
ಬೀದರ್, ಜೂ ೩೦: ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳನ್ನು ತಕ್ಷಣವೇ ಬರಪೀಡಿತ ಪ್ರದೇಶಗಳೆಂದು ಘೋಷಿಸಿ, ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಎಕರೆಗೆ ?೨೫ ಸಾವಿರ ಪರಿಹಾರ ನೀಡಬೇಕೆಂದು ವೀರ ಕನ್ನಡಿಗರ ಸೇನೆ ಆಗ್ರಹಿಸಿದೆ.
ಸೋಮವಾರ ಬೀದರ್ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರದಲ್ಲಿ, ಮಳೆ ಕೊರತೆಯಿಂದ ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದಾಗಿ ತಿಳಿಸಲಾಗಿದೆ.
ಜೂನ್ ತಿಂಗಳಲ್ಲಿ ನಿರೀಕ್ಷಿತ ಮಳೆಯಾಗದ ಪರಿಣಾಮ ಶೇ.೮೦ರಷ್ಟು ಪ್ರದೇಶಗಳಲ್ಲಿ ಬಿತ್ತನೆ ಮಾಡಲಾಗಿದ್ದ ತೊಗರಿ, ಸೊಯಾಬೀನ್, ಉದ್ದು ಹಾಗೂ ಹೆಸರು ಬೆಳೆಗಳು ಮೊಳಕೆಯೊಡೆಯದೇ ಸಂಪೂರ್ಣ ನಾಶವಾಗಿವೆ ಎಂದು ಸಂಘಟನೆ ತಿಳಿಸಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.೬೦ರಷ್ಟು ಕೆರೆ ಮತ್ತು ಕಟ್ಟೆಗಳು ಒಣಗಿದ್ದು, ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಬೆಳೆ ನಷ್ಟ ಮತ್ತು ಸಾಲದ ಬಾಧೆಯಿಂದ ರೈತರು, ಕೃಷಿ ಕಾರ್ಮಿಕರು ಹಾಗೂ ಅವರ ಕುಟುಂಬಗಳು ಉದ್ಯೋಗಕ್ಕಾಗಿ ಪಟ್ಟಣಗಳು ಮತ್ತು ಇತರ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ರೈತರು ಪ್ರತಿ ಎಕರೆಗೆ ?೧೫ ಸಾವಿರದಿಂದ ?೨೦ ಸಾವಿರದವರೆಗೆ ಬಿತ್ತನೆ ಮತ್ತು ಗೊಬ್ಬರ ಸೇರಿದಂತೆ ವಿವಿಧ ಖರ್ಚುಗಳನ್ನು ಮಾಡಿದ್ದು, ಬಂಡವಾಳದ ಕೊರತೆಯಿಂದ ಸಾಲ ಮಾಡಿ ಕೃಷಿ ನಡೆಸುತ್ತಿದ್ದಾರೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅನಾಹುತಗಳು ಸಂಭವಿಸುವ ಆತಂಕವಿದೆ ಎಂದು ಸಂಘಟನೆ ತಿಳಿಸಿದೆ.
ವೀರ ಕನ್ನಡಿಗರ ಸೇನೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವುದು, ಪ್ರತಿ ಎಕರೆಗೆ ?೨೫ ಸಾವಿರ ಪರಿಹಾರವನ್ನು ನೇರ ನಗದು ವರ್ಗಾವಣೆಯ ಮೂಲಕ ಬಿಡುಗಡೆ ಮಾಡುವುದು, ರೈತರ ಬೆಳೆ ಹಾಗೂ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ಹೊಸ ಸಾಲ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ.
ಜೊತೆಗೆ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕುಡಿಯುವ ನೀರು, ಮೇವಿನ ಬ್ಯಾಂಕ್ ವ್ಯವಸ್ಥೆ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ೧೫೦ ದಿನಗಳ ಉದ್ಯೋಗವನ್ನು ತಕ್ಷಣ ಜಾರಿಗೊಳಿಸಬೇಕು ಮತ್ತು ಬೆಳೆ ವಿಮೆ ಪರಿಹಾರ ಪ್ರಕ್ರಿಯೆಯನ್ನು ಸರಳೀಕರಿಸಿ ೩೦ ದಿನಗಳೊಳಗೆ ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಲಾಗಿದೆ.
ಒಂದು ವೇಳೆ ೧೫ ದಿನಗಳೊಳಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ವೀರ ಕನ್ನಡಿಗರ ಸೇನೆಯ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಸೇನೆಯ ರಾಜ್ಯ ಸಂಚಾಲಕ ಡಾ. ಸುಬ್ಬಣ್ಣ ಕರಕನಳ್ಳಿ, ಜಿಲ್ಲಾ ಗೌರವಾಧ್ಯಕ್ಷ ಈಶ್ವರ ಬಡಿಗೇರ, ಜಿಲ್ಲಾಧ್ಯಕ್ಷ ಅಮರ ಪೂಜಾರಿ, ಜಿಲ್ಲಾ ಸಂಚಾಲಕ ಅಂಬಾದಾಸ್ ಸೈನೆ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಜಡಗೆ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಗೋವಿಂದ ಪೂಜಾರಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮೋಹಿನ್ ಮಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬುರಾವ ಕೆ. ಬಿಟ್ಟೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಶಿಧರ ಜ್ಯೋತಿ, ತಾಲೂಕು ಅಧ್ಯಕ್ಷ ಗೌಸೋದ್ದೀನ್ ಯಾಕತಪುರ, ನಗರಾಧ್ಯಕ್ಷ ಪ್ರಶಾಂತ ಹುವಗಾರ, ತಾಲೂಕು ಕಾರ್ಯದರ್ಶಿ ಜುಬೇರ್ ಪಾಶಾ, ಜಿಲ್ಲಾ ಖಜಾಂಚಿ ಕಲ್ಲಪ್ಪ ಚಾಂಬೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.































