04 ಹೊಸ ತಾಲ್ಲೂಕುಗಳಲ್ಲಿ ಸಾಂತ್ವನ ಕೇಂದ್ರಗಳ ಆಯ್ಕೆ ಸಮಿತಿ ಸಭೆ

ಕಲಬುರಗಿ: ಜ 15: ಜಿಲ್ಲಾಧಿಕಾರಿಗಳು ಕಲಬುರಗಿ ಅವರ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯ 04 ಹೊಸ ತಾಲ್ಲೂಕುಗಳಲ್ಲಿ ಸಾಂತ್ವನ ಕೇಂದ್ರಗಳ ಆಯ್ಕೆಗಾಗಿ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಹೊಸ ತಾಲ್ಲೂಕುಗಳಾದ ಕಮಲಾಪೂರ, ಕಾಳಗಿ, ಶಹಾಬಾದ ಹಾಗೂ ಯಡ್ರಾಮಿ ತಾಲ್ಲೂಕಿನಲ್ಲಿ ಸಾಂತ್ವನ ಕೇಂದ್ರ ಪ್ರಾರಂಭಿಸಲು ಸ್ವಯಂ ಸೇವಾ ಸಂಸ್ಥೆಗಳಿಂದ ದಿನಾಂಕ:10-09-2024ರಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅಂತಿಮ ದಿನಾಂಕದೊಳಗೆ ಒಟ್ಟು 54 ಸ್ವಯಂ ಸೇವಾ ಸಂಸ್ಥೆಗಳಿಂದ ಪ್ರಸ್ತಾವನೆಗಳು ಸ್ವೀಕೃತಗೊಂಡಿರುತ್ತವೆ ಎಂದು ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಕುಮಾರ ರಾಠೋಡ್ ಅವರು ಸಭೆಯಲ್ಲಿ ತಿಳಿಸಿದರು.
ಹಿಂದಿನ ಸಭೆಯಲ್ಲಿ ನಿರ್ಣಯಿಸಿದಂತೆ ತಾಲ್ಲೂಕು ಮಟ್ಟದಲ್ಲಿ 07 ಸದಸ್ಯರ ಸಮಿತಿ ರಚಿಸಿದ್ದು, ಅದರಂತೆ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ, ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ನಡುವಳಿಗಳನ್ನು ಸಲ್ಲಿಸಿರುವುದಾಗಿ ಹಾಗೂ ತಾಲ್ಲೂಕು ಸಮಿತಿಯಲ್ಲಿ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಕೂಡ ಸದಸ್ಯರಿದ್ದು, ಆದರೆ ಅವರ ರುಜು ಇರುವುದಿಲ್ಲವೆಂದು ಸಭೆಯ ಗಮನಕ್ಕೆ ತರಲಾಯಿತು. ಆಗ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಕಲಬುರಗಿ ರವರು ಸಾಂತ್ವನ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರದ ಮಾನದಂಡಗಳ ಪ್ರಕಾರ ಪ್ರಸ್ತಾವನೆಗಳನ್ನು ಪರಿಶೀಲಿಸಿ ಅರ್ಹ ಸಂಸ್ಥೆಗಳನ್ನು ಆಯ್ಕೆಮಾಡಲು ಹಾಗೂ ತಾಲ್ಲೂಕ ಮಟ್ಟದಲ್ಲಿ ತಹಸೀಲ್ದಾರರ ಅಧ್ಯಕ್ಷತೆಯ ಉಪ ಸಮಿತಿಯ ಸದಸ್ಯರು ಸ್ವಯಂ ಸೇವಾ ಸಂಸ್ಥೆಗಳಿಗೆ ಭೇಟಿನೀಡಿ ಸಂಸ್ಥೆಯಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿ 03 ದಿನದೊಳಗೆ ವರದಿ ಸಲ್ಲಿಸಲು ಮಾನ್ಯ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಸೂಚಿಸಿದರು
ತಾಲ್ಲೂಕ ಮಟ್ಟದ ಸಮಿತಿಯಲ್ಲಿನ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಇವರ ಅನುಮೋದನೆ ಹಾಗೂ ರುಜು ಪಡೆಯಲು, ಅದೇರೀತಿಯಾಗಿ ತಾಲ್ಲೂಕಾ ಕಾನೂನು ಸೇವಾ ಪ್ರಾಧಿಕಾರ ಇಲ್ಲದ ತಾಲ್ಲೂಕುಗಳಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು, ಕಲಬುರಗಿ ರವರ ಅನುಮೋದನೆ ಪಡೆದು ವರದಿ ಸಲ್ಲಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಅದೇರೀತಿಯಾಗಿ, ಕಲಬುರಗಿ ಜಿಲ್ಲೆಯ 09 ಶಿಶು ಅಭಿವೃದ್ಧಿ ಯೋಜನೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಹುದ್ದೆಗಳಿಗೆ ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ತಾತ್ಕಾಲಿಕ ಮತ್ತು ಅಂತಿಮ ಆಯ್ಕೆಗೆ ಬಾಕಿ ಇರುವ ಅಂಗನವಾಡಿ ಸಹಾಯಕಿಯರ ಆಯ್ಕೆಗೆ ಸಂಬಂಧಿಸಿದಂತೆ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕಡದೊಂದಿಗೆ ಮಾಹಿತಿ ಒದಗಿಸಿದ್ದು, ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ತಾತ್ಕಾಲಿಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕ್ಷೇಪಣೆಗಳನ್ನು ಹಾಗೂ ದಾಖಲೆಗಳನ್ನು ಪರಿಶೀಲಿಸಿ ಆಯ್ಕೆಗೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಅಧ್ಯಕ್ಷತೆ ವಹಿಸಿದ್ದು, ಸಮಿತಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಶ್ರೀ ಲಕ್ಷ್ಮಣ ಶೃಂಗೇರಿ, ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಸಮಾಜ ಕಲ್ಯಾಣ ಇಲಾಖೆ, ಕಲಬುರಗಿ, ಉಪ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕಿ ಶಂಕ್ರಮ್ಮ ಡವಳಗಿ, , ಜಿಲ್ಲಾ ನಿರೂಪಣಾಧಿಕಾರಿ ಶ್ರೀ ಮುರುಗೇಶ ಗುಣಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಶ್ರೀ ಶಿವಶರಣಪ್ಪ , ಪೋಲಿಸ್ ಅಧಿಕಾರಿಗಳು, ಕಲಬುರಗಿ ಸಮಿತಿ ಇತರ ಸದಸ್ಯರು ಹಾಗೂ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಜರಿದ್ದರು.