Home ಜಿಲ್ಲೆ ಕಲಬುರಗಿ ಸ್ವಾರ್ಥವೇ ದುಃಖಕ್ಕೆ ಮೂಲ, ದಾಸೋಹವೇ ಪರಮ ಧರ್ಮ: ಪೂಜ್ಯ ಚನ್ನಮಲ್ಲ ಸ್ವಾಮೀಜಿ

ಸ್ವಾರ್ಥವೇ ದುಃಖಕ್ಕೆ ಮೂಲ, ದಾಸೋಹವೇ ಪರಮ ಧರ್ಮ: ಪೂಜ್ಯ ಚನ್ನಮಲ್ಲ ಸ್ವಾಮೀಜಿ

ಕಲಬುರಗಿ ಅ.17 :”ಎಲ್ಲವೂ ನನಗಾಗಿಯೇ ಇರಬೇಕು ಎನ್ನುವ ಸ್ವಾರ್ಥವೇ ಮನುಷ್ಯನ ದುಃಖಕ್ಕೆ ಮೂಲ ಕಾರಣ, ಇದ್ದದ್ದೆಲ್ಲವೂ ಎಲ್ಲರಿಗಾಗಿ ಎನ್ನುವ ತ್ಯಾಗಭಾವವೇ ನಿಜವಾದ ಪರಮಾರ್ಥ” ಎಂದು ಶ್ರೀ ಚನ್ನಮಲ್ಲ ಸ್ವಾಮೀಜಿಯವರು ಮಾರ್ಮಿಕವಾಗಿ ನುಡಿದರು.
ಅವರು ನಗರದ ಅಡ್ವೊಕೇಟ್ಸ್ ಕಾಲೋನಿಯಲ್ಲಿರುವ ನೂತನ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ನ ವತಿಯಿಂದ ಆಯೋಜಿಸ ಲಾಗಿರುವ ಶ್ರೀ ದಾನಮ್ಮ ದೇವಿಯ (ಲಿಂಗಮ್ಮನ) ಜೀವನ ದರ್ಶನ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ನೆರೆದಿದ್ದ ಅಪಾರ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು.

    ಭಗವಂತನಾದ ಗುರು ಗುಹೇಶ್ವರ ಲಿಂಗ ಹಾಗೂ ಕಲ್ಯಾಣದ ಶರಣರನ್ನು ಸ್ಮರಿಸುತ್ತಾ, ದಾನಮ್ಮ ದೇವಿಯ ಬಾಲ್ಯದ ವೈರಾಗ್ಯವನ್ನು ಅವರು ಬಿಚ್ಚಿಟ್ಟರು. ಕೇವಲ ಹದಿನಾಲ್ಕು-ಹದಿನೈದು ವರ್ಷದ ಹದಿ ಹರೆಯದಲ್ಲಿದ್ದ ಲಿಂಗಮ್ಮನಿಗೆ ಮದುವೆಯ (ಕಲ್ಯಾಣದ) ಸಿದ್ಧತೆಗಳು ನಡೆಯುತ್ತಿದ್ದವು; ಆದರೆ, ಲೌಕಿಕ ಜೀವನದ ಆಕರ್ಷಣೆಗಳಿಂದ ಸಂಪೂರ್ಣವಾಗಿ ವಿಮುಖಳಾಗಿದ್ದ ಆಕೆ, ಶರಣರ ಸಾಂಗತ್ಯದಲ್ಲೇ ಬದುಕುವ ದೃಢ ನಿರ್ಧಾರ ಮಾಡಿದ್ದಳು ಎಂದು ಸ್ವಾಮೀಜಿ ವಿವರಿಸಿದರು.

‘ಬೇಕು’ ಎನ್ನುವುದೇ ದುಃಖ, ‘ಸಾಕು’ ಎನ್ನುವುದೇ ಸುಖ:

 ಮನುಷ್ಯನ ಆಸೆಗಳಿಗೆ ಮಿತಿಯಿಲ್ಲ, ನೂರು ಇದ್ದರೆ ಸಾವಿರ ಬೇಕು ಎನ್ನುವ ದುರಾಸೆಯೇ ಮನುಷ್ಯನ ನೆಮ್ಮದಿ ಕೆಡಿಸುತ್ತಿದೆ; 'ಬೇಕು' ಎನ್ನುವುದು ದುಃಖವಾದರೆ, 'ಸಾಕು' ಎನ್ನುವ ತೃಪ್ತಿಯೇ ನಿಜವಾದ ಸುಖ ಎಂದು ಸ್ವಾಮೀಜಿಯವರು ಎಚ್ಚರಿಸಿದರು. ನಮ್ಮಿಂದ ಅನ್ಯರಿಗೆ ನೋವಾಗದಂತೆ, ಯಾರಿಂದಲೂ ಕಣ್ಣೀರು ಹಾಕಿಸದೆ ಬದುಕುವುದೇ ನಿಜವಾದ ಧರ್ಮ. ಕರುಣೆ, ಪ್ರೇಮ ಮತ್ತು ಹಸಿದವರಿಗೆ ಅನ್ನ ನೀಡುವ ದಾಸೋಹದ ಗುಣವೇ ಭಗವಂತನಿಗೆ ಅತ್ಯಂತ ಪ್ರಿಯವಾದದ್ದು ಎಂದು ಸಿದ್ದಯ್ಯ ಪುರಾಣಿಕರ ಹಾಗೂ ಬಸವಣ್ಣನವರ ವಚನಗಳ ಆಶಯವನ್ನು ವಿವರಿಸಿದರು. ಪ್ರಾಮಾಣಿಕ ಕಾಯಕದಿಂದ ಬಂದ ಸಂಪತ್ತಿನಲ್ಲಿ ದಾಸೋಹ ಮಾಡುವವರ ಮನೆ ಕೈಲಾಸವಾಗುತ್ತದೆ ಎಂದು ಅವರು ನುಡಿದರು.

