
ಮಧುಗಿರಿ, ಜೂ. ೧- ತಾಲ್ಲೂಕಿನಾಧ್ಯಂತ ಪಡಿತರ ಅಂಗಡಿಗಳಲ್ಲಿ ಕಳೆದ ಹಲವು ದಿನಗಳಿಂದ ಸರ್ವರ್ ಸಮಸ್ಯೆ ಉಂಟಾಗಿ ಫಲಾನುಭವಿಗಳು ಅಕ್ಕಿ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಫಲಾನುಭವಿಗಳಿಗೆ ಪಡಿತರ ಕೈತಪ್ಪುವ ಆತಂಕ ಎದುರಾಗಿದೆ.
ಈ ಬಾರಿ ಕೇಂದ್ರ ಸರ್ಕಾರ ಮೇ ಹಾಗೂ ಜೂನ್ ತಿಂಗಳ ಪಡಿತರವನ್ನು ಒಟ್ಟಿಗೆ ವಿತರಿಸುತ್ತಿರುವುದರಿಂದ ಫಲಾನುಭವಿಗಳು ಎರಡು ಬಾರಿ ಬೆರಳಚ್ಚು ನೀಡಬೇಕಾಗಿದೆ. ಒಂದು ತಿಂಗಳ ಬೆರಳಚ್ಚು ಸ್ವೀಕರಿಸಿದರೂ ಮತ್ತೊಂದು ತಿಂಗಳ ಪಡಿತರಕ್ಕೆ ಸರ್ವರ್ ಸ್ಪಂದಿಸದೆ ವಿತರಣೆ ವಿಳಂಬವಾಗುತ್ತಿದೆ. ಒಬ್ಬ ಫಲಾನುಭವಿಗೆ ಪಡಿತರ ವಿತರಿಸಲು ಕನಿಷ್ಠ ಅರ್ಧ ಗಂಟೆಯಿಂದ ಒಂದು ಗಂಟೆ ಸಮಯ ಹಿಡಿಯುತ್ತಿದೆ.
ಕೆಲವು ದಿನಗಳಲ್ಲಿ ಬೆಳಗ್ಗೆಯೇ ಸರ್ವರ್ ಕಾರ್ಯನಿರ್ವಹಿಸದೆ ಪಡಿತರ ವಿತರಣೆ ಸ್ಥಗಿತಗೊಳ್ಳುತ್ತಿದೆ. ಹಲವು ಕೇಂದ್ರಗಳಲ್ಲಿ ಬೆಳಿಗ್ಗೆ ೭ರಿಂದ ರಾತ್ರಿ ೭ ಗಂಟೆವರೆಗೆ ಕಾರ್ಯನಿರ್ವಹಿಸಿದರೂ ಪಡಿತರ ವಿತರಣೆ ಸಾಧ್ಯವಾಗುತ್ತಿಲ್ಲ. ಹಿಂದೆ ಮೊಬೈಲ್ ಒಟಿಪಿ ಮೂಲಕ ಪಡಿತರ ವಿತರಿಸುವ ವ್ಯವಸ್ಥೆ ಇದ್ದು, ಇದರಿಂದ ತ್ವರಿತ ಸೇವೆ ಸಾಧ್ಯವಾಗುತ್ತಿತ್ತು. ಆದರೆ ಈಗ ಬೆರಳಚ್ಚು ಕಡ್ಡಾಯವಾಗಿರುವುದರಿಂದ ಸರ್ವರ್ ಸಮಸ್ಯೆ ಹೆಚ್ಚಾಗಿ ಪರಿಣಾಮ ಬೀರುತ್ತಿದೆ. ಮೊಬೈಲ್ ಹಾಟ್‌ಸ್ಪಾಟ್ ಬಳಕೆಗೆ ಅನುಮತಿ ಇಲ್ಲದ ಕಾರಣ ಡಾಂಗಲ್, ಜಿಯೋ ಹಾಗೂ ಏರ್‌ಟೆಲ್ ಕೇಬಲ್ ಸಂಪರ್ಕ ಬಳಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಪಡಿತರ ಕೇಂದ್ರದ ವಿತರಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಾಲ್ಕೈದು ದಿನಗಳಿಂದ ಕೂಲಿ ಕೆಲಸ ಬಿಟ್ಟು ಪಡಿತರ ಪಡೆಯಲು ಬರುತ್ತಿದ್ದೇವೆ. ಸರ್ವರ್ ಸಮಸ್ಯೆಯಿಂದ ಅಕ್ಕಿ ಸಿಗುತ್ತಿಲ್ಲ. ನಷ್ಟವಾಗುತ್ತಿರುವ ಕೂಲಿಯನ್ನು ಯಾರು ಭರಿಸುತ್ತಾರೆ ಎಂದು ದೊಡ್ಡಕ್ಕ ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗ್ಗೆ ೧೦ ಗಂಟೆಯಿಂದ ಪಡಿತರಕ್ಕಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದೇವೆ. ರಾತ್ರಿ ೭ ಗಂಟೆಯಾದರೂ ಪಡಿತರ ಸಿಕ್ಕಿಲ್ಲ. ಮನೆಯಲ್ಲಿ ಸಣ್ಣ ಮಕ್ಕಳನ್ನು ಬಿಟ್ಟು ಬಂದಿದ್ದು, ಆಗೊಮ್ಮೆ, ಈಗೊಮ್ಮೆ ಸರ್ವರ್ ಬಂದಂತೆ ಬಂದು ಮತ್ತೆ ಹೋಗುತ್ತಿದೆ. ಈಗ ಜೋರು ಮಳೆ ಪ್ರಾರಂಭವಾಗಿದ್ದು, ಮಳೆಯಲ್ಲೂ ಪಡಿತರ ಪಡೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎರಡು ತಿಂಗಳ ಪಡಿತರ ಒಟ್ಟಿಗೆ ವಿತರಿಸಬೇಕಾದ ಕಾರಣ ಮೇ ೧೦ರಿಂದಲೇ ವಿತರಣೆ ಆರಂಭಿಸಲಾಗಿದೆ. ತಾಲ್ಲೂಕಿನಲ್ಲಿ ಇದುವರೆಗೆ ಶೇ ೮೨ ರಷ್ಟು ವಿತರಣೆ ಪೂರ್ಣಗೊಂಡಿದ್ದು, ಉಳಿದ ಶೇ ೧೮ ರಷ್ಟು ವಿತರಣೆ ಸರ್ವರ್ ಸಮಸ್ಯೆಯಿಂದ ಬಾಕಿಯಾಗಿದೆ ಎಂದು ಆಹಾರ ನಿರೀಕ್ಷಕ ನಸ್ರುದ್ದೀನ್ ತಿಳಿಸಿದ್ದಾರೆ.

























