ಮಹಿಳಾ ಸಂವೇದನೆಯ ಚಿತ್ರಕಿ ಎಂ.ಕೆ.ಇಂದಿರಾ

ಕಲಬುರಗಿ :ಜ.5: ಎಂ.ಕೆ.ಇಂದಿರಾ ಅವರು 50ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಅವರ ಕಾದಂಬರಿಗಳು ಹೆಚ್ಚಾಗಿ ಮಲೆನಾಡು ಪ್ರದೇಶದ ಜೀವನ ಮತ್ತು ಮಹಿಳೆಯರ ಸಂವೇದನೆಗಳನ್ನು, ಚಿತ್ರಿಸುತ್ತವೆ. ಪ್ರಸಿದ್ಧ ಕಾದಂಬರಿ ‘ಫಣಿಯಮ್ಮ’ವು ಬಾಲ್ಯ ವಿಧವೆಯೊಬ್ಬಳ ಜೀವನದ ನೈಜ ಕಥೆಯನ್ನು ಆಧರಿಸಿದ್ದು, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ‘ಶಿವಾ ವಿದ್ಯಾ ಮಂದಿರ ಮತ್ತು ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ಎಂ.ಕೆ.ಇಂದಿರಾ ಅವರ ಜನುಮ ದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು. ‘ಗೆಜ್ಜೆ, ಪೂಜೆ’ ಮತ್ತೊಂದು ಪ್ರಸಿದ್ಧ ಕಾದಂಬರಿ, ಯಶಸ್ವಿ ಚಲನಚಿತ್ರವಾಗಿದೆ. ಕೇವಲ ಎರಡನೇ ತರಗತಿಯವರೆಗೆ ಓದಿರುವ ಇಂದಿರಾ ಅವರು ಸಾಹಿತ್ಯ ಲೋಕದ ವಿಸ್ಮಯವಾಗಿದ್ದಾರೆ. ಇಂತಹ ಸಾಹಿತಿಗಳು, ಮಹನೀಯರ ಬಗ್ಗೆ ಅಧ್ಯಯನ ಮಾಡಿ, ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್. ಬಿರಾದಾರ, ಮುಖ್ಯ ಶಿಕ್ಷಕಿ ಸಾಲಿ ಸಂಗೀತಾ ಹಾಗೂ ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು.