
ಯಾದಗಿರಿ :ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಪೆಟ್ರೋಲ್ ಮತ್ತು ಡೀಸೆಲ್ ತೀವ್ರ ಕೊರತೆ ಉಂಟಾಗಿರುವ ಹಿನ್ನೆಲೆ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದ ಪ್ರಮುಖ ಪೆಟ್ರೋಲ್ ಬಂಕ್‌ಗಳಾದ ಮುದ್ನಾಳ ಪೆಟ್ರೋಲ್ ಪಂಪ್ ಹಾಗೂ ಶುಭಂ ಪೆಟ್ರೋಲ್ ಪಂಪ್ ಸೇರಿದಂತೆ ಬಹುತೇಕ ಇಂಧನ ಕೇಂದ್ರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಭಾವ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಬೆಳ್ಳಂ ಬೆಳಗ್ಗೆಯಿಂದಲೇ ನಗರದ ಹೊರವಲಯದ ಹೊಸಳ್ಳಿ ಸಮೀಪ ಇರುವ ಪ್ರತೀಕ ಪೆಟ್ರೋಲ್ ಪಂಪ್‌ನಲ್ಲಿ ವಾಹನಗಳ ಉದ್ದ ಸಾಲು ಕಂಡುಬAದಿತು. ಬೈಕ್, ಕಾರು, ಆಟೋ ಹಾಗೂ ಸರಕು ಸಾಗಣೆ ವಾಹನಗಳು ಇಂಧನಕ್ಕಾಗಿ ಗಂಟೆಗಳ ಕಾಲ ಕಾಯುತ್ತಿರುವ ದೃಶ್ಯಗಳು ಸಾರ್ವಜನಿಕರ ಗಮನ ಸೆಳೆದವು.
ಇಂಧನ ಕೊರತೆಯಿಂದ ದಿನನಿತ್ಯ ಕೆಲಸಗಳಿಗೆ ತೆರಳುವ ನೌಕರರು, ವಿದ್ಯಾರ್ಥಿಗಳು, ರೈತರು ಹಾಗೂ ವ್ಯಾಪಾರಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಲ ಪೆಟ್ರೋಲ್ ಬಂಕ್‌ಗಳಲ್ಲಿ ಮಿತ ಪ್ರಮಾಣದಲ್ಲಿ ಮಾತ್ರ ಇಂಧನ ವಿತರಣೆ ನಡೆಯುತ್ತಿದ್ದು, ಕೆಲವೆಡೆ “ಸ್ಟಾಕ್ ಇಲ್ಲ” ಎಂಬ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ಸಾಗಣೆ ವಿಳಂಬ ಹಾಗೂ ಪೂರೈಕೆ ಸಮಸ್ಯೆಯಿಂದ ತಾತ್ಕಾಲಿಕವಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದ್ದು, ಶೀಘ್ರದಲ್ಲೇ ಇಂಧನ ಸರಬರಾಜು ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಸಂಬAಧಪಟ್ಟ ಮೂಲಗಳು ತಿಳಿಸಿವೆ.

























