದುಡಿಯುವ ಜನರ ಬದುಕು, ಗ್ರಾಮೀಣ ಸಂಸ್ಕೃತಿ ಮತ್ತು ಕೃಷಿ ಪರಂಪರೆಗೆ ವಿಶೇಷ ಸ್ಥಾನ ನೀಡಿದ್ದರು.
ಅವರು ತಮ್ಮ ಹತ್ತಿರ ಬರುವ ರೈತರಿಗೆ ಪ್ರೀತಿಯಿಂದ ಕಂಡು ಬಹಳಷ್ಟು ಸಲಹೆ ನೀಡುತ್ತಿದ್ದರು. ಅವರ ಸಲಹೆ ಪಡೆದ ಅನೇಕ ರೈತರು ಉತ್ತಮ ಬೆಳೆ ಬೆಳೆದಿದ್ದಾರೆ. ತಮ್ಮ ಸಂಸ್ಥಾನ ತುಂಬೆಲ್ಲ ಅನೇಕ ಗಿಡಗಳನ್ನು ಬೆಳೆಸಿ ಹಸಿರು ವಾತಾವರಣವನ್ನು ನಿರ್ಮಿಸಿದ್ದಾರೆ. ದನಕರುಗಳನ್ನು ತಮ್ಮ ಮನೆಯ ಸದಸ್ಯರಂತೆ ಅವುಗಳಿಗೆ ಪ್ರೀತಿಯಿಂದ ಕಾಣುತ್ತಿದ್ದರು.
ಪೂಜ್ಯ ಅಪ್ಪ ಅವರ ಒಕ್ಕಲುತನ ಸಂಸ್ಕೃತಿ ದಾಸೋಹ ಎಂಬುದು ಕೇವಲ ಕೃಷಿಯ ಕುರಿತು ಮಾತನಾಡುವ ವಿಚಾರವಲ್ಲ. ಅದು ಭೂಮಿಯನ್ನು ಗೌರವಿಸುವುದು, ರೈತನ ಶ್ರಮವನ್ನು ಗೌರವಿಸುವುದು, ಅನ್ನದ ಮಹತ್ವವನ್ನು ಅರಿಯುವುದು, ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವುದು ಮತ್ತು ಸಮಾಜದೊಂದಿಗೆ ಹಂಚಿಕೊಳ್ಳುವುದು ಎಂಬ ವಿಶಾಲ ಜೀವನದೃಷ್ಟಿಯಾಗಿದೆ. ಅಪ್ಪನವರ ದಾಸೋಹದ ಪರಂಪರೆ ಒಕ್ಕಲುತನ ಸಂಸ್ಕೃತಿಯಲ್ಲಿರುವ ‘ದುಡಿದು ಬೆಳೆಸು-ಹಂಚಿ ಬದುಕು-ಸಮಾಜವನ್ನು ಬೆಳೆಸು’ ಎಂಬ ಸಂದೇಶವಿದೆ ಎಂದು ಹೇಳಿದರು.