ಸಾಧಕರಿಗೆ ಸನ್ಮಾನ

ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಮುಖಂಡರು, ಹಿರಿಯ ಉದ್ಯಮಿಗಳು, ವೈದ್ಯರು, ವಕೀಲರು ಹಾಗೂ ಮಾಧ್ಯಮ ಮಿತ್ರರನ್ನು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ವಿಶಾಲ್ ದರ್ಗಿ,
ಶ್ರೀ ಪ್ರಫುಲ್ಲ ನಮೋಶಿ, ಆಕಾಶವಾಣಿಯ ಡಾ. ಸದಾನಂದ ಪೆರ್ಲ, ವಕೀಲರಾದ ಶ್ರೀ ರಾಜಶೇಖರ್ ಡೋಣಗಾಂವ್, ವೈದ್ಯರಾದ ಡಾ. ಸಾಗರ್ ರಾಂಪುರೆ ,
ಉದ್ಯಮಿಗಳಾದ ಶ್ರೀ ಸಂಜೀವ್ ಗುಪ್ತಾ, ಶ್ರೀ ರವಿ ಮಾ ದಮಶೆಟ್ಟಿ, ಡಾ. ಆನಂದ್ ಶಾ ,
ಶ್ರೀ ರಾಮು ರಾಘೋಜಿ ಹಾಗೂ ಕುಮಾರಿ ಅನುಶ್ರೀ ಲಾಹೋಟಿ
ಅವರನ್ನು ಟ್ರಸ್ಟ್ ನ ಪದಾಧಿಕಾರಿಗಳು ಸನ್ಮಾನಿಸಿದರು.

  ಪೂಜ್ಯರ ಆಶಯದಂತೆ ಮಹಿಳೆಯರಿಗಾಗಿ ಜೂನಿಯರ್, ಸೀನಿಯರ್ ಎಂಬ ಎರಡು ವರ್ಗ ಗಳಲ್ಲಿ ರಂಗೋಲಿ ಸ್ಪರ್ಧೆ  ಆಯೋಜಿಸಿ, ವಿಜೇತರಾದ ಆರು ಮಹಿಳಾ ಸ್ಪರ್ಧಿಗಳಿಗೆ ಪೂಜ್ಯರ ಅಮೃತ ಹಸ್ತ ದಿಂದ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ  ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.  
   
    ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್ ಪಾಟೀಲ್      ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಾತನಾಡಿ, ಸಂಸ್ಕಾರ, ಸಂಸ್ಕøತಿಯ ಬಗ್ಗೆ ಕಾಳಜಿ ವಹಿಸಿರುವ ಟ್ರಸ್ಟಿನ ಸಾಮಾಜಿಕ ಕಳಕಳಿಯ ಬಗ್ಗೆ     ಪ್ರಶಂಸಿಸಿದರು.

     ಗಣಜಲ ಖೇಡದ ಶ್ರೀ ಜಗದ್ಗುರು ಮೌನೇಶ್ವರ ಸುಕ್ಷೇತ್ರದ ಪೂಜ್ಯ ಶ್ರೀ ನಾಗೇಶ ಮುತ್ಯಾ ಸ್ವಾಮೀಜಿ ಯವರು ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

  ಕಾರ್ಯದರ್ಶಿ   ಆರ್ ಜೆ ಭೂಸಾರೆಯವರು ಸ್ವಾಗತಿಸಿ ನಿರೂಪಿಸಿದರು. ಅಧ್ಯಕ್ಷರಾದ ಮಂಜುನಾಥ ಜೇವರ್ಗಿಯವರು ವಂದಿಸಿದರು. ಟ್ರಸ್ಟನ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ಭಕ್ತಾದಿಗಳು ಈ ಜ್ಞಾನ ದಾಸೋಹದಲ್ಲಿ ಪಾಲ್ಗೊಂಡು ಪುನೀತರಾದರು.