ವೃತ್ತಿಯಾಚೆಗಿನ ಸೇವೆಯೆ ಪ್ರಶಸ್ತಿಗೆ ಮಾನದಂಡ: ಡಾ.ಗವಿಮಠ

ಸಂಜೆ ವಾಣಿ ವಾರ್ತೆ
ಜಮಖಂಡಿ:ಅ.೧೯: ವೃತ್ತಿಯಾಚೆ ಹೆಚ್ಚುವರಿಯಾಗಿ ಸಲ್ಲಿಸಿದ ಸಮಾಜಸೇವೆಯೆ ತಮ್ಮನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ಮಾನದಂಡ ಆಗಿತ್ತು. ವೃತ್ತಿಯ ಆಚೆ ಮಾಡುವ ಸೇವೆಯನ್ನು ಸಮಾಜ ನೋಡುತ್ತಿರುತ್ತದೆ. ಆದಾಗ್ಯೂ, ಆತ್ಮತೃಪ್ತಿಗಾಗಿ ಸೇವೆ ಮಾಡಬೇಕು ಎಂದು ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಲಿಂಗಾನAದ ಗವಿಮಠ ಹೇಳಿದರು.
ಕರ್ನಾಟಕ ಸರ್ಕಾರ ಕೊಡಮಾಡಿದ ರಾಜ್ಯ ಮಟ್ಟದ ಶ್ರೇಷ್ಠ ಉಪನ್ಯಾಸಕ ಪ್ರಶಸ್ತಿಗೆ ಭಾಜನರಾದ ಪ್ರಯುಕ್ತ ರೋಟರಿ ಸಂಸ್ಥೆ ಇಲ್ಲಿನ ವಿಜಯಪುರ ರಸ್ತೆ ಪಕ್ಕದ ರೋಟರಿ ಭವನದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ವಾರದ ಸಭೆಯಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಕೋ ಕ್ಲಬ್ ಮೂಲಕ ಪರಿಸರ ಸಂರಕ್ಷಣೆ ಜಾಗೃತಿ ಅಭಿಯಾನ, ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದು, ಇಂಟ್ರ‍್ಯಾಕ್ಟ್ ಸಂಸ್ಥೆಯ ಅಡಿಯಲ್ಲಿ ಕೈಗೊಂಡ ಪಲ್ಸ್ ಪೋಲಿಯೋ ಜಾಗೃತಿ ಅಭಿಯಾನ, ಸಾರ್ವಜನಿಕರಿಂದ ಪೋಲಿಯೋ ಸಹಾಯಧನ ಸಂಗ್ರಹ, ಲಾತೂರ ಭೂಕಂಪ ಸಂತ್ರಸ್ತರಿಗಾಗಿ ಸಹಾಯಧನ ಸಂಗ್ರಹ ಸೇರಿದಂತೆ ಬಿಡುವಿನ ವೇಳೆಯಲ್ಲಿ ಸಲ್ಲಿಸಿದ ಇತರ ಸಮಾಜಸೇವೆಗಳನ್ನು ಪರಿಗಣಿಸಿ ತಮಗೆ ಪ್ರಶಸ್ತಿ ಬಂದಿದೆ ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಕೋವಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೋಟರಿ ಫೌಂಡೇಷನ್‌ಗೆ ವೈಯಕ್ತಿಕವಾಗಿ ದೇಣಿಗೆ ನೀಡಿದ ಪ್ರಯುಕ್ತ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆ ಕೊಡಮಾಡಿದ ಪಾಲ್ ಹ್ಯಾರೀಸ್ ಫೆಲೋ(ಪಿಎಚ್‌ಎಫ್)ಗೆ ಭಾಜನರಾದ ಸುಮಾರು ೧೫ ಜನ ರೋಟರಿ ಸದಸ್ಯರಿಗೆ ರೋಟರಿ ಪಿನ್ ವಿತರಿಸಲಾಯಿತು.
ಪ್ರಶಾಂತ ಗಾತಾಡೆ ರೋಟರಿ ಸಂಸ್ಥೆಯ ‘ದಿ ಫೋರ್ ವೇ ಟೆಸ್ಟ್’ ಓದಿದರು. ಕೃಷಿ ಅಧಿಕಾರಿ ಮಲ್ಲಪ್ಪ ಬುಜರುಕ ಅತಿಥಿಗಳನ್ನು ಪರಿಚಯಿಸಿದರು. ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಕಿರಣ ದೇಸಾಯಿ ನಿರೂಪಿಸಿದರು. ಕಾರ್ಯದರ್ಶಿ ಎಂ.ಎಚ್. ಕಡ್ಲಿಮಟ್ಟಿ ವಂದಿಸಿದರು.