
ಸೈದಾಪುರ:ಜೂ.23:ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡುವುದಲ್ಲದೆ ಅವರನ್ನು ಪ್ರತಿನಿತ್ಯ ತರಗತಿಗಳಿಗೆ ಕಳುಹಿಸಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಮರಿಲಿಂಗಪ್ಪ ಕಾವಲಿ ಮನವಿ ಮಾಡಿದರು.
ಸಮೀಪದ ಬದ್ದೇಪಲ್ಲಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಹಾಗೂ ಕಲಿಕಾ ಟಾಟಾಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಗ್ಗೆ ಹಮ್ಮಿಕೊಂಡಿದ್ದ ದಾಖಲಾತಿ ಹಾಗೂ ಹಾಜರಾತಿ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಸರಕಾರಿ ಶಾಲೆಯಲ್ಲಿ ಕನ್ನಡ ಮತ್ತುಆಂಗ್ಲ ಮಾಧ್ಯಮದ ಜೊತೆಗೆ ಎಲ್‍ಕೆಜಿ ಮತ್ತು ಯಕೆಜಿಯನ್ನು ಸಹ ಪ್ರಾರಂಭ ಮಾಡಿದ್ದು ಪ್ರತಿಯೊಬ್ಬರೂ ಅದರ ಲಾಭ ಪಡೆದುಕೊಳ್ಳಬೇಕು. ಮಗುವಿನ ವಯೋಮಿತಿ 4 ವರ್ಷ ಅದಲ್ಲಿ ಎಲ್‍ಕೆಜಿ ಮತ್ತು ಕನಿಷ್ಠ 5 ವರ್ಷ 5 ತಿಂಗಳು ಆದರೆ ಒಂದನೇ ತರಗತಿಗೆ ನೋಂದಣಿ ಮಾಡಬಹುದು ಎಂದು ತಿಳಿಸಿದರು.
ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಶಿಕ್ಷಣ ಮಾತ್ರವಲ್ಲದೆ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ತತ್ತಿ, ಬಾಳೆಹಣ್ಣು ಎಲ್ಲ ರೀತಿಯ ಸವಲತ್ತುಗಳನ್ನು ನೀಡುತ್ತಿದೆ. ಶಿಕ್ಷಕರ ಕೊರತೆಯನ್ನು ಸರಿದೂಗಿಸಲು ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ್ದು ಬೋಧನೆಗೆ ಅನುಕೂಲ ಮಾಡಿಕೊಡಲಾಗಿದೆ. ಇದಕ್ಕಾಗಿ ಪಾಲಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ಮನೆ ಹೊಲಗದ್ದೆಗಳ ಕೆಲಸಕ್ಕೆ ಬಳಸದೆ ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಅಕ್ಷರ ಕಲಿತ ಮಗು ತನ್ನ ಕುಟುಂಬ, ಗ್ರಾಮ ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆಯಬಹುದಾಗಿದೆ ಎಂದರು.
ಬದ್ದೇಪಲ್ಲಿ ಗ್ರಾಮದ ವೆಂಕಟೇಶ ಕಾವಲಿ ಅವರು ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡಿದರು. ಇದಕ್ಕೂ ಮುನ್ನ ಮಕ್ಕಳು ವಿವಿಧಗ್ರಾಮದಲ್ಲಿ ಪ್ರಭಾತಪೇರಿ ನಡೆಸಿ, ಜಾಗೃತಿ ಮೂಡಿಸಲಾಯಿತು.
ಈ ವೇಳೆ ಕಡೇಚೂರು ಕ್ಲಸ್ಟರ್ ಸಿಆರ್ ಪಿ ಸುಬ್ರಮಣಿ, ಮುಖ್ಯಗುರು ಮಹದೇವಯ್ಯ, ಗ್ರಾಮದ ಮುಖಂಡರಾದ ನರಸೇಗೌಡ ಕಲಾಲ್, ಕಲಿಕಾ ಟಾಟಾಟ್ರಸ್ಟ್‍ನ ಸಂಯೋಜಕರು ಶರಣು ನಾಡಗೌಡ ಡಿ. ಅಂಜನಕುಮಾರ, ಅನಿಲಕುಮಾರ ಕಾವಲಿ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.