
ಕಲಬುರಗಿ : ಫಿಲ್ಟರ್‍ಬೆಡ್ ಬಡಾವಣೆ, ಜಿ.ಡಿ.ಎ ಗೋಕುಲ ನಗರದಲ್ಲಿ ವಚನೋತ್ಸವ ಪ್ರತಿಷ್ಠಾನ ಟ್ರಸ್ಟ್ ಹಾಗೂ ಮಹಾಂತಜ್ಯೋತಿ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಸಾಂಸ್ಕøತಿಕ ಭವನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಮನೆಯಂಗಳಗಳಲ್ಲಿ ಶ್ರಾವಣ ವಚನೋತ್ಸವ ಕಾರ್ಯಕ್ರಮದ ಶರಣ ದರ್ಶನ ಉಪನ್ಯಾಸ ಮಾಲೆಯಲ್ಲಿ ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿ ಶರಣ ಹಡಪದ ಅಪ್ಪಣ್ಣನವರ ಕುರಿತು ಉಪನ್ಯಾಸ ಮಾಲೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಉಪನ್ಯಾಸಕರಾಗಿ ಆಗಮಿಸಿದ್ದರು. ಮಹಾಂತಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಕ್ಕನ ಬಳಗದ ಮಾಯಾ ಪಾಟೀಲ ಹಾಗೂ ಪ್ರಭಾ ಪ್ರದಾನಿ ಉಪಸ್ಥಿತರಿದ್ದರು.
ಉಪನ್ಯಾಸದಲ್ಲಿ ವಡ್ಡನಕೇರಿಯವರು ಹಡಪದ ಅಪ್ಪಣ್ಣನವರು ತಮ್ಮ ಹಡಪದ ಕಾಯಕದ ಜೊತೆಗೆ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರಲ್ಲದೆ ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿ ಕೂಡ ಕಾರ್ಯನಿರ್ವಹಿಸಿದ್ದರು. ಚಿಂತನಾಶೀಲ ವಚನಗಳನ್ನು ಬರೆದು ಶರಣ ಚಳುವಳಿಯಲ್ಲಿ ಕೊನೆಯವರೆಗೂ ಬಸವಣ್ಣನವರ ಜೊತೆಗೆ ಇದ್ದು ಕಾಯಕಜೀವಿ ಶರಣರೆನಿಸಿಕೊಂಡಿದ್ದರು ಎಂದು ಅವರ ಅನೇಕ ವಚನಗಳ ಉದಾಹರಣೆಯ ಮೂಲಕ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಿವರಾಜ ಪಾಟೀಲರು 12ನೇ ಶತಮಾನದಲ್ಲಿ ಬಸವಾದಿ ಶರಣರು ಮೇಲು-ಕೀಳು ಭಾವನೆ, ಮೂಢನಂಬಿಕೆಯನ್ನು ಹೋಗಲಾಡಿಸಲು ಬೆಳಿಗ್ಗೆ ಎದ್ದು ಯಾರ ಮುಖ ನಾವು ನೋಡಬಾರದಂತ ಹೇಳುತ್ತಿದ್ದಂತ ಸಮಯದಲ್ಲಿ ಬಸವಣ್ಣನವರು ವಿನಮ್ರತೆ ಮತ್ತು ಕಿಂಕರತ್ವ ಭಾವನೆಯಿರುವ ಹಡಪದ ಅಪ್ಪಣ್ಣನವರನ್ನೇ ತಮ್ಮ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದ್ದರು. ಯಾವ ಮನುಷ್ಯನಿಗೆ ಸಿರಿವಂತಿಕೆಯ ಮದವೇರಿರುತ್ತದೆಯೋ ಅಂತಹವರಿಗೆ ಏನೂ ಮಾಡಲಾಗುವುದಿಲ್ಲ. ಬಸವಣ್ಣನವರ ತಮ್ಮ ವಚನದಲ್ಲಿ ಹಾವು ತಿಂದವರ ನುಡಿಸಬಹುದು, ಗರ ಹೊಡೆದವರ ನುಡಿಸಬಹುದು, ಸಿರಿಗರ ಹೊಡೆದವರ ನುಡಿಸಲಾಗದು ಎಂದು ಹೇಳಿದ್ದಾರೆ. ದಿನಕ್ಕೆ ಎಷ್ಟು ಕೋಟಿ ದುಡ್ಡನ್ನಾದರೂ ಗಳಿಸಬಹುದು ಆದರೆ ಸಂಸ್ಕಾರವನ್ನು ಗಳಿಸುವುದಕ್ಕಾಗುವುದಿಲ್ಲ. ಅದು ನಮ್ಮ ಮನೆಯಲ್ಲಿಯ ನಡವಳಿಕೆ ನಾವು ಮಾಡುವ ಕಾರ್ಯದಿಂದಲೇ ಬರುತ್ತದೆ. ಅದಕ್ಕಾಗಿ ಮಕ್ಕಳಿಗೆ ಸಂಸ್ಕಾರಭರಿತ ಶಿಕ್ಷಣ ನೀಡುವುದರ ಜೊತೆಗೆ ದಿನಾಲು ಶರಣರ ವಚನಗಳನ್ನು ಕೂಡ ತಿಳಿಸಿಕೊಡುವಂತೆ ಎಲ್ಲ ಶರಣ ತಂದೆ-ತಾಯಿಗಳಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಶಿವಶರಣರ ವಚನಗಳ ಪಠಣ ಹಾಗೂ ಗಾಯನ ಮಾಡಿದ ಧಾನಮ್ಮ, ಪ್ರಣವಿ, ಶ್ರೇಯಾಂಕ, ಚಿನ್ಮಯ, ಶ್ರೀಗೌರಿ, ಆಯುಷಿ, ಸ್ವಾತಿ, ಶ್ರೇಯಸ್, ವೀರಕುಮಾರ ಅಲ್ಲದೇ ಅನೇಕ ಮಕ್ಕಳಿಗೆ ಪ್ರತಿಷ್ಟಾನದವತಿಯಿಂದ ಪ್ರಮಾಣ ಪತ್ರಗಳನ್ನು ಕೂಡ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೆ ಬಡಾವಣೆಯ ಸಾರ್ವಜನಿಕರು, ವಚನೋತ್ಸವ ಸಮಿತಿ ಸದಸ್ಯರು, ಬಸವಾಭಿಮಾನಿಗಳು, ಶರಣ-ಶರಣೆಯರು ಆಗಮಿಸಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಅಕ್ಕನ ಬಳಗದವರು ಭಜನೆ ಮಾಡಿದರು. ಕು. ಸೃಷ್ಠಿ ಜಲದೆ ಪ್ರಾರ್ಥನೆ ಗೀತೆ ಹಾಡಿದರು. ಕಲ್ಯಾಣಪ್ಪ ಬಿರಾದಾರ, ವಿಶ್ವನಾಥ ಮಂಗಲಗಿ ಓಂಕಾರ ಧ್ಯಾನ ನಡೆಸಿಕೊಟ್ಟರು. ದಾಸೋಹಿಗಳಾದ ಸಿದ್ದಾರಾಮ ಹಂಚನಾಳ ಸ್ವಾಗತಿಸಿದರು. ವಚನೋತ್ಸವದ ಸಂಚಾಲಕರಾದ ಶಿವರಾಜ ಅಂಡಗಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಧೂಳಾಗುಂಡಿ ವಂದಿಸಿದರು.






























