
ಕಲಬುರಗಿ:ನಗರದ ಹೊರ ವಲಯದಲ್ಲಿರುವ ಹಜರತ್ ಸೈಯ್ಯದ್ ರುಕ್ಮುದ್ದೀನ್ ತೋಲಾ ಹತ್ತಿರ ಶಾದಿ ಮಹಲ್ ನಿರ್ಮಾಣಕ್ಕಾಗಿ 200 ಲಕ್ಷ ರು ಮೊತ್ತದ ಯೋಜನೆಗೆ ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಂಪ್ರಭು ಪಾಟೀಲರು ಭಾನುವಾರ ಅಡಿಗಲ್ಲಿಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಮೂಲ ಸೌಕರ್ಯ ಎಲ್ಲರಿಗೂ ಒದಗಿಸುವುದು ಸರ್ಕಾರದ ಸಂಕಲ್ಪವೆಂದರು. 2025- 26 ನೇ ಸಾಲಿನಲ್ಲಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.
ರುಕ್ಮುದ್ದೀನ್ ತೋಲಾ ಸಾಮರಸ್ಯದ ಸಂಕೇತವಾಗಿದೆ. ಹಿಂದು- ಮುಸ್ಲಿಂ ಸಮುದಾಯದ ಎಲ್ಲರೂ ಇಲ್ಲಿ ಪೂಜಿಸುತ್ತಾರೆ. ಹಿಂದೂಗಳೇ ಹೆಚ್ಚಾಗಿ ಈ ದರ್ಗಾಕ್ಕೆ ಸೇವೆ, ಪೂಜೆ ಸಲ್ಲಿಸುತ್ತಾರೆ. ಇದು ನಗರದ ಸಾಮರಸ್ಯದ ಸಂಕೇತವೆಂದು ಶಾಸಕರು ಹೇಳಿದರು.
ಚುನಾವಣೆಯಲ್ಲಿ ತಾವು ಇಲ್ಲಿ ಶಾದಿ ಮಹಲ್ ನಿರ್ಮಿಸುವ ಭರವಸೆ ನೀಡಿದ್ದೆ, ಅದರಂತೆಯೇ ನಡೆದುಕೊಳ್ಳುತ್ತಿರುವೆ ಎಂದರು. ಧರಂಸಿಂಗ್ ಸಾಹೇಬರು ಹಾಗೂ ತಾವು ಇಲ್ಲಿಗೆ ಬಂದು ಸೇವೆ ಸಲ್ಲಿಸಿದ ಸ್ಮರಣೆ ಮಾಡಿದ ಶಾಸಕರು ರುಕ್ಮುದ್ದೀನ್ ತೋಲಾ ಮೂಲ ಸವಲತ್ತಿಗೆ ಹೆಚ್ಚಿನ ಅನುದಾನ ನೀಡಲು ಬದ್ಧನೆಂದರು.
ರಾಣೇಶಪೀರ್ ದರ್ಗಾದ ಅನ್ವರ್ ಹುಸೇನ್ ಸಾಬ್, ಎಂಎಲ್‍ಸಿ ತಿಪ್ಪಣ್ಣ ಕಮಕನೂರ್, ಮುಖಂಡರಾದ ಇಳಿಯಾಸ್ ಸೇಠ್ ಭಾಗವಾನ್, ಪಾಲಿಕೆ ಸದಸ್ಯ ಅಲಮ್ ಪಟೇಲ್, ಸಂತೋಷ ಪಾಟೀಲ್ ದಣ್ಣೂರ, ಲಿಂಗರಾಜ, ಇರಫಾನ್ ಪಟೇಲ್, ಚಂದ್ರುಗೌಡ, ರವಿ ಪಾಟೀಲ್, ಎಪಿಎಂಸಿ ಸದಸ್ಯ ವೀರಣ್ಣ ಭಂಗೂರ್, ಲಾಡ್ಲೇಸಾಬ್, ಗಂಗಾಧರ, ಅಜೀಜ್ ಮಿಯಾ, ರಪೀಕ್ ಸೇರಿದಂತೆ ಅನೇಕರಿದ್ದರು.































