
ಕೋಲಾರ,ಜು,೬- ಹೊಂದಾಣಿಕೆ ರಾಜಕಾರಣ ಮಾಡದೇ ಪಕ್ಷವನ್ನು ಬೇರುಮಟ್ಟದಿಂದ ಬಲಗೊಳಿಸಿ, ಬಲಿಷ್ಟ ಕಾರ್ಯಕರ್ತರ ಪಡೆ ನಿರ್ಮಿಸಿ, ಮೋದಿ ಸಾಧನೆಗಳನ್ನು ಮನೆಮನೆಗೂ ತಲುಪಿಸಿ ಎಂದು ವಿಧಾನಪರಿಷತ್ ಸದಸ್ಯ ಗಣೇಶ ಕಾರ್ಣಿಕ್ ಕರೆ ನೀಡಿದರು.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪಕ್ಷದ ಸಂಸ್ಥಾಪನಾ ದಿನಾಚರಣೆ, ಶ್ಯಾಂಪ್ರಕಾಶ್ ಮುಖರ್ಜಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿಗೆ ಕಾರ್ಯಕರ್ತರೇ ಬಲ, ಅವರಿಂದಲೇ ಪಕ್ಷ ಇಷ್ಟೊಂದು ದೊಡ್ಡಮಟ್ಟದಲ್ಲಿ ಬೆಳೆದಿದೆ ಎಂದ ಅವರು, ನರೇಂದ್ರಮೋದಿ ಅವರು ದೇಶದಲ್ಲಿ ಕೈಗೊಂಡಿರುವ ಜನಸ್ನೇಹಿ ಕಾರ್ಯಕ್ರಮಗಳು ಹಿಂದಿನ ಯಾವುದೇ ಸರ್ಕಾರದಲ್ಲೂ ಮೂಡಿ ಬಂದಿಲ್ಲ ಅವುಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಕಿವಿಮಾತು ಹೇಳಿದರು.
ಬಿಜೆಪಿ ಎಂದರೆ ರಾಷ್ಟ್ರಭಕ್ತಿ, ಶಿಸ್ತು, ಸಂಯಮ ಇರುವ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಹಾಗೂ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಪಕ್ಷವೆಂಬ ಹೆಗ್ಗಳಿಕೆ ಇದೆ ಎಂದ ಅವರು, ಇಂತಹ ಪಕ್ಷ ಕಟ್ಟುವುದರ ಹಿಂದೆ ಅಪಾರ ಸಂಖ್ಯೆಯ ನಾಯಕರು,ಕಾರ್ಯಕರ್ತರ ಪರಿಶ್ರಮವಿದೆ ಎಂದು ತಿಳಿಸಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಜನವಿರೋಧಿ ನೀತಿಗಳಿಂದ ಜನತೆ ತತ್ತರಿಸಿ ಹೋಗಿದ್ದಾರೆ, ಕಾಂಗ್ರೆಸ್‌ನ ಗ್ಯಾರೆಂಟಿಗಳು ಜನರ ಜೀವನಕ್ಕೆ ಹೊರೆಯಾಗಿದ್ದು, ಇದರ ಕುರಿತು ಸಾಮಾನ್ಯ ಜನತೆಗೆ ಅರಿವು ಮೂಡಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಬಿಜೆಪಿ ೧೦೦ ವರ್ಷಗಳ ಆಚರಣೆ ಸಂದರ್ಭದಲ್ಲಿ ನನಗೆ ಅಧಿಕಾರ ಸಿಕ್ಕಿದೆ, ಜಿಲ್ಲೆಯಲ್ಲಿ ಪಕ್ಷವನ್ನು ಅತ್ಯಂತ ಪ್ರಾಮಾಣಿಕವಾಗಿ ಕಟ್ಟುವ ಕೆಲಸ ಮಾಡುವೆ ಎಂದು ತಿಳಿಸಿದರು.
ಸಭೆಗೂ ಮುನ್ನ ಪಕ್ಷದ ಸಂಸ್ಥಾಪಕರಾದ ಶ್ಯಾಂಪ್ರಕಾಶ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ವಿರೋಧಪಕ್ಷದ ಮಾಜಿ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ವೈ.ಸಂಪಂಗಿ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್, ಅಪ್ಪಿರಾಜು, ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಮತಮ್ಮ, ಮುಖಂಡರಾದ ವಿಜಯಕುಮಾರ್, ತಿಮ್ಮರಾಯಪ್ಪ, ರಾಜೇಶ್‌ಸಿಂಗ್ ಸೇರಿದಂತೆ ವಿವಿಧಮೋರ್ಚಾಗಳ ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು.