ಬೆಂಗಳೂರು,ಅ.೧೫-ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದ ಬೆನ್ನಲ್ಲೆ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತವರ ಕುಟುಂಬದವರ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ನಗರದ ಸದಾಶಿವನಗದ ಮನೆ ಕಚೇರಿ,ಕಲಬುರಗಿಯ ಕಚೇರಿ ಮನೆ ಹಾಗೂ ಅವರ ಕುಟುಂಬದವರಿಗೆ ನೀಡುತ್ತಿರುವ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಸದಾಶಿವನಗದ ಮನೆ ಕಚೇರಿ,ಕಲಬುರಗಿಯ ಕಚೇರಿ ಮನೆಗೆ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಿ ಹಿರಿಯ ಪೊಲೀಸ್ ಅಧಿಕಾರಿಗಳು ತೀವ್ರ ನಿಗಾವಹಿಸಿದ್ದಾರೆ.
ಇದಲ್ಲದೇ ಸಚಿವ ಪ್ರಿಯಾಂಕಾ ಖರ್ಗೆ ಅವರು ಕೈಗೊಳ್ಳುವ ಪ್ರವಾಸ ನಡೆಸುವ ಸಭೆ ಪಾಲ್ಗೊಳ್ಳಲಿರುವ ಕಾರ್ಯಕ್ರಮಗಳಿಗೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಬೆದರಿಕೆ ಕರೆಗಳ ಸಂಬಂಧ ಎಕ್ಸ್ ಪೋಸ್ಟ್ ಮಾಡಿದ್ದ ಸಚಿವ ಪ್ರಿಯಾಂಕಾ ಖರ್ಗೆ ಅವರು, ಕಳೆದ ಎರಡು ದಿನಗಳಿಂದ ತನ್ನ ಮೊಬೈಲ್ ನಿರಂತರವಾಗಿ ರಿಂಗಣಿಸುತ್ತಿದೆ. ಕರೆಗಳು ಬೆದರಿಕೆಗಳಿಂದ ಕೂಡಿದೆ. ತನ್ನನ್ನು ಹಾಗೂ ತನ್ನ ಕುಟುಂಬವನ್ನು ಹೆದರಿಸುವ, ಅವಾಚ್ಯ ಶಬ್ದಗಳಿಂದ ನಿಂದಿಸುವ ಕೆಲಸ ನಡೆಯುತ್ತಿದೆ. ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಿಸುವಂತೆ ಪತ್ರ ಬರೆದಿದ್ದಕ್ಕೆ ಬೆದರಿಕೆಗಳ ಕರೆಗಳು ಬರುತ್ತಿವೆ ಎಂದು ತಿಳಿಸಿದ್ದರು.
ನಾನು ಇದರಿಂದ ವಿಚಲಿತನಾಗಿಲ್ಲ. ಅಚ್ಚರಿಗೂ ಒಳಗಾಗಿಲ್ಲ. ಆರ್‌ಎಸ್‌ಎಸ್ ಮಹಾತ್ಮ ಗಾಂಧಿ ಅಥವಾ ಅಂಬೇಡ್ಕರ್‌ರನ್ನೇ ಬಿಟ್ಟಿಲ್ಲ, ಇನ್ನು ನನ್ನನ್ನು ಬಿಡುತ್ತಾರಾ. ಒಂದು ವೇಳೆ ಅವರು ವೈಯ್ಯಕ್ತಿಕ ನಿಂದನೆ ಮತ್ತು ಬೆದರಿಕೆಗಳಿಂದ ನನ್ನನ್ನು ಮೌನವಾಗಿಸಬಹುದು ಎಂದು ತಿಳಿದುಕೊಂಡಿದ್ದರೆ ಅದು ಅವರ ತಪ್ಪು ಗ್ರಹಿಕೆಯಾಗಿದೆ. ಇದು ಕೇವಲ ಆರಂಭವಾಗಿದೆ ಎಂದು ಹೇಳಿದ್ದಾರೆ.
ಬುದ್ಧ, ಬಸವಣ್ಣ, ಬಾಬಸಾಹೇಬ್ ತತ್ವ ಸಿದ್ಧಾಂತಗಳ ಮೇಲೆ ಸಮಾಜ ನಿರ್ಮಿಸುವ ಸಮಯ ಬಂದಿದೆ. ಅತ್ಯಂತ ಅಪಾಯಕಾರಿ ಆರ್‌ಎಸ್‌ಎಸ್ ನಿಂದ ದೇಶವನ್ನು ಶುದ್ಧೀಕರಿಸುವಂತೆ ಕರೆ ನೀಡಿದ್ದಾರೆ.
ವಿಡಿಯೋ ಬಿಡುಗಡೆ
ಆರ್ ಆರ್ ಎಸ್ ಚಟುವಟಿಕೆ ನಿಷೇಧಕ್ಕೆ ಪತ್ರ ಬರೆದ ಬಳಿಕ ತಮಗೆ ಬೆದರಿಕೆ ಕರೆಗಳು ಬಂದಿರುವ ವಿಷಯವನ್ನು ಸಚಿವ ಪ್ರಿಯಾಂಕ್ ಖರ್ಗೆ ಬಹಿರಂಗಪಡಿಸಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಬಹಳ ಕೆಟ್ಟದ್ದಾಗಿ ಬೈದಿರುವ ಈ ಬಗ್ಗೆ ದಾಖಲೆ ನೀಡುವಂತೆ ಬಿಜೆಪಿ ಕೇಳಿದರೂ ಈಗ ಆರ್ ಆರ್ ಎಸ್ ಸಂಸ್ಕೃತಿ ತೋರಿಸುವಂತಹ ಎಡಿಟ್ ಆಗದ ೨೦ ವಿಡಿಯೋ ಬಿಡುಗಡೆ ಮಾಡಿದ್ದೇನೆ. ಇನ್ನು ಕೆಟ್ಟದ್ದಾಗಿ ಬೈದಿರುವ ವಿಡಿಯೋಗಳಿವೆ. ನನ್ನ ಮರ್ಯಾದೆ ಉಳಿಸಿಕೊಳ್ಳಲು ಆ ವಿಡಿಯೋಗಳನ್ನು ಬಿಡುಗಡೆ ಮಾಡಿಲ್ಲ ಎಂದರು.
ಈ ಬಗ್ಗೆ ದೂರು ಕೊಡುವ ಕುರಿತು ಚರ್ಚೆ ನಡೆಸಿ, ಗೃಹ ಸಚಿವ ಪರಮೇಶ್ವರ್ ಅವರ ಜೊತೆಗೆ ಸಮಾಲೋಚನೆ ನಡೆಸುತ್ತೇನೆ. ದೂರು ಕೊಡುವುದು ಸುಲಭ. ಆದರೆ ಆ ವ್ಯಕ್ತಿಗೆ ಶಿಕ್ಷೆಯಾಗುತ್ತದೆ. ಆ ಮನಸ್ಥಿತಿ ತುಂಬಿದ ಆರ್ ಆರ್‌ಎಸ್ ಗೆ ಏನು ಶಿಕ್ಷೆ? ಸದ್ಯಕ್ಕೆ ತಮ್ಮ ಫೋನ್ ಸ್ವಿಚ್ ಮಾಡಿದ್ದೇನೆ. ಆದರೆ ಅದೇ ಪರಿಹಾರವಲ್ಲ ಎಂದು ಹೇಳಿದರು.
ತನಿಖೆಗೆ ಪರಂ ಸೂಚನೆ
ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಈ ವಿಚಾರವಾಗಿ ಪರಮೇಶ್ವರ ಬೆದರಿಕೆ ಕರೆ ಹಾಕುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಈ ಕುರಿತು ತನಿಖೆಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಬೆಂಗಳೂರಲ್ಲಿ ಈ ಕುರಿತು ಮಾತನಾಡಿದ ಅವರು ಪ್ರಿಯಾಂಕ್ ಖರ್ಗೆ ಬೆದರಿಕೆಗೆ ಪರಮೇಶ್ವರ್ ಸೂಚನೆ ನೀಡಿದ್ದು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಯಾರು ಬೆದರಿಕೆ ಹಾಕಿದ್ದಾರೆ ಎಲ್ಲಿಂದ ಬೆದರಿಕೆ ಬಂದಿದೆ ಎನ್ನುವುದರ ಕುರಿತು ಎಲ್ಲವನ್ನು ತನಿಖೆ ಮಾಡುತ್ತೇವೆ. ಒಬ್ಬ ಸಚಿವರು ತಮ್ಮ ಅಭಿಪ್ರಾಯ ಹೇಳಿರಬಹುದು. ಆದರೆ ಸರ್ಕಾರದ ತೀರ್ಮಾನ ಆಗೋದೇ ಬೇರೆ. ಹಾಗಾಗಿ ಸಚಿವರಿಗೆ ಬೆದರಿಕೆ ಹಾಕುವುದು ಸರಿಯಲ್ಲ ಅದಕ್ಕೆ ಏನು ಕ್ರಮ ಕೈಗೊಳ್ಳಬೇಕು ತೆಗೆದುಕೊಳ್ಳುತ್ತೇವೆ ಎಂದರು.
ಪ್ರಿಯಾಂಕ್ ಖರ್ಗೆ ಅವರಿಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಇಂದು ಟ್ವೀಟ್ ನಲ್ಲಿ ವಿಡಿಯೋ ಸಹ ರಿಲೀಸ್ ಮಾಡಿದ್ದಾರೆ.


























