
ನವಲಗುಂದ,ಜ28 : ಅಧ್ಯಯನ ನಿರತರಾದಾಗ ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸ ಬಹಳ ಮುಖ್ಯ. ಛಲ ಹಾಗೂ ಬದ್ಧತೆಯಿಂದ ಓದಿದರೆ ಜೀವನದಲ್ಲಿ ಎಂತಹ ಮಹಾತ್ಕಾರ್ಯವನ್ನಾದರೂ ಸಾಧಿಸಬಹುದು ಎಂದು ಹೆಬ್ಬಾಳದ ಶ್ರೀಮತಿ ಗಂಗಮ್ಮ ದೇವರಡ್ಡಿ ಸರ್ಕಾರಿ ಪ.ಪೂ. ಕಾಲೇಜ ಉಪಾಧ್ಯಕ್ಷ ಬಸವರಡ್ಡಿ ದೇವರಡ್ಡಿ ಹೇಳಿದರು.
ಅವರು ತಾಲ್ಲೂಕಿನ ಹೆಬ್ಬಾಳದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಆಯೋಜಿಸಿದ್ದ `ಪರೀಕ್ಷಾ ಪೂರ್ವ ಸಿದ್ಧತೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ಅನ್ಯವಿಷಯಗಳತ್ತ ಗಮನಹರಿಸಬಾರದು. ಸಮಯ ಅಮೂಲ್ಯವಾದುದು ಅದರ ಸದ್ಬಳಕೆ ಮಾಡಿಕೊಂಡು ಓದಬೇಕು. ಓದಿನಲ್ಲಿ ಮೊದಲು ಬೇಕಾದುದು ಶ್ರದ್ಧೆ. ಶ್ರದ್ದೆಯಿಂದ ಓದುವಾಗ ನಕಾರಾತ್ಮಕ ಭಾವನೆ ಬರದಂತೆ ಓದಬೇಕು. ಧಾರವಾಡದ ಕ.ವಿ.ವ. ಸಂಘವು ಶಿಕ್ಷಣದಲ್ಲಿ ಗುಣಾತ್ಮಕತೆ ತರುವ ಈ ಪ್ರಯತ್ನ ಫಲ ನೀಡಲಿ ಎಂದು ಹೇಳಿದರು.
ಧಾರವಾಡ ಹೊಂಬೆಳಕು ಪ್ರತಿಷ್ಠಾನ ಅಧ್ಯಕ್ಷೆ ವೀಣಾ ಬಿರಾದಾರ ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ಉಪನ್ಯಾಸ ನೀಡಿದರು.ಪ್ರಾಚಾರ್ಯರಾದ ಚನ್ನಬಸಪ್ಪ ಪೂಜಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೀರಣ್ಣ ಒಡ್ಡೀನ, ಕರವೀರಪ್ರಭು ಕಪ್ಪಲಿ, ಈರಣ್ಣ ಹುಬ್ಬಳ್ಳಿ, ಶ್ರೀಕಾಂತ ಯಲಿಗಾರ, ಎಂ.ಜಿ ಸುಬೇದಾರ, ಸಿ. ಕೆ. ದೇಸಾಯಿ ಇತರರು ಇದ್ದರು.






















